ಸಿ.ಎಂ.ವಾಚ್ ಚರ್ಚೆ ನಡೆಸುವ ವಸ್ತುವೇ ಅಲ್ಲ
ನಿಲುವಳಿ ಸೂಚನೆ ಕುರಿತ ಪತ್ರಕ್ಕೆ ಸಹಿ ಮಾಡಲು ನಿರಾಕರಿಸಿದ ಎಚ್.ಡಿ. ರೇವಣ್ಣ, ಜೆ.ಡಿ.ಎಸ್ ಗೆ ಮುಖಭಂಗ

ಬೆಂಗಳೂರು.ಮಾ.2: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುಬಾರಿ ವಾಚ್ ಪ್ರಕರಣದ ಬಗ್ಗೆ ದೇಶ–ವಿದೇಶಗಳಲ್ಲಿ ಚರ್ಚೆಯಾಗುತಿದೆ. ಆದರೆ ಪ್ರಕರಣವನ್ನು ಹೊರಗೆಳೆದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರ ಸಹೋದರ ಎಚ್.ಡಿ. ರೇವಣ್ಣ ಅವರಿಗೆ ಮಾತ್ರ ಇದೊಂದು ಚರ್ಚೆಗೆ ಯೋಗ್ಯವಾದ ವಿಚಾರವೇ ಅಲ್ಲ. ಹೌದು ಅಂತಹ ಕುತೂಲಹ ಸಂಗತಿಯೊಂದು ಬಯಲಾಗಿದೆ.
ಸಿದ್ದರಾಮಯ್ಯ ಅವರ ದುಬಾರಿ ವಾಚ್ ಪ್ರಕರಣದ ಬಗ್ಗೆ ನಿಲುವಳಿ ಸೂಚನೆಯಡಿ ಚರ್ಚೆ ನಡೆಸಲು ಆಸಕ್ತರಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರ ಮಹತ್ವಾಂಕ್ಷೆಗೆ ಅವರ ಸಹೋದರ ಎಚ್.ಡಿ. ರೇವಣ್ಣ ತಣ್ಣೀರೆರಚಿದ್ದ ಪ್ರಸಂಗ ಬೆಳಕಿಗೆ ಬಂದಿದೆ.
ನಿಲುವಳಿ ಸೂಚನೆಯ ಪ್ರಸ್ತಾವವನ್ನು ಸಭಾಧ್ಯಕ್ಷರಿಗೆ ರವಾನಿಸಲು ಸಿದ್ಧಪಡಿಸಲಾಗಿದ್ದ ಪತ್ರಕ್ಕೆ ರೇವಣ್ಣ ಸಹಿ ಮಾಡದೇ, “ಇದು ಚರ್ಚೆ ನಡೆಸುವ ವಸ್ತುವೇ ಅಲ್ಲ. ಯಾರೋ ಉಡುಗೊರೆ ಕೊಟ್ಟರು. ಇನ್ಯಾರೋ ಅದನ್ನು ಪಡೆದರು. ಈ ಬಗ್ಗೆ ನಿಲುವಳಿ ಸೂಚನೆಯಡಿ ಚರ್ಚೆ ನಡೆಸಬೇಕೆ. ನಾನು ಇದಕ್ಕೆ ಸಹಿ ಮಾಡುವುದಿಲ್ಲ” ಎಂದು ನಿರಾಕರಿಸಿದರು ಎನ್ನಲಾಗಿದೆ.
ಜೆಡಿಎಸ್ ಮೂಲಗಳ ಪ್ರಕಾರ ವಾಚ್ ಪ್ರಕರಣದಲ್ಲಿ ರೇವಣ್ಣ ಮತ್ತು ಕುಮಾರ ಸ್ವಾಮಿ ನಡುವೆ ಸಹಮತವಿಲ್ಲ. ರೇವಣ್ಣ ಅವರ ನಿರಾಸಕ್ತಿಯ ಕಾರಣದಿಂದಾಗಿಯೇ ಪ್ರಕರಣವನ್ನು ಬೆಳಕಿಗೆ ತಂದ ಕುಮಾರ ಸ್ವಾಮಿ ಚರ್ಚೆ ನಡೆಸಲು ಆಸಕ್ತಿ ತೋರಲಿಲ್ಲ.
ತಾವು ಬಹಿರಂಗಪಡಿಸಿದ ಪ್ರಕರಣವನ್ನು ಬಿಜೆಪಿಯವರು ಹೈಜಾಕ್ ಮಾಡಿ ಚರ್ಚೆ ನಡೆಸುತ್ತಿರುವುದನ್ನು ನೋಡಿ ಕುಮಾರ ಸ್ವಾಮಿ ಒಳಗೊಳಗೇ ನಗುತ್ತಿದ್ದರು. ಅಷ್ಟೇಕೆ ಈ ಬಗ್ಗೆ ಮೇಲ್ಮನೆಯಲ್ಲೂ ಜೆಡಿಎ್ ಸದಸ್ಯರ್ಯಾರು ಚಕಾರ ಎತ್ತಲಿಲ್ಲ.
ಮೊದಲ ದಿನ ಬಿಜೆಪಿಯವರು ವಾಚ್ ಪ್ರಕರಣದ ಬಗ್ಗೆ ಚರ್ಚೆ ಆರಂಭಿಸುತ್ತಿದ್ದಂತೆ ರೇವಣ್ಣ ಸದನದಿಂದ ಹೊರ ನಡೆದರು. ಯಾರಾದರೂ ತಮ್ಮನ್ನು ಈ ವಿಚಾರದ ಬಗ್ಗೆ ಪ್ರಶ್ನಿಸಿ ಕೇಣಕಿದರೆ ಏನೆಂದು ಉತ್ತರ ಹೇಳುವುದು ಎನ್ನುವ ಆತಂಕೂ ರೇವಣ್ಣ ಅವರಿಗಿತ್ತು ಎನ್ನಲಾಗಿದೆ.
ಮೂಲಗಳ ಪ್ರಕಾರ, ರೇವಣ್ಣ ಅವರಿಗೆ ಇದೀಗ ಸಿದ್ದರಾಮಯ್ಯ ಅವರನ್ನು ಎದುರು ಹಾಕಿಕೊಳ್ಳುವ ಮನಸ್ಸಿಲ್ಲ. ಇಬ್ಬರ ಬಾಂಧವ್ಯ ಅತ್ಯಂತ ಸುಮಧುರವಾಗಿರುವುದು ಬೇರೆ ವಿಚಾರ. ಇದೀಗ ಹಾಸನ ಜಿಲ್ಲಾ ಪಂಚಾಯತ್‌ನಲ್ಲಿ ತಮ್ಮ ಪತ್ನಿ ಭವಾನಿ ರೇವಣ್ಣ ಗೆಲುವು ಸಾಧಿಸಿದ್ದು, ಅವರನ್ನು ಹೇಗಾದರೂ ಮಾಡಿ ಜಿಲ್ಲಾ ಪಂಚಾಯತ್ ಅಧ್ಯಕ್ಷರನ್ನಾಗಿ ನೇಮಿಸುವ ಗುರಿಯೂ ಇದೆ.
ಹೀಗಾಗಿ ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ನಿಗದಿಪಡಿಸಿಕೊಳ್ಳಬೇಕಾಗಿದೆ. ಈ ಹುದ್ದೆ ಐದು ವರ್ಷಗಳ ಅವಧಿವರೆಗೆ ಇರಲಿದ್ದು, ಇದಕ್ಕಾಗಿ ಪ್ರಯತ್ನ ಮುಂದುವರೆಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಅವರೊಂದಿಗೆ ಒಮ್ಮೆ ಸಮಾಲೋಚನೆಯನ್ನೂ ಸಹ ನಡೆಸಿದ್ದಾರೆ. ಮುಖ್ಯಮಂತ್ರಿ ಅವರಿಂದ ಸಕಾರಾತ್ಮಕ ಸ್ಪಂದನೆಯೂ ಸಹ ದೊರೆತಿೆ ಎಂದು ಇದೇ ಮೂಲಗಳು ಹೇಳಿವೆ.
ಈ ಮೂಲಕ ಸಂಕಷ್ಟ ಸಂದರ್ಭದಲ್ಲಿ ರೇವಣ್ಣ ಅವರ ಸಹಾಯ ಪಡೆಯುವುದು ಸಿದ್ದರಾಮಯ್ಯ ಅವರ ಉದ್ದೇಶವಾಗಿದೆ. ಹೀಗಾಗಿ ಹಾಸನ ಜಿಲ್ಲಾ ಪಂಚಾಯತ್‌ನಲ್ಲಿ ರೇವಣ್ಣ ಅವರಿಗೆ ಅನುಕೂಲಕರವಾಗುವಂತೆ ಮೀಸಲಾತಿ ನಿಗದಿ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಹೀಗಾಗಿ ರೇವಣ್ಣ ವಾಚ್ ಪ್ರಕರಣವನ್ನು ಪ್ರಸ್ತಾಪಿಸಿ ಮುಜುಗರವುಂಟು ಮಾಡಲು ರೇವಣ್ಣ ಬಯಸಲಿಲ್ಲ ಎಂದು ಇದೇ ಮೂಲಗಳು ಹೇಳಿವೆ.







