ಹಾಸ್ಟೆಲ್, ವಸತಿಶಾಲಾ ಹೊರಗುತ್ತಿಗೆ ನೌಕರರ ಸಮಾವೇಶ

ಉಡುಪಿ, ಮಾ.2: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಾಸ್ತಾವಿಕ ನೇರ ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ 6 ತಿಂಗಳುಗಳ ಕಾಲ ಮುಂದೂಡಬೇಕು. ಎಲ್ಲಾ ಸರಕಾರಿ ವಿದ್ಯಾರ್ಥಿ ನಿಲಯಗಳು ಮತ್ತು ವಸತಿ ಶಾಲೆಗಳಲ್ಲಿ ಅಡುಗೆಯವರು ಮತ್ತು ಸಹಾಯಕ ಅಡುಗೆಯವರ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಅರ್ಹ ಹೊರಗುತ್ತಿಗೆ ನೌಕರರನ್ನು ಸೇವೆಗೆ ಸೇರಿಸಿಕೊಳ್ಳುವ ಮೂಲಕ ಖಾಯಂಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ನಿತ್ಯಾನಂದ ಸ್ವಾಮಿ ಸರಕಾರವನ್ನು ಒತ್ತಾಯಿಸಿದ್ದಾರೆ.
ಉಡುಪಿ ವಿಮಾ ನೌಕರರ ಸಂಘದ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನೇರ ನೇಮಕಾತಿಯಲ್ಲಿ ಈಗಾಗಲೇ ಕೆಲಸ ಮಾಡಿಕೊಂಡು ಬಂದಿರುವ ಹೊರಗುತ್ತಿಗೆ ನೌಕರರಿಗೆ ಗರಿಷ್ಠ ಮೀಸಲಾತಿ ನೀಡಿ ಅವರ ಸೇವಾ ಹಿರಿತನವನ್ನು ಗಣನೆಗೆ ತೆಗೆದುಕೊಳ್ಳಬೇಕು. 2014ರ ಜನವರಿಯಿಂದ ಮೊದಲು ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರಿಗೆ 10ನೇ ತರಗತಿ ವಿದ್ಯಾರ್ಹತೆ ಷರತ್ತನ್ನು ಅನ್ವಯಿಸಬಾರದು ಎಂದು ಸ್ವಾಮಿ ಹೇಳಿದರು.
ಬಳಿಕ ಜಿಲ್ಲಾ ಮಟ್ಟದ ನೇರ ನೇಮಕಾತಿ ಆಯ್ಕೆ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ, ಜಿಪಂ ಸಿಇಒ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಇವರಿಗೆ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಸಮಿತಿ ಪರವಾಗಿ ಹಕ್ಕೊತ್ತಾಯದ ಸಾಮೂಹಿಕ ಮನವಿ ಅರ್ಪಿಸಲಾಯಿತು.
ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಮುಖಂಡರಾದ ಮಂಜುನಾಥ ಮಯ್ಯಿಡಿ ಬೈಂದೂರು, ವೆಂಕಟೇಶ ಕೋಣಿ, ಗಜಾನನ ಉಡುಪಿ, ರಾಜೇಶ ಕಾರ್ಕಳ, ಪ್ರೇಮಾ ಕುಂದಾಪುರ, ಶಂಕರ ಕೋಟೇಶ್ವರ, ಉದಯ ಕುಂದಾಪುರ, ರವಿರಾಜ ಉಡುಪಿ, ಲಕ್ಷ್ಮಣ ಕಾಪು, ನಾಗರತ್ನ ನಾಡ, ಜಯಂತಿ ಕುಂದಾಪುರ, ಪದ್ಮಾವತಿ ಶೆಟ್ಟಿ, ಹರೀಶ ಬೈಂದೂರು, ಗಣಪತಿ, ಮುಂತಾದವರು ಮನವಿ ಅರ್ಪಿಸಿದ್ದಾರೆ.







