ಬರಹದ ಪ್ರಸ್ತುತತೆ ಹೆಚ್ಚಾಗುವುದು ಜೀವಂತಿಕೆಯ ಲಕ್ಷಣ : ಡಾ ಸುಮಿತ್ರಾ

ಸುಳ್ಯ : ಪ್ರತಿ ಕಾಲಕ್ಕೂ ಬರಹದ ಪ್ರಸ್ತುತತೆ ಹೆಚ್ಚಾಗುವುದು, ಕೃತಿಯ ಜೀವಂತ ಲಕ್ಷಣವೂ ಹೌದು. ಕುವೆಂಪು, ಕಾರಂತರ ವಿಚಾರೆಧಾರೆಗಳು ಆ ದಿಸೆಯಲ್ಲಿ ಗುರುತಿಸಿಕೊಂಡಿದೆ ಎಂದು ಕವಯತ್ರಿ ಡಾ.ಎಲ್.ಸಿ ಸುಮಿತ್ರಾ ಹೇಳಿದರು.
ಅವರು ಪೆರುವಾಜೆ ಡಾ.ಶಿವರಾಮ ಕಾರಂತ ಪದವಿ ಕಾಲೇಜಿನಲ್ಲಿ ನಡೆದ ಶಿವರಾಮ ಕಾರಂತರ ಸಾಹಿತ್ಯಾವಲೋಕನ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಇಂದು ಎಲೆಕ್ಟ್ರಾನಿಕ್ ಮಾಧ್ಯಮಗಳು ಪ್ರಬಲವಾಗಿದೆ. ಕೃತಿ ಬಿಡುಗಡೆಗೊಳ್ಳುವ ಮೊದಲು ಅವು ಎಡವೂ, ಬಲ ಪಂಥವೂ ಎಂಬ ನಿರ್ಧಾರ ಆಗಿಬಿಡುತ್ತದೆ. ಹಾಗಾಗಿ ಕೃತಿಯೊಳಗಿನ ವಿಚಾರೆಧಾರೆಗಳು ಚರ್ಚೆಯ, ವಿಮೆರ್ಶೆಯ ವಸ್ತುವಾಗದೆ, ಮೇಲ್ನೋಟಕ್ಕೆ ಎಲ್ಲವೂ ನಿರ್ಧರಿತವಾಗುವುದು ಅಪಾಯದ ಲಕ್ಷಣ ಎಂದ ಅವರು, ಕಾರಂತರ ಕೃತಿಗಳು ಅವೆಲ್ಲವನ್ನು ಮೀರಿ ನಿಂತಿದೆ. ಓದುಗನೊಬ್ಬ ಅದರೊಳಗೆ ಪ್ರವೇಶಿಸಿ, ತೀರ್ಮಾನಿಸಬೇಕೆಂಬ ಭಾವ ಉಂಟು ಮಾಡುವ ಸಾಧ್ಯತೆ, ಸಾಮರ್ಥ್ಯ ಆ ಕೃತಿಯಲ್ಲಿರುವುದು ಅದರ ಜೀವಂತಿಕೆಗೆ ಕಾರಣ ಎಂದು ಅವರು ಹೇಳಿದರು.
ಮಂಗಳೂರು ವಿ.ವಿ ಕುಲಸಚಿವ ಟಿ.ಡಿ. ಕೆಂಪರಾಜು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪ್ರಾಂಶುಪಾಲ ಚಂದ್ರಶೇಖರ ಕಾಂತಮಂಗಲ ಉಪಸ್ಥಿತರಿದ್ದರು. ಡಾ.ಶಿವರಾಮ ಕಾರಂತ ಪೀಠ ನಿರ್ದೇಶಕಿ ಡಾ.ಸಬಿಹಾ ಪ್ರಸ್ತಾವನೆಗೈದು, ಕನ್ನಡ ವಿಭಾಗದ ಮುಖ್ಯಸ್ಥ ಡಾ.ನರೇಂದ್ರ ರೈ ದೇರ್ಲ ಸ್ವಾಗತಿಸಿದರು. ಅರ್ಥಶಾಸ್ತ್ರ ಉಪನ್ಯಾಸಕ ರಮೇಶ್ಚಂದ್ರ ವಂದಿಸಿದರರು. ಉಪನ್ಯಾಸಕ ಕಿರಣ್ ನಿರೂಪಿಸಿದರು. ಬಳಿಕ ಡಾ. ರೇಖಾ ಬನ್ನಾಡಿ, ಡಾ.ಶೈಲಾ ಯು, ಡಾ.ಪೂವಪ್ಪ ಕಣಿಯೂರು ಹಾಗೂ ಡಾ. ಐವನ್ ಪ್ರಾನ್ಸಿಸ್ ಲೋಬೋ ಸಾಹಿತ್ಯಾವಲೋಕನ ಮಾಡಿದರು.







