ಮಂಗಳೂರು: ಕೂಳೂರು ಬಳಿ ಕೊಲೆಗೆ ಸಂಚು:ಇಬ್ಬರ ಬಂಧನ

ಮಂಗಳೂರು,ಮಾ.2:ಮಂಗಳೂರು ನಗರದ ಕೂಳೂರು ರಿಲಯನ್ಸ್ ಪೆಟ್ರೋಲ್ ಪಂಪ್ ಬಳಿಯಲ್ಲಿ ವ್ಯಕ್ತಿಯೊಬ್ಬನ ಕೊಲೆಗೆ ಸಂಚು ರೂಪಿಸಿದ 2 ಮಂದಿಯನ್ನ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ನಗರದ ಕಾವೂರಿನ ಶಾಂತಿನಗರ ನಿವಾಸಿಗಳಾದ ಮೊಹಮ್ಮದ್ ಅಮೀನ್ (21), ಅಬ್ದುಲ್ ಹಕೀಂ(26) ಎಂದು ಗುರುತಿಸಲಾಗಿದೆ.
ಬಂಧಿತರಿಂದ 3 ತಲವಾರು 2 ಮೊಬೈಲ್ ಪೋನ್ ಹಾಗೂ ಮಾರುತಿ ಸ್ವಿಪ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಮಾರ್ಚ್ 1 ರಂದು ಸಂಜೆ ಮಂಗಳೂರು ನಗರದ ರಿಲ್ಗಾಯನ್ಸ್ ಪೆಟ್ರೋಲ್ ಪಂಪ್ ಬಳಿಯಲ್ಲಿ ಈ ಹಿಂದೆ ಕೊಲೆ ಪ್ರಕರಣದಲ್ಲಿ ಭಾಗಿಯಾದ ವ್ಯಕ್ತಿಯೊಬ್ಬನ ಕೊಲೆಗೆ ಸಂಚು ರೂಪಿಸುತ್ತಿದ್ದ ಬಗ್ಗೆ ಮಂಗಳೂರು ಸಿಸಿಬಿ ನಿರೀಕ್ಷಕರಿಗೆ ದೊರೆತ ಖಚಿತ ಮಾಹಿತಿಯಂತೆ ಸಿಸಿಬಿ ಪೊಲೀಸ್ ನಿರೀಕ್ಷಕರು ಮತ್ತು ಸಿಬ್ಬಂದಿಯವರು ಇಬ್ಬರನ್ನು ಬಂಧಿಸಿದ್ದಾರೆ.
ಆರೋಪಿಗಳ ಪೈಕಿ ಅಬ್ದುಲ್ ಹಕೀಂ ಎಂಬಾತನು ಈ ಹಿಂದೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿ ತೊಕ್ಕೊಟ್ಟು ಹಿಂದೂಸ್ಥಾನ ಭಾವ ಬಿಲ್ಡರ್ ಕಛೇರಿಯಲ್ಲಿ ಹಫ್ತಾ ಹಣ ನೀಡದಕ್ಕೆ ಇತರ 2-3 ಆರೋಪಿಗಳೊಂದಿಗೆ ಸೇರಿ ಕಛೇರಿಯನ್ನು ಧ್ವಂಸ ಮಾಡಿದ ಪ್ರಕರಣ ಹಾಗೂ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದನು. ಮೊಹಮ್ಮದ್ ಅಮೀನ್ ಎಂಬಾತನ ಮೇಲೆ ಈ ಹಿಂದೆ ಕಾವೂರು ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣವೊಂದು ದಾಖಲಾಗಿತ್ತು.ಸಿ.ಸಿ.ಬಿ ಘಟಕದ ಇನ್ಸಪೆಕ್ಟರ್ ವೆಲೆಂಟೈನ್ ಡಿಸೋಜ, ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಪತ್ತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.







