ಚುಟುಕು ಸುದ್ದಿಗಳು
ಇಂದು ಡಾ.ಪುಟ್ಟರಾಜ ಗವಾಯಿ ಅವರ 103ನೆ ಜನ್ಮದಿನ
ಮಂಗಳೂರು, ಮಾ.2: ಡಾ.ಪುಟ್ಟರಾಜ ಗವಾಯಿ ಅವರ 103ನೇ ಜನ್ಮದಿನದ ಪ್ರಯುಕ್ತ ಡಾ, ಪುಟ್ಟರಾಜ ಗವಾಯಿ ಪ್ರತಿಷ್ಠಾನ ಧಾರವಾಡ, ಸಂಗೀತ ಭಾರತಿ ಪ್ರತಿಷ್ಠಾನ ಮಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಪಬ್ಲಿಕ್ ರಿಕ್ರಿಯೇಶನ್ ಅಸೋಸಿಯೇಶನ್ ಗಂಗಾವತಿ ಇದರ ವತಿಯಿಂದ ಸಂಗೀತೋತ್ಸವ ಮತ್ತು ಪುಟ್ಟರಾಜ ಸಮ್ಮಾನ-2016 ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮ ನಗರದ ಪುರಭವನದಲ್ಲಿ ಮಾ.3ರಂದು ಸಂಜೆ 6ಕ್ಕೆ ಜರಗಲಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಸಂಗೀತ ಭಾರತಿ ಪ್ರತಿಷ್ಠಾನದ ಅಧ್ಯಕ್ಷ ಉಸ್ತಾದ್ ರಫೀಕ್ ಖಾನ್ ಮಾಹಿತಿ ನೀಡಿ, ಪ್ರಸ್ತುತ ಸಾಲಿನ ಪುಟ್ಟರಾಜ ಸಮ್ಮಾನಕ್ಕೆ ಗ್ವಾಲಿಯರ್ ಘರಾನದ ಸುಪ್ರಸಿದ್ಧ ಹಿರಿಯ ಗಾಯಕ ಮುಂಬೈನ ಪಂ. ವಿದ್ಯಾಧರ್ ವ್ಯಾಸ್ ಅವರನ್ನು ಆಯ್ಕೆ ಮಾಡಲಾಗಿದ್ದು, ಕಾರ್ಯಕ್ರಮದಲ್ಲಿ ಗೌರವಿಸಲಾಗುವುದು. ಈ ಸನ್ಮಾನವು 1 ಲಕ್ಷ ರೂ. ಹಾಗೂ ಪುರಸ್ಕಾರವನ್ನು ಒಳಗೊಂಡಿರುತ್ತದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧಾರವಾಡದ ಡಾ. ಪುಟ್ಟರಾಜ ಗವಾಯಿ ಪ್ರತಿಷ್ಠಾನದ ಅಧ್ಯಕ್ಷ ಮಹಾಬಲೆೇಶ್ವರ ಹಾಸಿನಾಳ ಅವರು ವಹಿಸಲಿದ್ದಾರೆ ಎಂದರು. ಬಳಿಕ ಮುಂಬೈನ ಪಂ. ವಿದ್ಯಾಧರ್ ವ್ಯಾಸ್ ಅವರಿಂದ ಸಂಗೀತ ಕಚೇರಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಸಂಗೀತ ಭಾರತಿ ಪ್ರತಿಷ್ಠಾನದ ಕಾರ್ಯದರ್ಶಿ ರಾಧಾಕೃಷ್ಣ ರಾವ್ ಪೆರೋಡಿ, ಖಜಾಂಚಿ ಉಷಾಪ್ರಭಾ ಎನ್. ನಾಯಕ್, ಡಾ. ಪುಟ್ಟರಾಜ ಗವಾಯಿ ಪ್ರತಿಷ್ಠಾನದ ಸದಸ್ಯ ಹಾಗೂ ಖ್ಯಾತ ಗಾಯಕ ವೌನೇಶ್ ಕುಮಾರ್ ಛಾವಣಿ, ಕರುಣಾಕರ ಅವರು ಉಪಸ್ಥಿತರಿದ್ದರು.
ಮಾ.5: ಪನೀರ್‌ನಲ್ಲಿ ಚೆರುಶ್ಶೇರಿ ಉಸ್ತಾದ್ ಅನುಸ್ಮರಣೆ
ಮಂಗಳೂರು, ಮಾ.2: ದೇರಳಕಟ್ಟೆ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ವತಿಯಿಂದ ಶೈಖುನಾ ಝೈನುಲ್ ಉಲಮಾ ಚೆರುಶ್ಶೇರಿ ಉಸ್ತಾದ್ ಅನುಸ್ಮರಣಾ ಮಹಾ ಸಮ್ಮೇಳನ ಮಾ.5ರಂದು ಮಧ್ಯಾಹ್ನ 3ರಿಂದ ಪನೀರು ರಹ್ಮಾನಿಯಾ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ. ಅಬ್ದುನ್ನಾಸಿರ್ ಫೈಝಿ ಕುಂಬಳೆ ನೇತೃತ್ವದಲ್ಲಿ ನಡೆಯಲಿರುವ ಈ ಸಮ್ಮೇಳನದಲ್ಲಿ ಮಂಗಳನಗರ ಶಂಸುಲ್ ಉಲಮಾ ದಾರುಸ್ಸಲಾಂ ಅರೆಬಿಕ್ ಕಾಲೇಜಿನ ಅಧ್ಯಕ್ಷ ಸಯ್ಯಿದ್ ಅಮೀರ್ ತಂಙಳ್ ಕಿನ್ಯ ಅಲ್ ಬುಖಾರಿ ದುಆ ನೆರವೇರಿಸಲಿದ್ದಾರೆ. ಸಮ್ಮೇಳನದ ಅಧ್ಯಕ್ಷತೆಯನ್ನು ರಹ್ಮಾನಿಯ್ಯಾ ಜುಮಾ ಮಸೀದಿ ಅಧ್ಯಕ್ಷ ಪಿ. ಎಂ. ಅಬ್ದುರ್ರಹ್ಮಾನ್ ಪನೀರು ವಹಿಸಲಿದ್ದಾರೆ. ಉದ್ಘಾಟನೆಯನ್ನು ರಹ್ಮಾನಿಯಾ ಜುಮಾ ಮಸೀದಿಯ ಖತೀಬರಾದ ಯಾಸಿರ್ ಅರಾಫತ್ ಕೌಸರಿ ನೆರವೇರಿಸಲಿದ್ದಾರೆ. ದೇರಳಕಟ್ಟೆ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಅಬ್ದುಲ್ಲತೀಫ್ ದಾರಿಮಿ ರೆಂಜಾಡಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಮುಖ್ಯ ಪ್ರಭಾಷಣವನ್ನು ಅಬೂಬಕ್ಕರ್ ಸಿದ್ದೀಕ್ ಅಲ್ ಅಝ್‌ಹರಿ ಪಯ್ಯನ್ನೂರ್ ನಡೆಸಿಕೊಡಲಿದ್ದಾರೆ.
ವಿಟ್ಲ: ಕ್ರಿಕೆಟ್ ಪಂದ್ಯಾಟ
ವಿಟ್ಲ, ಮಾ.2: ಅರೇಬಿಯನ್ ಟ್ರೋಫಿ ಗೂಡಿನಬಳಿ ಇದರ ಆಶ್ರಯದಲ್ಲಿ 7 ಜನರ 30 ಗಜಗಳ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಮಾ.6ರಂದು ಗೂಡಿನಬಳಿ ಶಾಲಾ ಮೈದಾನದಲ್ಲಿ ನಡೆಯಲಿದೆ. ವಿಜೇತ ತಂಡಗಳಿಗೆ ಪ್ರಥಮ ರೂ. 8,888/-, ದ್ವಿತೀಯ ರೂ. 4,444/- ಹಾಗೂ ಅರೇಬಿಯನ್ ಟ್ರೋಫಿ ಅಲ್ಲದೆ ಉತ್ತಮ ಬೌಲರ್, ಬ್ಯಾಟ್ಸ್‌ಮೆನ್ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು. ವಿವರಗಳಿಗೆ 9663393348ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಮಾ.6ರಂದು ಭರತನಾಟ್ಯ ರಂಗ ಪ್ರವೇಶ
ಮಂಗಳೂರು, ಮಾ.2: ಗಾನ ನೃತ್ಯ ಅಕಾಡೆಮಿ ಆಶ್ರಯದಲ್ಲಿ ನಿಟ್ಟೆ ಇಂಜಿನಿಯರಿಂಗ್ ವಿದ್ಯಾರ್ಥಿನಿ ದೀಕ್ಷಾ ಸದಾನಂದ ಭರತನಾಟ್ಯ ರಂಗಪ್ರವೇಶ ಮಾ.6ರಂದು ಸಂಜೆ 5.30ಕ್ಕೆ ನಗರದ ಪುರಭವನದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ರಾಧಾಕೃಷ್ಣ ಭಟ್ ಹೇಳಿದ್ದಾರೆ.
ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ನಿರ್ದೇಶನದಲ್ಲಿ ನಡೆಯುತ್ತಿರುವ 9ನೆ ರಂಗಪ್ರವೇಶ ಇದಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ಅವರು ತಿಳಿಸಿದರು. ಪ್ರಮೀಳಾ ಸದಾನಂದ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ರಾಜ್ಯಮಟ್ಟದ ಕನ್ನಡ-ತುಳು ಕಿರುಚಿತ್ರ ಸ್ಪರ್ಧೆ
ಉಡುಪಿ, ಮಾ.2: ಕಟಪಾಡಿಯ ದಿಶಾ ಕಮ್ಯೂನಿಕೇಶನ್ಸ್ ಆಶ್ರಯದಲ್ಲಿ ನಡೆಯುವ 2ನೇ ಕರಾವಳಿ ಕಿರು ಚಿತ್ರೋತ್ಸವ-2016ದ ಅಂಗವಾಗಿ ರಾಜ್ಯ ಮಟ್ಟದ ಕಿರು ಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಕರ್ನಾಟಕ-ಕರಾವಳಿಯ ಉದಯೋನ್ಮುಖ ಕಿರುಚಿತ್ರ ನಿರ್ಮಾಪಕರು ಮತ್ತು ನಿರ್ದೇಶಕರು ಸಾಮಾಜಿಕ ಸಂದೇಶವನ್ನು ಸಾರುವ 30ನಿಮಿಷ ಅವಧಿಯ ಕನ್ನಡ ಮತ್ತು ತುಳು ಕಿರು ಚಿತ್ರಗಳನ್ನು ರಾಜ್ಯಮಟ್ಟದ ಈ ಸ್ಪರ್ಧೆಗೆ ಕಳುಹಿಸಿ ಕೊಡಬಹುದು. ಅತ್ಯುತ್ತಮ ಕಿರುಚಿತ್ರಗಳಿಗೆ ನಗದು ಸಹಿತ ಪ್ರಶಸ್ತಿ ಪತ್ರ, ಪಾರಿತೋಷಕಗಳನ್ನು ನೀಡಲಾಗುವುದು. ಆಸಕ್ತರು ಅರ್ಜಿ ಸಲ್ಲಿಸಲು ಮಾ.20 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ಪ್ರಕಾಶ್ ಸುವರ್ಣ ಕಟಪಾಡಿ, ನಿರ್ದೇಶಕರು, ದಿಶಾ ಕಮ್ಯೂನಿಕೇಶನ್ಸ್ (ಮೊ.: 9964019229) ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
ಬಿ.ಸಿ.ರೋಡ್: ಮಾ.5ರಂದು ‘ಬಂಟ್ವಾಳ ತಾಲೂಕು ತುಳು ಮಿನದನ’
ಬಂಟ್ವಾಳ, ಮಾ.2: ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಮಂಗಳೂರು ಇದರ ಆಶ್ರಯದಲ್ಲಿ ತುಳುಕೂಟ ಬಂಟ್ವಾಳ ಇವರ ಸಹಯೋಗದಲ್ಲಿ ‘ಬಂಟ್ವಾಳ ತಾಲೂಕು ತುಳು ಮಿನದನ’ವು ಮಾ. 5ರಂದು ಬಿ.ಸಿ.ರೋಡಿನ ಪದ್ಮನಾಭ ನಗರದಲ್ಲಿ ನಡೆಯಲಿದೆ ಎಂದು ಬಂಟ್ವಾಳ ತುಳುಕೂಟದ ಅಧ್ಯಕ್ಷ ಎ.ಸಿ.ಭಂಡಾರಿ ತಿಳಿಸಿದ್ದಾರೆ. ಬೆಳಗ್ಗೆ ನಡೆಯುವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಿನದನವನ್ನು ಉದ್ಘಾಟಿಸುವರು. ತುಳುಸಾಹಿತ್ಯ ಅಕಾಡಮಿ ಅಧ್ಯಕ್ಷೆ ಎಂ.ಜಾನಕಿ ಬ್ರಹ್ಮಾವರ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 2ಕ್ಕೆ ಮಹೇಂದ್ರನಾಥ ಸಾಲೆತ್ತೂರು ಅಧ್ಯಕ್ಷತೆಯಲ್ಲಿ ತುಳು ಕಬಿತ ಕೂಟ ನಡೆಯಲಿದೆ. 3ರಿಂದ 4 ರವೆರೆಗೆ ಈ ಚಿಣ್ಣರಲೋಕ ಸೇವಾಟ್ರಸ್ಟ್ ತಂಡದಿಂದ ರಾಗ ರಂಜಿನಿ ರಸಮಂಜರಿ ನಡೆಯಲಿದೆ. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶಾಸಕಿ ಶಕುಂತಳಾ ಶೆಟ್ಟಿ ಸಮಾರೋಪದ ಮಾತುಗಳನ್ನಾಡುವರು. ತುಳುಕೂಟದ ಅಧ್ಯಕ್ಷ ಎ.ಸಿ.ಭಂಡಾರಿ ಅಧ್ಯಕ್ಷತೆ ವಹಿಸುವರು. ಬಳಿಕ ರಂಗಿತೊದ ಲೇಸ್, ಮಾಯೊಕೊದ ಪೊಣ್ಣು ತುಳು ಯಕ್ಷಗಾನ ನಡೆಯಲಿದೆ. ಮಿನದನದಲ್ಲಿ ಭಾಗವಹಿಸುವ ಶಿಕ್ಷಕರಿಗೆ ಇಲಾಖೆ ವತಿಯಿಂದ ಒಒಡಿ ಸೌಲಭ್ಯ ಕಲ್ಪಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಮಾ.6ಕ್ಕೆ ವಿಜಯಕುಮಾರ್ ಶೆಟ್ಟರಿಗೆ ಹುಟ್ಟೂರ ಅಭಿನಂದನೆ
ಉಡುಪಿ, ಮಾ.2: ರಂಗಭೂಮಿಯ ತನ್ನ ವಿಶಿಷ್ಟ ಸಾಧನೆಗಾಗಿ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲಿ ರಾಷ್ಟ್ರೀಯ ಸಾಧನೆ ಮಾಡಿರುವ ಮುಂಬಯಿ ಪ್ರಸಿದ್ಧ ರಂಗಕರ್ಮಿ ತೋನ್ಸೆ ವಿಜಯ ಕುಮಾರ್ ಶೆಟ್ಟಿಯವರಿಗೆ ಮಾ.6ರಂದು ಹುಟ್ಟೂರಿನ ಅಭಿನಂದನಾ ಸಮಾರಂಭ ನಡೆಯಲಿದೆ. ಅಜ್ಜರಕಾಡಿನಲ್ಲಿರುವ ಪುರಭವನದಲ್ಲಿ ಅಂದು ಮಧ್ಯಾಹ್ನ 3ರಿಂದ ರಾತ್ರಿ 10ರವರೆಗೆ ನಡೆಯಲಿದೆ. ಇದರಲ್ಲಿ ವಿಜಯಕುಮಾರ್‌ರ ಪ್ರಸಿದ್ಧ 60 ನಾಟಕಗಳಲ್ಲಿ ಬರುವ 30 ವೈವಿಧ್ಯಮಯ ಪಾತ್ರಗಳನ್ನು ತಾನು ಅಭಿನಯಿಸಿ ತೋರಿಸಲಿದ್ದೇನೆ. ತಮ್ಮ 60ನೆ ಹುಟ್ಟುಹಬ್ಬದ ಸಂದರ್ಭದಲ್ಲಿ ಮುಂಬಯಿಯ ಬಂಟರ ಸಂಘದ ರಾಧಾಭಾಯಿ ಭಂಡಾರಿ ಸಭಾಗೃಹದಲ್ಲಿ ತಾವು 60ಪಾತ್ರಗಳನ್ನು ಅವುಗಳ ವೈವಿಧ್ಯತೆಯೊಂದಿಗೆ ಅಭಿನಯಿಸಿ ತೋರಿಸಿದ್ದು, ಇದು ರಂಗಭೂಮಿಯಲ್ಲೇ ಒಂದು ವಿಶಿಷ್ಟ ಸಾಧನೆಯಾಗಿದೆ ಎಂದು ವಿಜಯಕುಮಾರ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಇದಕ್ಕಾಗಿ ಹುಟ್ಟೂರಾದ ತೋನ್ಸೆ ಹಾಗೂ ಉಡುಪಿಯ ಅವರ ಅಭಿಮಾನಿ ಗಳು ಸೇರಿ ಅಭಿನಂದನಾ ಸಮಾರಂಭ ‘ವಿಜಯೋತ್ಸವ’ವನ್ನು ಪುರಭವನದಲ್ಲಿ ಹಮ್ಮಿಕೊಂಡಿದ್ದು, ಇದೇ ಸಂದರ್ಭ ಮುಂಬಯಿಯ ಕಲಾಜಗತ್ತು ತಂಡ ಭಾಸ್ಕರ ರೈ ಕುಕ್ಕುವಳ್ಳಿ, ತೋನ್ಸೆ ಪುಷ್ಕಳ ಕುಮಾರ್, ಸತೀಶ್ ಸುರತ್ಕಲ್ ಇವರ ಸಹಯೋಗದಲ್ಲಿ ‘ರಂಗೋತ್ಸವ’ ಎಂಬ ವಿಶಿಷ್ಟ ಪರಿಕಲ್ಪನೆಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದೆ.ಅಭಿನಂದನಾ ಸಮಾರಂಭ ಸಂಜೆ 6:00 ಗಂಟೆಗೆ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಡಾ.ಜಿ.ಶಂಕರ್ ಹಾಗೂ ಮೂಡುಬಿದಿರೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವ ನೇತೃತ್ವದಲ್ಲಿ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ವಿಜಯೋತ್ಸವ ಸಮಿತಿಯ ಅಧ್ಯಕ್ಷ ಟಿ.ಶಂಭು ಶೆಟ್ಟಿ, ಟಿ.ಸತೀಶ್ ಶೆಟ್ಟಿ, ಸುಧಾಕರ ಆಚಾರ್ಯ ಹಾಗೂ ಪ್ರಕಾಶ ಸುವರ್ಣ ಉಪಸ್ಥಿತರಿದ್ದರು.
5-6: ವರ್ಷಾಚರಣೆ
ಮಂಗಳೂರು, ಮಾ.2: ಗೋವನಿತಾಶ್ರಯ ಟ್ರಸ್ಟ್‌ನ 16ನೇ ವರ್ಷಾಚರಣೆಯು ಮಾ. 5 ಹಾಗೂ 6ರಂದು ಪಜೀರು- ಬೀಜಗುರಿಯ ಗೋಶಾಲಾ ವಠಾರದಲ್ಲಿ ನಡೆಯಲಿದೆ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಡಾ.ಪಿ. ಅನಂತಕೃಷ್ಣ ಭಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮಾ. 5ರಂದು ಬೆಳಗ್ಗೆ ಕಾಸರಗೋಡು ಸೇರಿ ದ.ಕ ಜಿಲ್ಲೆಯ ಜ್ಯೋತಿಷ್ಯ ಶಾಸಜ್ಞರ ಸಮಾವೇಶ, ಮಧ್ಯಾಹ್ನ ವೈದಿಕ ಸಮಾವೇಶ ಹಾಗೂ ಗೋವಂಶದ ಉಳಿವಿಗೆ ಸಾಮಾಜಿಕ ಜಾಗೃತಿ ಸಂವರ್ಧನೆಯ ಕಾರ್ಯ ನಡೆಯಲಿದೆ. ಸಂಜೆ 12 ವರ್ಷದವರೆಗಿನ ಮಕ್ಕಳಿಗೆ ದನಕರುಗಳ ಮಧ್ಯೆ ಶ್ರೀಕೃಷ್ಣ ವೇಷ ಸ್ಪರ್ಧೆಯನ್ನು ಏರ್ಪಡಿಸಲಾಗುವುದು. ಮಾ.6ರಂದು ಬೆಳಗ್ಗೆ ‘ಗೌರಿ’ ಎಂಬ ಹೆಸರಿನ 4ನೇ ಗೋಶಾಲೆಗೆ ಶಿಲಾನ್ಯಾಸ ನೆರವೇರಲಿದೆ ಎಂದು ಅವರು ತಿಳಿಸಿದರು.
ಕೇಂದ್ರ ಬಜೆಟ್ ವಿರೋಧಿಸಿ ಪ್ರತಿಕೃತಿ ದಹನ
ಕುಂದಾಪುರ, ಮಾ.2: ಐಸಿಡಿಎಸ್ ಯೋಜನೆಗೆ ಈ ಸಾಲಿನ ಬಜೆಟ್‌ನಲ್ಲಿ ಅನುದಾನ ಕಡಿತ ಮಾಡಿರುವುದನ್ನು ಖಂಡಿಸಿ ಅಂಗನವಾಡಿ ನೌಕರರ ಸಂಘ (ಸಿಐಟಿಯು) ಕುಂದಾಪುರದಲ್ಲಿ ಕೇಂದ್ರ ಸರಕಾರದ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿತು. ಐಸಿಡಿಎಸ್ ಯೋಜನೆಯಲ್ಲಿ 28 ಲಕ್ಷ ಮಹಿಳೆಯರು ಯಾವುದೇ ಸೌಲಭ್ಯ ಗಳಿಲ್ಲದೆ ಗುಲಾಮರಂತೆ ದುಡಿಯುತ್ತಿದ್ದಾರೆ. ಕೇಂದ್ರ ಸರಕಾರವು ‘ಭೇಟಿ ಬಚಾವೋ ಬೇಟಿ ಪಡಾವೋ’ಎಂಬ ಹುಸಿ ಘೋಷಣೆ ಹೇಳುತ್ತ ಮಕ್ಕಳ ಪೌಷ್ಟಿಕತೆಯನ್ನು ಬಜೆಟ್‌ನಲ್ಲಿ ಕಸಿದುಕೊಳ್ಳುತ್ತಿದೆ. ಈ ಯೋಜನೆಗೆ 2015-16ರ ಬಜೆಟ್‌ನಲ್ಲಿ 18,103 ಕೋಟಿ ರೂ.ನಿಂದ 8,245.77ಕೋಟಿ ರೂ. ಅನುದಾನ ಕಡಿತ ಮಾಡಿದೆ ಎಂದು ಸಿಐಟಿಯು ತಾಲೂಕು ಕಾರ್ಯದರ್ಶಿ ಸುರೇಶ್ ಕಲ್ಲಾಗರ್‌ಆರೋಪಿಸಿದರು. ಐಸಿಡಿಎಸ್ ಸಾರ್ವತ್ರಿಕರಣ ಆಗಬೇಕು. ಅದಕ್ಕೆ ಪ್ರತ್ಯೇಕ ಇಲಾಖೆ ಸ್ಥಾಪಿಸಬೇಕು. ಗುಣಮಟ್ಟದ ಮೂಲಭೂತ ಸೌಲಭ್ಯ ಒದಗಿಸಬೇಕು. ಈ ಯೋಜನೆ ಯನ್ನು ಖಾಸಗೀಕರಣ ಮಾಡಬಾರದು. 2016-17ರ ಬಜೆಟ್‌ನಲ್ಲಿ 36 ಸಾವಿರ ಕೋಟಿ ರೂ. ಅನುದಾನ ನೀಡಬೇಕು. ನೌಕರರನ್ನು 3 ಮತ್ತು 4ನೆ ದರ್ಜೆಯ ನೌಕರರನ್ನಾಗಿ ಪರಿಗಣಿಸಬೇಕು. 15ಸಾವಿರ ಕನಿಷ್ಠ ಕೂಲಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ರತಿ ಶೆಟ್ಟಿ, ಸುಶೀಲಾ ನಾಡ, ಆಶಲತಾ, ವನಜಾ ಶೆಟ್ಟಿ, ನಯನಾ ಪೈ, ಭಾಗ್ಯಾ ಬಸ್ರೂರು, ಸುಜಾತಾ, ಜಯಮಾಲಾ ಮತ್ತಿತರರು ಉಪಸ್ಥಿತರಿದ್ದರು.
ಉಳ್ಳಾಲದಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಗಳ ಕಾನ್ಫಿಡೆನ್ಸ್ ಟೆಸ್ಟ್
ಉಳ್ಳಾಲ, ಮಾ.2: ಎಸ್ಸೆಸ್ಸೆಫ್ ಉಳ್ಳಾಲ ಡಿವಿಜನ್ ವತಿಯಿಂದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಕಾನ್ಫಿಡೆನ್ಸ್ ಟೆಸ್ಟ್ ಹಝ್ರತ್ ಇಂಗ್ಲಿಷ್ ಮೀಡಿಯಮ್ ಸ್ಕೂಲ್ ಉಳ್ಳಾಲದಲ್ಲಿ ನಡೆಯಿತು. ಕೊಠಡಿ ಮೇಲ್ವಿಚಾರಕರಾಗಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು, ಮುಸ್ತಫಾ ಮಾಸ್ಟರ್ ಉಳ್ಳಾಲ, ಜಿ. ಎ. ಇಬ್ರಾಹಿಂ ಅಜ್ಜಿನಡ್ಕ, ಅನ್ಸಾರ್ ಮಾಸ್ಟರ್ ಪಜೀರು, ಶಿಯಾಬುದ್ದೀನ್ ತಲಪಾಡಿ ಹಾಗೂ ಹಮೀದ್ ತಲಪಾಡಿ ಉಪಸ್ಥಿತರಿದ್ದರು.
ಸುಳ್ಯ: ಸಾರ್ವಜನಿಕ ಕುಂದು ಕೊರತೆ ನಿವಾರಣೆಗೆ ಆನ್‌ಲೈನ್ ತಂತ್ರಾಂಶ
ಸುಳ್ಯ, ಮಾ.2: ಸಾರ್ವಜನಿಕ ಕುಂದುಕೊರತೆ ನಿವಾರಣೆಗೆ ಒತ್ತು ನೀಡಿರುವ ಪೌರ ಸುಧಾರಣಾ ಕೋಶ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಸೇವೆಗೆ ಆನ್‌ಲೈನ್ ಮೂಲಕ ಅರ್ಜಿ ಸ್ವೀಕರಿಸುವ ತಂತ್ರಾಂಶ ರೂಪಿಸಿದ್ದು, ಸುಳ್ಯ ನಪಂನಲ್ಲಿ ಮಾರ್ಚ್ 1ರಿಂದ ಜಾರಿಗೆ ಬಂದಿದೆ. ನಪಂ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಜನಹಿತ ತಂತ್ರಾಂಶವನ್ನು ಉದ್ಘಾಟಿಸಿದರು. ನಪಂ ಉಪಾಧ್ಯಕ್ಷೆ ಡಿ.ಮೀನಾಕ್ಷಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮೋಹಿನಿ ನಾಗರಾಜ್, ಸದಸ್ಯೆ ಪ್ರೇಮಾ ಟೀಚರ್, ಇಂಜಿನಿಯರ್ ಶ್ರೀದೇವಿ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.







