ಸೇನೆಗೆ ಬಡವರೇ ಯಾಕೆ ಸೇರಬೇಕು?
ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರರು ಸಮಾರಂಭವೊಂದರಲ್ಲಿ ಮಾಡಿದ ಭಾಷಣವನ್ನು ಮುಂದಿಟ್ಟುಕೊಂಡು, ಬಿಜೆಪಿಯ ಕೆಲವು ಭ್ರಷ್ಟ ನಾಯಕರು ಅವರನ್ನು ದೇಶವಿರೋಧಿಯೆಂದು ಘೋಷಿಸುವ ಉತ್ಸಾಹದಲ್ಲಿದ್ದಾರೆ. ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರರು, ಹಿರಿಯ ಪತ್ರಕರ್ತರು, ಅತ್ಯುತ್ತಮ ಲೇಖಕರೂ ಆಗಿರುವ ದಿನೇಶ್ ಅಮೀನ್ ಮಟ್ಟು ಅವರು, ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಕೆಲವು ಮಹತ್ವದ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದರು. ಇದನ್ನು ಅನಿಸಿಕೆಗಳು ಎಂದು ಕರೆಯುವುದಕ್ಕಿಂತ ಸಮಾಜದ ಮುಂದಿಟ್ಟ ಕೆಲವು ಪ್ರಶ್ನೆಗಳು ಎಂದು ಕರೆಯುವುದೇ ಹೆಚ್ಚು ಸರಿ. ಅವರು ಕೇಳಿದ ಮೊದಲ ಪ್ರಶ್ನೆ ‘‘ಈ ದೇಶದಲ್ಲಿ ಇಷ್ಟು ಕೋಮುಗಲಭೆಗಳು ನಡೆಯುತ್ತವೆ. ಆದರೆ ಕೋಮುಗಲಭೆಗಳನ್ನು ಪ್ರಚೋದಿಸುವ ನಾಯಕರ ಮಕ್ಕಳು ಯಾಕೆ ಈ ಗಲಭೆಗಳಲ್ಲಿ ಸಂತ್ರಸ್ತರಾಗುವುದಿಲ್ಲ. ಅವರ ಮಕ್ಕಳು ಯಾಕೆ ಕತ್ತಿ, ದೊಣ್ಣೆ ಹಿಡಿದು ಬೀದಿಗಿಳಿಯುವುದಿಲ್ಲ? ಆ ನಾಯಕರಾಗಲಿ, ಅವರ ಮಕ್ಕಳಾಗಲಿ ಯಾಕೆ ಜೈಲು ಸೇರುವುದಿಲ್ಲ.? ಕೇವಲ ಹಿಂದುಳಿದ, ದಲಿತ, ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಬಡ ಯುವಕರೇ ಯಾಕೆ ಜೈಲು ಸೇರುತ್ತಾರೆ?’’
ಇದೇ ಸಂದರ್ಭದಲ್ಲಿ ಅವರು ಇನ್ನೊಂದು ಮಹತ್ವದ ಪ್ರಶ್ನೆಯನ್ನೂ ಎತ್ತಿದರು. ‘‘ಸೈನಿಕರು ಮೃತರಾದಾಗ ರಾಜಕಾರಣಿಗಳು ಅದನ್ನು ರಾಜಕೀಕರಣಗೊಳಿಸುತ್ತಾರೆ. ಸಾರ್ವಜನಿಕವಾಗಿ ಮೊಸಳೆ ಕಣ್ಣೀರು ಸುರಿಸುತ್ತಾರೆ. ದೇಶಪ್ರೇಮದ ಘೋಷಣೆ ಕೂಗುತ್ತಾರೆ. ಆದರೆ ಅವರ ಮಕ್ಕಳನ್ನು ಮಾತ್ರ ಸೇನೆಗೆ ಸೇರಿಸುವುದಿಲ್ಲ. ಇಂದು ಗಡಿಯಲ್ಲಿ ಪ್ರಾಣ ತೆರುತ್ತಿರುವ ಯೋಧರಲ್ಲಿ ಬಹುತೇಕ ಜನರು ಬಡ ಕುಟುಂಬದಿಂದ ಹೋದವರು. ದೇಶಪ್ರೇಮವೇ ಮುಖ್ಯವಾಗಿದ್ದರೆ ಅಲ್ಲಿ ಶ್ರೀಮಂತರ ಅಥವಾ ರಾಜಕಾರಣಿಗಳ ಮಕ್ಕಳೂ ಇರುತ್ತಿದ್ದರು’’ ಇದು ಭಾರತದ ವಾಸ್ತವವಾಗಿದೆ. ಗಡಿಯಲ್ಲಿ ಹುತಾತ್ಮರಾದ ಸೈನಿಕರ ಶವಪೆಟ್ಟಿಗೆಗಳು ಆರೆಸ್ಸೆಸ್ ನಾಯಕರ ಕುಟುಂಬವಿರುವ ಅಗ್ರಹಾರದ ಕಡೆಗೋ ಅಥವಾ ಸಿ.ಟಿ. ರವಿಯಂತಹ ಬಿಜೆಪಿಯ ಮುಖಂಡರ ಮನೆಗೋ ಹೋದ ವರದಿ ಈವರೆಗೆ ಪತ್ರಿಕೆಗಳಲ್ಲಿ ಪ್ರಕಟವಾದದ್ದಿಲ್ಲ. ಆ ಶವಪೆಟ್ಟಿಗೆಗಳೆಲ್ಲ ಬಡವರು, ಹಿಂದುಳಿದವರ್ಗಗಳ ಮನೆ ಬಾಗಿಲನ್ನೇ ತಟ್ಟುತ್ತವೆ. ಬಡವರಷ್ಟೇ ಸೇನೆಗೆ ಸೇರುವಂತಹ ಸನ್ನಿವೇಶ ಇಂದು ನಿರ್ಮಾಣವಾಗಿದೆ. ಇದು ನಾವು ಒಪ್ಪಿಕೊಳ್ಳಲೇ ಬೇಕಾದಂತಹ ಕಹಿ ಸತ್ಯ. ಹತ್ಯಾಕಾಂಡ, ಗಲಭೆಗಳಿಗೆ ಕರೆ ನೀಡುವ ಅಥವಾ ಗಡಿಯಲ್ಲಿ ಯುದ್ಧವಾಗಲಿ, ಪಾಕಿಸ್ತಾನವನ್ನು ನಮ್ಮ ಯೋಧರು ಸರ್ವನಾಶ ಮಾಡಲಿ ಎಂದು ಸಾರ್ವಜನಿಕವಾಗಿ ಅರಚಾಡುವ ಯಾವ ನಾಯಕರ ಮಕ್ಕಳೂ ಗಲಭೆಗೆ ಇಳಿಯುವುದಿಲ್ಲ, ಸೇನೆಯಲ್ಲೂ ಸೇರಿಕೊಂಡಿಲ್ಲ. ಅವರ ಮಕ್ಕಳು ಜೈಲಿಗೂ ಹೋಗಿಲ್ಲ, ಹುತಾತ್ಮರೂ ಆಗಿಲ್ಲ. ಯಾವ ಶ್ರೀಮಂತ ಅಥವಾ ಆರೆಸ್ಸೆಸ್‌ನ ಸ್ವಯಂಘೋಷಿತ ದೇಶಪ್ರೇಮೀ ನಾಯಕರು ತಮ್ಮ ಮನೆಯಲ್ಲಿ ಒಬ್ಬ ಮಗನನ್ನು ಸೇನೆಗೆ ಎಂದು ಮೀಸಲಿಟ್ಟ ಉದಾಹರಣೆಗಳಿಲ್ಲ. ಆದರೆ ಯಾವುದೇ ಒಬ್ಬ ಯೋಧ ಸಾಯಲಿ, ಅದನ್ನು ಸಾರ್ವಜನಿಕವಾಗಿ ರಾಜಕೀಯಗೊಳಿಸಿ, ಅವರನ್ನು ಮುಂದಿಟ್ಟು ಎಷ್ಟು ಮತಗಳನ್ನು ತನ್ನದಾಗಿಸಿಕೊಳ್ಳಬಹುದು ಎಂದು ಲೆಕ್ಕ ಹಾಕುವುದರಲ್ಲಿ ಮಾತ್ರ ರಾಜಕಾರಣಿಗಳು ಸದಾ ಮುಂದಿರುತ್ತಾರೆ. ಈ ಕಾರಣದಿಂದಲೇ ಈ ಗಂಭೀರ ಪ್ರಶ್ನೆಯನ್ನು ಸಭೆಯಲ್ಲಿ ಅಮೀನ್ ಮಟ್ಟು ಎತ್ತಿದರು. ‘ಕುಂಬಳಕಾಯಿ ಕಳ್ಳ’ ಎಂದಾಕ್ಷಣ ಕಳ್ಳ ಹೆಗಲು ಮುಟ್ಟಿ ನೋಡಿಕೊಂಡನಂತೆ. ಅಂತೆಯೇ ಸಿ. ಟಿ. ರವಿ ಸೇರಿದಂತೆ ಬಿಜೆಪಿ ಮತ್ತು ಆರೆಸ್ಸೆಸ್‌ನ ಹಲವರು ಹೆಗಲು ಮುಟ್ಟಿ ನೋಡಿಕೊಂಡರು. ಇಂದು ಕೊಡಗಿನಲ್ಲಿ ಕೊಡವ ಸಮಾಜದ ಮೇಲ್ಜಾತಿಯವರು ಅತ್ಯುನ್ನತ ಹುದ್ದೆಗಳಿಗಷ್ಟೇ ಸೇರ್ಪಡೆಯಾಗುತ್ತಾರೆ. ಗಡಿಯಲ್ಲಿ ಹಗಲಿರುಳು ಕಾಯುವ, ಸಿಯಾಚಿನ್‌ನ ಹಿಮದಲ್ಲಿ ಕಂಗೆಡುವ, ಯುದ್ಧದಲ್ಲಿ ಶತ್ರುಗಳಿಗೆ ನೇರವಾಗಿ ಎದೆಗೊಡುವ ಜವಾನ ಹುದ್ದೆ ನಿರ್ವಹಿಸಲು ಇವರು ಮುಂದೆ ಬರುವುದಿಲ್ಲ. ಅದಕ್ಕೆ ಸೇರ್ಪಡೆಯಾಗುವವರೆಲ್ಲ ಕೆಳಜಾತಿಯವರು ಮತ್ತು ಬಡವರು. ಹೆಚ್ಚಿನ ಬಡ ಕುಟುಂಬದ ಯುವಕರು ಉದ್ಯೋಗಕ್ಕಾಗಿಯೇ ಸೇನೆಯನ್ನು ಆರಿಸಿಕೊಳ್ಳುತ್ತಾರೆ. ಇದರಲ್ಲಿ ಯಾವ ಸಂಶಯವೂ ಇಲ್ಲ. ಸೇನೆ ಸೇರುವುದು ಕೇವಲ ದೇಶಪ್ರೇಮ ಒಂದರ ಕಾರಣಕ್ಕಾಗಿ ಎಂದಾಗಿದ್ದರೆ ಈ ರಾಜಕಾರಣಿಗಳ, ಮೇಲ್ಜಾತಿಗಳ, ಶ್ರೀಮಂತ ವರ್ಗದ ಜನರೂ ಸೇನೆಯಲ್ಲಿರುತ್ತಿದ್ದರು. ಅಥವಾ ಈ ಮೇಲ್ವರ್ಗಕ್ಕೆ ದೇಶಪ್ರೇಮವಿಲ್ಲ, ಆದುದರಿಂದ ಅವರು ತಮ್ಮ ಮಕ್ಕಳನ್ನು ಸೇನೆಗೆ ಸೇರಿಸುತ್ತಿಲ್ಲ ಎಂದು ಹೇಳಬೇಕಾಗುತ್ತದೆ. ‘ದೇಶಪ್ರೇಮ’ದ ಒಂದೇ ಕಾರಣಕ್ಕಾಗಿ ಯುವಕರು ಸೇನೆ ಸೇರುತ್ತಾರೆ ಎಂದು ಸಿ. ಟಿ. ರವಿಯಂತಹ ನಾಯಕರು ಹೇಳುತ್ತಾರಾದರೆ, ‘ಹಾಗಾದರೆ ನಿಮಗೂ ನಿಮ್ಮ ಪರಿವಾರದವರಿಗೂ ದೇಶಪ್ರೇಮವಿಲ್ಲವೇ?’ ಎಂದು ಪ್ರಶ್ನೆಯನ್ನು ಕೇಳಬೇಕಾಗುತ್ತದೆ.
ಇಂದು ಚರ್ಚೆಯ ಗುರಿಯಾಗಬೇಕಾಗಿರುವುದು ವಿಷಯ ಪ್ರಸ್ತಾಪಿಸಿದ ಅಮೀನ್ ಮಟ್ಟು ಅವರಲ್ಲ. ಬದಲಿಗೆ ಈ ದೇಶದ ಸೈನಿಕ ಮತ್ತು ಆತನ ಸ್ಥಿತಿಗತಿಗಳೇ ಚರ್ಚೆಯ ವಿಷಯವಾಗಬೇಕು. ಒಬ್ಬ ಅತ್ಯುತ್ತಮ ಕ್ರಿಕೆಟ್ ತಾರೆಗೆ ಸರಕಾರ ಹಲವು ಲಕ್ಷ, ಕೋಟಿ ರೂ.ಗಳ ಬಹುಮಾನಗಳನ್ನು ಘೋಷಿಸುತ್ತದೆ. ಆದರೆ ಒಬ್ಬ ಹುತಾತ್ಮ ಯೋಧನಿಗೆ ಸರಕಾರ ಹಣವನ್ನು ಘೋಷಿಸುವಾಗ ಜಿಪುಣತನದ ಪರಮಾವಧಿಯನ್ನು ಮೆರೆಯುತ್ತದೆ. ಸೇನೆಯಲ್ಲಿ ದುಡಿದ ನಿವೃತ್ತ ಯೋಧರು ತಮ್ಮ ಬೇಡಿಕೆಗಳಿಗಾಗಿ ಹಲವು ವರ್ಷಗಳಿಂದ ಬೀದಿಗಿಳಿದಿದ್ದಾರೆ. ಆದರೆ ಸಮಾನ ವೇತನ, ಸಮಾನ ಪಿಂಚಣಿ ಬೇಡಿಕೆಯನ್ನು ಈವರೆಗೆ ಈಡೇರಿಸುವುದಕ್ಕೆ ಮೋದಿ ನೇತೃತ್ವದ ಸರಕಾರಕ್ಕೆ ಸಾಧ್ಯವಾಗಿಲ್ಲ. ಯೋಧರನ್ನು ಸ್ಮರಿಸುವುದಕ್ಕೆ ಅವರು ಹುತಾತ್ಮರಾಗುವವರೆಗೆ ನಾವು ಕಾಯಬಾರದು. ಅತ್ಯಂತ ಕಷ್ಟಕರವಾದ ವಾತಾವರಣದಲ್ಲಿ ತಮ್ಮ ಕಾಯುವ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿ, ನಿವೃತ್ತರಾದ ಯೋಧರನ್ನು ಗೌರವಿಸಬೇಕಾದುದು ನಮ್ಮ ಕರ್ತವ್ಯವಾಗಿದೆ. ಸೇನೆಯ ತಳಮಟ್ಟದ, ಕಷ್ಟಕರವಾದ ಜವಾನ ಹುದ್ದೆಗಳಿಗೆ ಸೇರ್ಪಡೆಯಾಗುತ್ತಿರುವವರೆಲ್ಲ ಬಡವರು. ಅದನ್ನು ಒಪ್ಪಿಕೊಂಡೇ ಅವರ ಬದುಕನ್ನು ಸಹ್ಯ ಮಾಡಲು ನಾವು ಏನು ಮಾಡಬಹುದು ಎಂದು ರಾಜಕಾರಣಿಗಳು ಚರ್ಚೆ ಮಾಡಬೇಕು. ಮುಖ್ಯವಾಗಿ ಗಡಿಯಲ್ಲಿ ಕಾಯುವ ಯೋಧರಿಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು, ಅತ್ಯಾಧುನಿಕ ಉಪಕರಣ, ಬೂಟು ಇತ್ಯಾದಿಗಳನ್ನು ಒದಗಿಸುವ ಬಗ್ಗೆ ಸರಕಾರಕ್ಕೆ ಒತ್ತಡ ಹೇರಬೇಕು. ಹಾಗೆಯೇ ಅವರ ವೇತನಗಳನ್ನು ಇನ್ನಷ್ಟು ಹೆಚ್ಚಿಸಿ, ಅವರ ಪಿಂಚಣಿಗಳ ಬೇಡಿಕೆಯ ಕಡೆಗೂ ಗಮನ ಹರಿಸಬೇಕು. ಹೆಚ್ಚು ಹೆಚ್ಚು ಸವಲತ್ತುಗಳು, ಕನಿಷ್ಠ ಅವರನ್ನು ನಂಬಿದವರ ಬದುಕಿಗಾದರೂ ಒಂದಿಷ್ಟು ನೆರವಾಗಬಹುದು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಸೇನೆಗೆ ಸೇರುವವರ ಸಂಖ್ಯೆ ಗಣನೀಯವಾಗಿ ಕೆಳಗಿಳಿಯಲಿದೆ. ಈಗಾಗಲೇ ಈ ಬಗ್ಗೆ ಸೇನೆಯ ಉನ್ನತಾಧಿಕಾರಿಗಳು ಎಚ್ಚರಿಕೆಯನ್ನು ನೀಡಿದ್ದಾರೆ. ಈ ಎಚ್ಚರಿಕೆಗೆ ಕಿವಿಯಾಗಬೇಕಾದುದು ಸರಕಾರದ, ರಾಜಕಾರಣಿಗಳ ಕರ್ತವ್ಯವಾಗಿದೆ.







