ಬಾಂಜಾರು ಮಲೆ: ವೈದ್ಯಕೀಯ ಶಿಬಿರ

ಬೆಳ್ತಂಗಡಿ, ಮಾ.2: ಆರೋಗ್ಯವಿದ್ದರೆ ಮಾತ್ರ ವಿದ್ಯೆ, ಬುದ್ಧಿ, ಧನ ಇತ್ಯಾದಿಗಳನ್ನು ಗಳಿಸಬಹುದು. ಆದ್ದರಿಂದಲೇ ನಮ್ಮ ಹಿರಿಯರು ಆರೋಗ್ಯವೇ ಭಾಗ್ಯ ಎಂದು ಹೇಳಿರುವುದು ಎಂದು ಶಾಸಕ ಕೆ.ವಸಂತ ಬಂಗೇರ ಹೇಳಿದರು.
ನೆರಿಯ ಗ್ರಾಮದ ದಟ್ಟಡವಿಯೊಳಗಿರುವ ಬಾಂಜಾರು ಮಲೆ ಎಂಬಲ್ಲಿನ ಸಮುದಾಯ ಭವನದಲ್ಲಿ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ದಶಮಾನೋತ್ಸವದ ಅಂಗವಾಗಿ, ಬೆಳ್ತಂಗಡಿ ತಾಲೂಕು ಮೆಡಿಕಲ್ ಅಸೋ ಸಿಯೇಶನ್‌ನ ಸಹಕಾರದಲ್ಲಿ ಕೆಎಂಸಿ ಆಸ್ಪತ್ರೆಯ ವೈದ್ಯರಿಂದ ನಡೆದ ವೈದ್ಯಕೀಯ ಉಚಿತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂದರ್ಭ ಶಾಸಕರಿಗೆ ನಾಗರಿಕರು ವಿವಿಧ ಬೇಡಿಕೆಗಳ ಬಗ್ಗೆ ಮನವಿಗಳನ್ನು ಸಲ್ಲಿಸಿದರು. ಕೆಎಂಸಿಯ ಉಪ ಪ್ರಬಂಧಕ ಡಾ.ಜಯರಾಮ್ ಮಾತನಾಡಿದರು.
ಪತ್ರಕರ್ತ ಸಂಘದ ಅಧ್ಯಕ್ಷ ಬಿ.ಎಸ್. ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ನಮಿತಾ, ಸಮಾಜ ಕಲ್ಯಾಣಾಧಿಕಾರಿ ಮೋಹನ್ ಕುಮಾರ್, ನೆರಿಯ ಗ್ರಾಪಂ ಅಧ್ಯಕ್ಷ ಮುಹಮ್ಮದ್, ಸದಸ್ಯೆ ಎ.ಬಿ.ಮೀನಾಕ್ಷಿ, ಮಾಜಿ ಸದಸ್ಯ ಕೃಷ್ಣ ಪಿ. ಅತಿಥಿಗಳಾಗಿ ವೇದಿಕೆಯಲ್ಲಿದ್ದರು. ನವೀನ್ ಪ್ರಾರ್ಥಿಸಿದರು. ಕಾರ್ಯದರ್ಶಿ ಭುವನೇಶ ಗೇರುಕಟ್ಟೆ ಸ್ವಾಗತಿಸಿದರು. ಮೆಡಿಕಲ್ ಅಸೋಸಿಯೇಶನ್ ಅಧ್ಯಕ್ಷ ಜಗದೀಶ್ ಡಿ. ವಂದಿಸಿದರು. ಸಂಘದ ಜತೆ ಕಾರ್ಯದರ್ಶಿ ಅಶ್ರಫ್ ಆಲಿ ಕುಂಞಿ ಕಾರ್ಯಕ್ರಮ ನಿರೂಪಿಸಿದರು.







