ಗೀಲಾನಿ ಎಲ್ಲಿದ್ದಾರೆ? ಯಾಕೆ ವೌನ?

ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಬಂಧನ ಹಿನ್ನೆಲೆಯಲ್ಲಿ ಗದ್ದಲ ಮುಂದುವರಿದಿರುವಂತೆಯೇ, ದೇಶದ್ರೋಹದ ಮೇಲೆ ಬಂಧಿತರಾಗಿರುವ ಪ್ರೊಫೆಸರ್ ಎಸ್.ಎ.ಆರ್. ಗೀಲಾನಿ ಅವರ ಬಗ್ಗೆ ಮಾಧ್ಯಮದವರು ಹಾಗೂ ರಾಜಕಾರಣಿಗಳು ಖಚಿತ ವೌನ ತಾಳಿದ್ದಾರೆ. ಸಂಸತ್ ಭವನದ ಮೇಲಿನ ದಾಳಿ ಆರೋಪಿ ಅಫ್ಝಲ್ ಗುರು ಗಲ್ಲು ಶಿಕ್ಷೆಗೆ ಸಂಬಂಧಿಸಿದಂತೆ ಫೆೆಬ್ರವರಿ 10ರಂದು ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ಸಮಾರಂಭ ಏರ್ಪಡಿಸಿದ ಹಿನ್ನೆಲೆಯಲ್ಲಿ ಅವರನ್ನು ದೇಶದ್ರೋಹದ ಆರೋಪದಲ್ಲಿ ಬಂಧಿಸಲಾಗಿತ್ತು.
ನನ್ನ ತಂದೆಯ ಪರವಾಗಿ ದಿಲ್ಲಿಯಲ್ಲಿ ಒಂದು ಸಣ್ಣ ಪ್ರತಿಭಟನೆಯೂ ನಡೆದಿಲ್ಲ. ಅವರ ಬಗ್ಗೆ ಮಾತನಾಡಲು ಕೂಡಾ ಯಾರೂ ಬಯಸುತ್ತಿಲ್ಲ. ಏಕೆ? ಎಂದು ತಿಹಾರ್ ಜೈಲಿನಲ್ಲಿರುವ ಪ್ರೊಫೆಸರ್ ಗೀಲಾನಿಯವರ ಪುತ್ರಿ ನುಸ್ರತ್ ಪ್ರಶ್ನಿಸುತ್ತಾರೆ.
ಗೀಲಾನಿ ಕುಟುಂಬ ಅಪೂರ್ಣವಾದ ಆಗ್ನೇಯ ದಿಲ್ಲಿ ಸೊಸೈಟಿಯ ಮನೆಯಲ್ಲಿ ವಾಸವಿದೆ. ಇಬ್ಬರು ಮಕ್ಕಳಾದ ಅತೀ ಹಾಗೂ ನುಸ್ರತ್ ಕಾನೂನು ವ್ಯಾಸಂಗ ಮಾಡುತ್ತಿದ್ದಾರೆ. ಗೀಲಾನಿಯವರನ್ನು 2001ರಲ್ಲಿ ಬಂಧಿಸಿದ ಬಳಿಕ, ಇವರಿಬ್ಬರು ಪ್ರಜ್ಞಾಪೂರ್ವಕವಾಗಿಯೇ ಕಾನೂನು ಅಧ್ಯಯನಕ್ಕೆ ಮುಂದಾಗಿದ್ದಾರೆ. ಗೀಲಾನಿ ಬಂಧನದ ಬಗ್ಗೆ ಮಾಧ್ಯಮ ಅಥವಾ ರಾಜಕಾರಣಿಗಳು ವೌನ ವಹಿಸಿ, ಇದು ಅಪ್ರಸ್ತುತ; ಈ ಬಗ್ಗೆ ಚರ್ಚೆಯ ಅಗತ್ಯವೇ ಇಲ್ಲ ಎಂಬ ಮನೋಭಾವ ಪ್ರದರ್ಶಿಸಿರುವುದು ನಿಜಕ್ಕೂ ಅವಮಾನಕರ.
ಗೀಲಾನಿ ಪತ್ನಿಗೆ, ನಿಮ್ಮ ಪತಿ ಜೈಲಿನಲ್ಲಿದ್ದಾರೆ. ನಾವು ನಿಮ್ಮನ್ನು ಹತ್ಯೆ ಮಾಡುತ್ತೇವೆ. ಮಕ್ಕಳನ್ನೂ ನಾವು ಕೊಲ್ಲುತ್ತೇವೆ. ಅವರಿಗೆ ತಯಾರಾಗಿ ಬರುವಂತೆ ಹೇಳುವುದು ಒಳ್ಳೆಯದು ಎಂದು ಬೆದರಿಕೆ ಹಾಕಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಮೂಲದವರಾದ ಗೀಲಾನಿ ಅವರಿಗೆ 2002ರ ಡಿಸೆಂಬರ್ 18ರಂದು ವಿಚಾರಣಾ ನ್ಯಾಯಾಲಯ ಮರಣ ದಂಡನೆ ವಿಧಿಸಿತ್ತು. 2003ರ ಅಕ್ಟೋಬರ್‌ನಲ್ಲಿ ಹೈಕೋರ್ಟ್ ಅವರನ್ನು ಎಲ್ಲ ಆರೋಪಗಳಿಂದ ಮುಕ್ತಗೊಳಿಸಿತು. 2005ರ ಆಗಸ್ಟ್‌ನಲ್ಲಿ ಸುಪ್ರೀಂಕೋರ್ಟ್, ಅವರ ಖುಲಾಸೆ ನಿರ್ಧಾರವನ್ನು ಎತ್ತಿಹಿಡಿಯಿತು.
ಅಫ್ಝಲ್ ಗುರುವಿಗೆ ತಿಹಾರ್ ಜೈಲಿನಲ್ಲಿ ಮರಣದಂಡನೆ ವಿಧಿಸಿದಾಗ, ಗೀಲಾನಿ ಯುಪಿಎ ಸರಕಾರದ ಈ ಕ್ರಮವನ್ನು, ಅತ್ಯಂತ ಕ್ರೂರ ಹಾಗೂ ರಾಜಕೀಯ ದುರುದ್ದೇಶದ ಗಿಮಿಕ್ ಎಂದು ಟೀಕಿಸಿದ್ದರು. ಪೊಲೀಸರು ಹಾಗೂ ತನಿಖಾ ಸಂಸ್ಥೆಗಳು ಅಫ್ಝಲ್ ವಿರುದ್ಧದ ಸಾಕ್ಷ್ಯಗಳನ್ನು ತಿರುಚಿವೆ; ಇಡೀ ವ್ಯವಸ್ಥೆಯೇ ಪಕ್ಷಪಾತದಿಂದ ನಡೆದುಕೊಂಡಿದ್ದು, ಆತ ಆ ಪಕ್ಷಪಾತ ನಿರ್ಧಾರದ ಬಿಸಿಯನ್ನು ಅನುಭವಿಸುತ್ತಿದ್ದಾನೆ ಎಂದು ಕಿಡಿ ಕಾರಿದ್ದರು.
ಸಂಸತ್ ಭವನದ ಮೇಲಿನ ದಾಳಿ ಘಟನೆ ಬಗ್ಗೆ ನಿಯತವಾಗಿ ಪ್ರಶ್ನೆಗಳನ್ನು ಎತ್ತುತ್ತಾ ಬಂದಿರುವ ಅವರು, ಪೊಲೀಸರು ಹಾಗೂ ನ್ಯಾಯಾಲಯದ ಕಾರ್ಯನಿರ್ವಹಣೆಯನ್ನು ಅತ್ಯಂತ ನಿಕಟವಾಗಿ ನೋಡುವ ಅವಕಾಶ ನನಗೆ ಸಿಕ್ಕಿತ್ತು. ತೀರಾ ಖೇದಕರ ವಿಚಾರವೆಂದರೆ, ಪೊಲೀಸರು ವಿಧಿವಿಧಾನಗಳನ್ನು ಮತ್ತು ಸುಪ್ರೀಂಕೋರ್ಟ್ ಸೂಚಿಸಿದ ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘಿಸಿ ನಡೆಸಿದ ವಿಚಾರಣೆ ಕಾನೂನುಬದ್ಧ ಎಂದು ವ್ಯಂಗ್ಯವಾಡಿದ್ದರು.
ಉದಾಹರಣೆಗೆ, ಪೊಲೀಸರು ನನ್ನ ಬಂಧನದ ನೋಟಿಸನ್ನು ತಿದ್ದಿದರು. ನನ್ನ ಬಂಧನದ ಬಗೆಗೆ ಪ್ರತಿಜ್ಞೆ ವೇಳೆ ಕೂಡಾ ಸುಳ್ಳು ಹೇಳಿದರು. ನನಗೆ ವಕೀಲನನ್ನು ಪಡೆಯುವ ಅವಕಾಶವನ್ನೂ ನಿರಾಕರಿಸಲಾಯಿತು. ಬಂಧನ ಹಾಗೂ ವಶದಲ್ಲಿ ಇಟ್ಟುಕೊಂಡಾಗ ಕೈಗೊಳ್ಳಬೇಕಾದ ಬಹುತೇಕ ಎಲ್ಲ ಸುರಕ್ಷತಾ ಕ್ರಮಗಳನ್ನೂ ರಾಜಾರೋಷವಾಗಿ ಉಲ್ಲಂಘಿಸಿದರು. ನನ್ನ ಪುಟ್ಟಮಕ್ಕಳನ್ನು ಕೂಡಾ ಬಂಧಿಸಿ, ಹಲವು ದಿನಗಳ ವರೆಗೆ ಕಸ್ಟಡಿಯಲ್ಲಿ ಇರಿಸಿಕೊಂಡರು.
ವಾಸ್ತವವಾಗಿ ತೀರಾ ಅಸಹ್ಯ ಮತ್ತು ಜಿಗುಪ್ಸೆ ಹುಟ್ಟಿಸುವ ವಿಚಾರವೆಂದರೆ, ಸದ್ಯದ ಆಡಳಿತ ವ್ಯವಸ್ಥೆ, ಯಾವನೇ ವ್ಯಕ್ತಿ ತನ್ನ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಕ್ಕನ್ನು ಚಲಾಯಿಸಿದರೆ, ಅವರಿಗೆ ರಾಷ್ಟ್ರವಿರೋಧಿ ಎಂದು ಹಣೆಪಟ್ಟಿ ಕಟ್ಟುತ್ತದೆ. ಹಾಗೂ ಅವರ ಮೇಲೆ ಅತ್ಯಂತ ಕ್ರೂರವಾದ ದೇಶದ್ರೋಹ, ಅಪರಾಧ ಸಂಚಿನಂಥ ಆರೋಪ ಹೊರಿಸಿ,ಜೈಲಿಗೆ ಕಳುಹಿಸುತ್ತದೆ. ಕಾಶ್ಮೀರದಲ್ಲಿ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯನ್ನು ಮಿತ್ರ ಪಕ್ಷವಾಗಿ ಜತೆಗೂಡಿಸಿಕೊಂಡಿದ್ದರೂ, ಸ್ವತಂತ್ರ ಕಾಶ್ಮೀರದ ಕಲ್ಪನೆಯೇ ಪ್ರಸ್ತುತ ಸರಕಾರಕ್ಕೆ ದಿಗಿಲು ಹುಟ್ಟಿಸುವಂಥದ್ದು. ಇದು ನಿಜಕ್ಕೂ ಅಣಕ.
ರಾಷ್ಟ್ರಪ್ರೇಮ ಎನ್ನುವುದು ಬಹುಮಟ್ಟಿಗೆ ವಿಷಯಾನುಸಾರವಾದ ಪರಿಕಲ್ಪನೆ. ಅದನ್ನು ಬಲಾತ್ಕಾರವಾಗಿ ನಾಗರಿಕರ ಮೇಲೆ ಹೇರಲಾಗದು. ದೇಶದಲ್ಲಿ ಘೋರವಾಗಿ ಆಚರಣೆಯಲ್ಲಿರುವ ಉಗ್ರ ರಾಷ್ಟ್ರೀಯತೆಯನ್ನು ಹೇರುವ ಬಗೆಗೆ ಚರ್ಚೆ ಮಾಡಿದರೆ ಅಥವಾ ಅದಕ್ಕಿಂತ ಭಿನ್ನ ನಿಲುವು ಪ್ರಕಟಿಸಿದರೆ, ಅವರನ್ನು ಶಿಕ್ಷಿಸಬೇಕೇ? ಹಾಗಾದರೆ ವಿಭಿನ್ನ ಚಿತ್ರಣ, ವಿಭಿನ್ನ ಸತ್ಯವನ್ನು ಪ್ರಸ್ತುತಪಡಿಸಲು ಪ್ರಯತ್ನ ನಡೆಸಿದ ಗೀಲಾನಿಯಂಥವರ ಧ್ವನಿ ಏನಾಗಬಹುದು? ಅವರನ್ನು ಯಾವುದೇ ಧ್ವನಿ ಇಲ್ಲದ ಸಂತ್ರಸ್ತರಾಗಿ, ದ್ವೇಷ ಮತ್ತು ಚಿತ್ರಹಿಂಸೆಯಿಂದ ನಲುಗುವಂತೆ ಮಾಡಬಹುದೇ? ಎಲ್ಲಿಯವರೆಗೆ ಸರಕಾರ ತನ್ನ ಅತ್ಯುಗ್ರ ರಾಷ್ಟ್ರೀಯತೆಯ ಕಾರ್ಯಸೂಚಿಯನ್ನು ಜಾರಿಗೊಳಿಸಲು, ಗೀಲಾನಿಯಂಥವರ ಧ್ವನಿಗಳಿಗೆ ಛೀಮಾರಿ ಹಾಕಿ ಅದುಮಿ ಇಡಲು ಸಾಧ್ಯ?
(ಶುಭದಾ ಚೌದ್ರಿ ಜೆಎನ್‌ಯು ಸಂಶೋಧನಾ ವಿದ್ಯಾರ್ಥಿನಿ)
(ಕೃಪೆ: countercurrents.org)







