ಬೆಂಗಳೂರು ಸ್ಫೋಟ ಪ್ರಕರಣಕ್ಕೆ ಅಡ್ವೋಕೇಟ್ ಸದಾಶಿವ ಮೂರ್ತಿ ಸ್ಪೆಶಲ್ ಪ್ರಾಸಿಕ್ಯೂಟರ್

ಬೆಂಗಳೂರು, ಮಾರ್ಚ್.2; ಬೆಂಗಳೂರು ಸ್ಫೋಟ ಪ್ರಕರಣದ ಹೊಸ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಕರ್ನಾಟಕ ಸರಕಾರ ಅಡ್ವೊಕೇಟ್ ಸದಾಶಿವ ಮೂರ್ತಿಯವರನ್ನು ನೇಮಿಸಿದೆ. ಪ್ರಕರಣದಲ್ಲಿ ಅತೃಪ್ತಿ ಪ್ರಕಟಿಸಿ ಹಿಂದಿನ ಪ್ರಾಸಿಕ್ಯೂಟರ್ ಸಿ.ಸೀತಾರಾಂ ರಾಜಿನಾಮೆ ಇತ್ತ ಸ್ಥಾನಕ್ಕೆ ಮೂರ್ತಿಯನ್ನು ಹೊಸದಾಗಿ ನೇಮಿಸಲಾಗಿದೆ. ಕರ್ನಾಟಕ ಸರಕಾರದ ಡೈರೆಕ್ಟರ್ ಆಫ್ ಪ್ರಾಸಿಕ್ಯೂಶನ್ ಆಗಿ ಮೂರ್ತಿ ಈ ಹಿಂದೆ ಸೇವೆ ಸಲ್ಲಿಸಿದ್ದರು.
ಸ್ಫೋಟ ಪ್ರಕರಣದಲ್ಲಿ ವಿಚಾರಣೆ ವಿಳಂಬಗೊಳ್ಳುತ್ತಿರುವುದರ ವಿರುದ್ಧ ಪಿ.ಡಿ.ಪಿ. ಅಧ್ಯಕ್ಷ ಅಬ್ದುನ್ನಾಸರ್ ಮಅದನಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಪ್ರಕರಣದ ವಿಚಾರಣೆ ಯಾವತ್ತು ಕೊನೆಗೊಳ್ಳಲಿದೆ ಎಂದು ತಿಳಿಸಲು ಬೆಂಗಳೂರಿನ ಎನ್.ಐ.ಎ.ಕೋರ್ಟ್‌ನ್ನು ಕೇಳಿತ್ತು. ಇದಾದ ನಂತರ ಪ್ರಾಸಿಕ್ಯೂಟರ್ ಸೀತಾರಾಂ ರಾಜಿನಾಮೆ ಕೊಟ್ಟಿದ್ದರು.
2008 ಜುಲೈ 25ಕ್ಕೆ ಬೆಂಗಳೂರಿನಲ್ಲಿ ಸರಣಿ ಸ್ಫೋಟ ನಡೆದಿತ್ತು. ಇದಕ್ಕೆ ಸಂಬಂಧಿಸಿದ ರಾಜ್ಯದ ಒಂಬತ್ತು ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ. 32 ಆರೋಪಿಗಳು ಮತ್ತು ಮುನ್ನೂರು ಸಾಕ್ಷಿಗಳಿದ್ದು ಸಾಕ್ಷಿಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ವಿಚಾರಣೆ ನಡೆಸಬೇಕೆಂದು 31ನೆ ಆರೋಪಿಯಾದ ಮಅದನಿ ಆಗ್ರಹಿಸಿದ್ದಾರೆ. ಆದರೆ ಮಅದನಿಯ ವಿನಂತಿಯನ್ನು ಬೆಂಗಳೂರಿನ ಎನ್‌ಐಎ ನ್ಯಾಯಾಲಯ ತಳ್ಳಿಹಾಕಿದೆ.





