ಏಷ್ಯಾಕಪ್: ಬಾಂಗ್ಲಾ ಫೈನಲ್‌ಗೆ ,ಪಾಕ್ ಔಟ್
ಮಾ.6: ಪ್ರಶಸ್ತಿಯ ಸುತ್ತಿನಲ್ಲಿ ಭಾರತಕ್ಕೆ ಬಾಂಗ್ಲಾ ಎದುರಾಳಿ

ಮೀರ್ಪುರ,ಮಾ.2: ಏಷ್ಯಾಕಪ್‌ನ 8ನೆ ಪಂದ್ಯದಲ್ಲಿ ಬಾಂಗ್ಲಾ ದೇಶ ತಂಡ ಇಂದು ಪಾಕಿಸ್ತಾನ ವಿರುದ್ಧ 5 ವಿಕೆಟ್‌ಗಳ ರೋಚಕ ಜಯ ಗಳಿಸಿ ಫೈನಲ್ ಪ್ರವೇಶಿಸಿದೆ.
ಶೇರ್ ಬಾಂಗ್ಲಾ ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ 8ನೆ ಪಂದ್ಯದಲ್ಲಿ ಗೆಲುವಿಗೆ 130 ರನ್‌ಗಳ ಸವಾಲನ್ನು ಪಡೆದ ಬಾಂಗ್ಲಾ ತಂಡ 19.1 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿ ಗೆಲುವಿನ ದಡ ಸೇರಿತು. ಬಾಂಗ್ಲಾದ ಆರಂಭಿಕ ದಾಂಡಿಗ ಸೌಮ್ಯ ಸರ್ಕಾರ್ 48 ರನ್(48ಎ, 5ಬೌ,1ಸಿ) ,ಮಹಮ್ಮದುಲ್ಲಾ ಔಟಾಗದೆ 22ರನ್, ನಾಯಕ ಮುರ್ತಝ ಔಟಾಗದೆ 12 ರನ್, ಶಬ್ಬೀರ್ ರಹ್ಮಾನ್ 14 ರನ್ ಗಳಿಸಿದರು.
ಕೊನೆಯ ಎರಡು ಓವರ್‌ಗಳಲ್ಲಿ ಬಾಂಗ್ಲಾ ತಂಡ 18 ರನ್ ಮಾಡಬೇಕಿತ್ತು. ಮಹಮ್ಮದುಲ್ಲಾ ಮತ್ತು ನಾಯಕ ಮಶ್ರಾಫೆ ಮುರ್ತಾಝ ಅಗತ್ಯದ ರನ್ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. 19ನೆ ಓವರ್‌ನಲ್ಲಿ ಮುಹಮ್ಮದ್ ಶಮಿ 15 ರನ್ ಬಿಟ್ಟುಕೊಟ್ಟರು. ಅಂತಿಮ ಓವರ್‌ನ್ನು ಎಸೆಯಲು ನಾಯಕ ಅಫ್ರಿದಿ ಅವರು ಅನ್ವರ್ ಅಲಿಗೆ ಅವಕಾಶ ನೀಡಿದರು. ಆದರೆ ಅಂತಿಮ ಓವರ್‌ನ ಮೊದಲ ಎಸೆತದಲ್ಲಿ ಮಹಮ್ಮದುಲ್ಲಾ ಚೆಂಡನ್ನು ಬೌಂಡರಿ ಗೆರೆ ದಾಟಿಸುವ ಮೂಲಕ ಬಾಂಗ್ಲಾಕ್ಕೆ ರೋಚಕ ಗೆಲುವು ತಂದು ಕೊಟ್ಟರು.
ಪಾಕಿಸ್ತಾನ 129/7: ವಿಕೆಟ್ ಕೀಪರ್ ಸರ್ಫರಾಝ್ ಅಹ್ಮದ್ ಮತ್ತು ಆಲ್‌ರೌಂಡರ್ ಶುಐಬ್ ಮಲಿಕ್ ಐದನೆ ವಿಕೆಟ್‌ಗೆ ದಾಖಲಿಸಿದ 70 ರನ್‌ಗಳ ಜೊತೆಯಾಟದ ನೆರವಿನಲ್ಲಿ ಪಾಕಿಸ್ತಾನ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 129 ರನ್ ಗಳಿಸಿದೆ.
ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ತಂಡ 8.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 28 ರನ್ ಗಳಿಸಿತ್ತು. ಈ ಹಂತದಲ್ಲಿ ತಂಡದ ಬ್ಯಾಟಿಂಗ್‌ನ್ನು ಮುನ್ನಡೆಸಿದ ಮಲಿಕ್ ಮತ್ತು ಸರ್ಫರಾಝ್ ತಂಡವನ್ನು ಆಧರಿಸಿದರು.
ಸರ್ಫರಾಝ್ ಅಹ್ಮದ್ ಔಟಾಗದೆ 58 ರನ್(42ಎ, 5ಬೌ,2ಸಿ) ಮತ್ತು ಮಲಿಕ್ 41 ರನ್(30ಎ, 5ಬೌ,1ಸಿ) ಗಳಿಸಿ ತಂಡದ ಸ್ಕೋರ್ 100ರ ಗಡಿ ದಾಟಲು ನೆರವಾದರು.
ಅಲ್-ಅಮೀನ್ ಹುಸೈನ್(3-25), ಅರಾಫತ್ ಸನ್ನಿ( 2-35), ತಸ್ಕೀನ್ ಅಹ್ಮದ್(1-14), ಮುರ್ತಾಝ(1-29) ಪಾಕ್‌ನ ದಾಂಡಿಗರನ್ನು ಕಾಡಿದರು.
ತಸ್ಕೀನ್ ಅಹ್ಮದ್‌ರ ಮೊದಲ ಓವರ್‌ನಲ್ಲಿ ಪಾಕಿಸ್ತಾನ ಕೇವಲ 1 ರನ್ ಮಾಡಿತು. ಎರಡನೆ ಓವರ್‌ನ ಮೊದಲ ಎಸೆತದಲ್ಲಿ ಖುರ್ರಮ್ ಮನ್ಸೂರ್(1) ಅವರು ಅಲ್ ಅಮೀನ್ ಹುಸೈನ್‌ಗೆ ಕ್ಯಾಚ್ ನೀಡಿದರು. ಶಾರ್ಜೀಲ್ ಖಾನ್ 1 ಬೌಂಡರಿ ಮತ್ತು 1ಸಿಕ್ಸರ್ ಒಳಗೊಂಡ 10 ರನ್ ಗಳಿಸಿ ಅರಫತ್ ಸನ್ನಿಗೆ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.
ಮುಹಮ್ಮದ್ ಹಫೀಝ್ 11 ಎಸೆತಗಳನ್ನು ಎದುರಿಸಿ ಕೇವಲ 2 ರನ್ ಸೇರಿಸಿದರು. ಕಳೆದ ಪಂದ್ಯದಲ್ಲಿ ಮಿಂಚಿದ್ದ ಉಮರ್ ಅಕ್ಮಲ್ (4) ಬೇಗನೆ ನಿರ್ಗಮಿಸಿದರು.
8.2 ಓವರ್‌ಗಳಲ್ಲಿ 28ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ಪಾಕಿಸ್ತಾನ ತಂಡದ ಬ್ಯಾಟಿಂಗ್‌ನ್ನು ಮುನ್ನಡೆಸಿದ ಸರ್ಫರಾಝ್ ಮತ್ತು ಮಲಿಕ್ ಹೋರಾಟದ ಮೂಲಕ 16.4 ಓವರ್‌ಗಳಲ್ಲಿ 98ಕ್ಕೆ ತಲುಪಿಸಿದರು. ನಾಯಕ ಶಾಹಿದ್ ಅಫ್ರಿದಿ ಸೊನ್ನೆ ಸುತ್ತಿದರು.
ಏಳನೆ ವಿಕೆಟ್‌ಗೆ ಸರ್ಫರಾಝ್ ಮತ್ತು ಅನ್ವರ್ ಅಲಿ(13) ಅವರು ಜೊತೆಯಾಟದಲ್ಲಿ 27 ರನ್ ಸೇರಿಸಿ ತಂಡದ ಸ್ಕೋರ್‌ನ್ನು 129ಕ್ಕೆ ತಲುಪಿಸಿದರು.







