ಪೀಟರ್ ಕೊಲೆ ಪ್ರಕರಣ: ನಾಲ್ವರು ಆರೋಪಿಗಳು ಬೆಳ್ತಂಗಡಿ ಠಾಣೆಗೆ ಬಂದು ಶರಣು
ಬೆಳ್ತಂಗಡಿ: ಕಕ್ಕಿಂಜೆ ಸಮೀಪ ತೋಟತ್ತಾಡಿಯಲ್ಲಿ ನಡೆದ ಪೀಟರ್ ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳು ಬೆಳ್ತಂಗಡಿ ಠಾಣೆಗೆ ಬಂದು ಶರಣಾಗಿದ್ದಾರೆ. ಇವರ ಬಂಧನವಾಗುವುದರೊಂದಿಗೆ ಕೊಲೆ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ ಏಳಕ್ಕೇರಿದೆ.
ಇದೀಗ ಬಂಧಿತ ಆರೋಪಿಗಳು ತೋಟತ್ತಾಡಿ ಗ್ರಾಮದ ನಿವಾಸಿಗಳಾದ ಅನೀಶ್ ಫಿಲಿಫ್, ಒ.ಡಿ ಟೋಮಿ, ಎಂ.ಟಿ.ಫ್ರಾನ್ಸೀಸ್, ಎಂ ಟಿ ತೋಮಸ್ ಎಂಬವರಾಗಿದ್ದಾರೆ. ಬಂಧಿತ ಆರೋಪಿಗಳನ್ನು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಕೊಲೆ ಪ್ರಕರಣದ ತನಿಖೆಯನ್ನು ಪೋಲೀಸರು ಚುರುಕುಗೊಳಿಸಿದ್ದು ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿಗಳಿಗಾಗಿ ಹುಡುಕಾಟ ತೀವ್ರಗೊಳಿಸಿದ್ದಾರೆ. ಅಡಿಕೆ ಕಳ್ಳತನದ ಆರೋಪಿ ಪಿಟರ್‌ನನ್ನು ನೂರಾರು ಸಂಖ್ಯೆಯಲ್ಲಿ ಸೇರಿದ್ದ ಜನ ಥಳಿಸಿ ಕೊಂದಿದ್ದರು. ಕೊಲೆಯ ಬಳಿಕ ಇಡೀ ಗ್ರಾಮದ ಜನರು ತಲೆ ಮರೆಸಿಕೊಂಡು ಊರು ಬಿಟ್ಟು ಹೋಗುವಂತಹ ವಾತಾವರಣ ನಿರ್ಮಾಣವಾಗಿತ್ತು. ಆದರೆ ಇದೀಗ ಪೋಲೀಸರ ಹಾಗೂ ಜನರ ಒತ್ತಡ ಹೆಚ್ಚಾದ ಹಿನ್ನಲೆಯಲ್ಲಿ ಪ್ರಕರಣದ ಆರೋಪಿಗಳು ಪೋಲೀಸರ ಮುಂದೆ ಪ್ರತ್ಯಕ್ಷರಾಗಲಾರಂಭಿಸಿದ್ದಾರೆ. ಪೋಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಗ್ರಹಿಸಿರುವ ವೀಡಿಯೋತುಣುಕುಗಳು ಹಾಗೂ ಆಡಿಯೋ ತುಣುಕುಗಳನ್ನು ಪರಿಶೀಲಿಸಿ ಸುಮಾರು ಹತ್ತಕ್ಕೂ ಹೆಚ್ಚು ಮಂದಿಯನ್ನು ಪ್ರಮುಖ ಆರೋಪಿಗಳೆಂದು ಗುರುತಿಸಿದ್ದಾರೆ. ಪ್ರಕರಣದಲ್ಲಿ ಇನ್ನೂ ನಾಲ್ಕೈದು ಮಂದಿ ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿರುವುದಾಗಿ ತಿಳಿದು ಬಂದಿದ್ದು ಒಂದೆರಡು ದಿನಗಳಲ್ಲಿ ಅವರನ್ನು ಬಂಧಿಸುವ ವಿಶ್ವಾಸವನ್ನು ಪೋಲೀಸರು ವ್ಯಕ್ತ ಪಡಿಸುತ್ತಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳು ತಲೆ ಮರೆಸಿಕೊಂಡಿದ್ದು ಅವರನ್ನು ಬಂಧಿಸಲು ಪೋಲೀಸರು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.





