ಡ್ರಗ್ಸ್ ವಿರುದ್ಧ ಜಾಗೃತಿಗಾಗಿ ವಿದ್ಯಾರ್ಥಿಗಳಿಂದ ವಾಕಥಾನ್

ಉಡುಪಿ, ಮಾ.2: ಉಡುಪಿ ಜಿಲ್ಲಾ ಪೊಲೀಸ್ ಹಾಗೂ ಸರ್ವ ಕಾಲೇಜು ವಿದ್ಯಾರ್ಥಿಗಳ ಸಂಘದ ನೇತೃತ್ವದಲ್ಲಿ ಏರ್‌ಟೆಲ್ 4ಜಿ, ಕೋಟ ರೋಟರಿ ಕ್ಲಬ್, ಮಣಿಪಾಲದ ಸಿಟಿ ಎಸ್ ಬ್ಯಾಂಕ್‌ನ ಸಹಯೋಗದೊಂದಿಗೆ ಮಾದಕ ವಸ್ತುಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ‘ವಾಕಥಾನ್-2016’ನ್ನು ಬುಧವಾರ ಸಂಜೆ ಉಡುಪಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಪುರಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮನೋ ತಜ್ಞ ಡಾ.ಪಿ.ವಿ.ಭಂಡಾರಿ ಮಾದಕ ವಸ್ತುಗಳ ಬಳಕೆಯ ದುಷ್ಪರಿಣಾ ಮಗಳನ್ನು ಬಿಂಬಿಸುವ ಪೋಸ್ಟರ್‌ಗಳನ್ನು ಬಿಡುಗಡೆ ಗೊಳಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಆಲ್ಕೋಹಾಲ್ ಹಾಗೂ ಸಿಗರೇಟ್ ಸೇವನೆ ಡ್ರಗ್ಸ್ ಚಟಕ್ಕೆ ಬಲಿಯಾಗುವ ಮುಖ್ಯ ದಾರಿಯಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಆಲ್ಕೋಹಾಲ್, ಸಿಗರೇಟ್, ಗುಟ್ಕಾದ ಬಗ್ಗೆ ಬಹಳಷ್ಟು ಎಚ್ಚರಿಕೆಯಿಂದ ಇರಬೇಕು. ಇವುಗಳಲ್ಲಿ ಮನಸ್ಸಿಗೆ ಖುಷಿ ಕೊಡುವಂತಹ ಯಾವುದೇ ಅಂಶಗಳಿಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.
ಈ ದುಶ್ಚಟಗಳು ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ನಾಶ ಮಾಡು ವುದಲ್ಲದೆ ಏಕಾಗ್ರತೆಯನ್ನು ಕುಗ್ಗಿಸಿ ಅಪರಾಧ ಕೃತ್ಯ ಎಸಗಲು ಪ್ರಚೋದನೆ ನೀಡುತ್ತದೆ. ಒಟ್ಟಾರೆ ಇಡೀ ಭವಿಷ್ಯವನ್ನು ಬಲಿ ಕೊಡುತ್ತದೆ. ನಮ್ಮ ನಿಜವಾದ ಶತ್ರುಗಳು ನೆರೆಯ ದೇಶಗಳಲ್ಲ, ಬದಲಾಗಿ ನಮ್ಮಾಳಗೆ ಇರುವ ಮಾದಕ ವಸ್ತುಗಳು. ಇದರ ವಿರುದ್ಧ ನಾವು ಹೋರಾಟ ನಡೆಸಬೇಕು ಎಂದರು.
ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಣ್ಣಾಮಲೈ ಮಾತನಾಡಿ, ಮಾದಕವಸ್ತುಗಳ ಬಗ್ಗೆ ಜಾಗೃತಿ ಮೂಡಿಸುವ ಕರಪತ್ರ ವಿತರಣೆ, ಸಣ್ಣ ಸಣ್ಣ ವೀಡಿಯೊ ತುಣುಕುಗಳನ್ನು ಪ್ರದರ್ಶಿಸಲಾಗುವುದು. ಮುಂದೆ ಇದೇ ರೀತಿ ಜಾಗೃತಿ ಕಾರ್ಯಕ್ರಮವನ್ನು ಮಾರ್ಚ್‌ನಲ್ಲಿ ಕುಂದಾಪುರ ಹಾಗೂ ಎಪ್ರಿಲ್‌ನಲ್ಲಿ ಕಾರ್ಕಳದಲ್ಲಿ ಆಯೋಜಿಸಲಾಗುವುದು ಎಂದರು.
ಬಳಿಕ ಪುರಭವನದ ಆವರಣದಲ್ಲಿ ಏರ್‌ಟೆಲ್‌ನ ಮಂಗಳೂರು ವಲಯ ಅಧಿಕಾರಿ ಅಜಯ್ ಕುಮಾರ್ ವಾಕ್‌ಥಾನ್‌ಗೆ ಚಾಲನೆ ನೀಡಿದರು. ಅಲ್ಲಿಂದ ಹೊರಟ ವಾಕಥಾನ್ ಜೋಡುಕಟ್ಟೆ, ಕೋರ್ಟ್ ರಸ್ತೆ, ಕೆ.ಎಂ.ಮಾರ್ಗವಾಗಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್‌ನಲ್ಲಿ ಸಮಾಪ್ತಿಗೊಂಡಿತು. ಇದರಲ್ಲಿ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು, ಪೊಲೀಸರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್‌ನ ಜಯಕರ ಶೆಟ್ಟಿ ಇಂದ್ರಾಳಿ, ಏರ್‌ಟೆಲ್ ಕಂಪೆನಿಯ ಹರಿಕೃಷ್ಣ, ವಿದ್ಯಾರ್ಥಿ ಸಂಘದ ಸ್ಥಾಪಕಾಧ್ಯಕ್ಷ ದಿನಕರ ಶೆಟ್ಟಿ, ಜಿಲ್ಲಾ ಅಧ್ಯಕ್ಷ ಭವಂತ್ ಪೂಜಾರಿ, ವಾರ್ತಾಧಿಕಾರಿ ರೋಹಿಣಿ, ಡಿವೈಎಸ್ಪಿ ಕುಮಾರ ಸ್ವಾಮಿ, ಕೋಟ ರೋಟರಿ ಕ್ಲಬ್‌ನ ಗಣೇಶ್ ಉಪಸ್ಥಿತರಿದ್ದರು. ಪೊಲೀಸ್ ಇಲಾಖೆಯ ಶಿವಾನಂದ ಸ್ವಾಗತಿಸಿದರು. ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.
ದೇಶದಲ್ಲಿ ಮಾದಕ ವಸ್ತುಗಳಿಗೆ ಸಂಬಂಧಿಸಿದ ಎನ್‌ಡಿಪಿಎಸ್ ಅಪರಾಧಗಳು ಶೇ.20ರಷ್ಟು ಹೆಚ್ಚಾಗುತ್ತಿದೆ. ಇದಕ್ಕೆ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ. ಉಡುಪಿಯಲ್ಲಿ ಒಟ್ಟು 43 ಸಾವಿರ ವಿದ್ಯಾರ್ಥಿಗಳಿದ್ದು, ಮುಂದಿನ ಜೂನ್ ತಿಂಗಳೊಳಗೆ ಈ ಕುರಿತು ಎಲ್ಲ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಲಾಗಿದೆ.
-ಅಣ್ಣಾಮಲೈ, ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ







