ಉಡುಪಿ: ಝಕಾತ್ ಫಂಡ್‌ನಿಂದ 3 ರಿಕ್ಷಾ ವಿತರಣೆ

ಉಡುಪಿ, ಮಾ.2: ಉಡುಪಿ ಮುಸ್ಲಿಮ್ ವೆಲ್‌ಫೇರ್ ಅಸೋಸಿಯೇಶನ್ ವತಿಯಿಂದ ಝಕಾತ್ ಫಂಡ್‌ನಿಂದ ಮೂರು ರಿಕ್ಷಾಗಳನ್ನು ಬಡ ಕುಟುಂಬ ಗಳಿಗೆ ಇಂದು ವಿತರಿಸಲಾಯಿತು.
ಉಡುಪಿ ಜಾಮಿಯ ಮಸೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಣ್ಣಾಮಲೈ ಅವರು, ಕಾಪು ಮಲ್ಲಾರಿನ ಹುಸೇನ್ ಬಾಷಾ, ನಾಯರ್‌ಕೆರೆಯ ಅಯ್ಯುಬ್ ಅಸದಿ, ಬೆಳಪುವಿನ ಮುಹಮ್ಮದ್ ಸಿದ್ದೀಕ್ ಅವರಿಗೆ ರಿಕ್ಷಾಗಳನ್ನು ಹಸ್ತಾಂತರಿಸಿದರು. ಝಕಾತ್ ಎಂಬುದು ಕೇವಲ ಇಸ್ಲಾಂ ಧರ್ಮದಲ್ಲಿ ಮಾತ್ರ ಇದ್ದು, ಬಡವರು ಸ್ವಾವಲಂಬಿಗಳಾಗಲು ರಿಕ್ಷಾ ವಿತರಣೆ ಮಾಡುತ್ತಿರುವುದು ಅತ್ಯಂತ ಮಾದರಿ ಕಾರ್ಯವಾಗಿದೆ ಎಂದು ಅಣ್ಣಾಮಲೈ ಹೇಳಿದರು. ಉಡುಪಿ ಜಿಲ್ಲೆಯಲ್ಲಿ ಪ್ರತಿವರ್ಷ 72 ಸಾವಿರ ಪಾಸ್‌ಪೋರ್ಟ್‌ಗಳಿಗೆ ಅರ್ಜಿಗಳು ಬರುತ್ತಿದ್ದು, ಅದರಲ್ಲಿ 40,000 ಮುಸ್ಲಿಮ್ ಸಮುದಾಯ ವರದ್ದಾಗಿದೆ. ಸಮುದಾಯ ಸಂಘ ಸಂಸ್ಥೆಗಳು ಇಲಾಖೆಯೊಂದಿಗೆ ಕೈಜೋಡಿಸಿ ಪಾಸ್‌ಪೋರ್ಟ್ ಮೇಳಗಳನ್ನು ನಡೆಸುವ ಮೂಲಕ 21 ದಿನಗಳಲ್ಲಿ ಬರುವ ಪಾಸ್‌ಪೋರ್ಟ್‌ನ್ನು 5 ದಿನಗಳಲ್ಲಿ ಬರು ವಂತೆ ಮಾಡಬಹುದಾಗಿದೆ ಎಂದರು.
ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಸಲಹಾ ಸಮಿತಿಯ ಸದಸ್ಯ ಅಕ್ಬರ್ ಅಲಿ, ಉಡುಪಿ ಜಾಮೀಯ ಮಸೀದಿಯ ಅಧ್ಯಕ್ಷ ಸೈಯದ್ ಯಾಸೀನ್, ಮಾಜಿ ಅಧ್ಯಕ್ಷ ಟಿ.ಎಸ್.ಬುಡಾನ್ ಬಾಷಾ, ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಅಶ್ಫಾಕ್ ಅಹ್ಮದ್, ಮಣಿಪಾಲ ಮಸೀದಿಯ ಅಧ್ಯಕ್ಷ ಹಾಜಿ ಅಬ್ದುಲ್ಲಾ ಪರ್ಕಳ ಉಪಸ್ಥಿತರಿದ್ದರು.
ಮಸೀದಿಯ ವೌಲಾನ ರಶೀದ್ ಅಹ್ಮದ್ ಉಮ್ರಿ ಕುರ್‌ಆನ್ ಪಠಿಸಿದರು. ಸಂಸ್ಥೆಯ ಕಾರ್ಯದರ್ಶಿ ವಿ.ಎಸ್.ಉಮರ್ ಸ್ವಾಗತಿಸಿದರು. ಅಧ್ಯಕ್ಷ ಅಬ್ದುಲ್ ಗಫೂರ್ ಕಲ್ಯಾಣಪುರ ವಂದಿಸಿದರು. ಮುಹಮ್ಮದ್ ವೌಲಾ ಕಾರ್ಯಕ್ರಮ ನಿರೂಪಿಸಿದರು.







