ಕನ್ಹಯ್ಯಾಗೆ ಮಧ್ಯಾಂತರ ಜಾಮೀನು

ಕನ್ಹಯ್ಯಾ ಕುಮಾರ್ ವಿರುದ್ಧ ದೇಶದ್ರೋಹದ ಆರೋಪವನ್ನು ದಾಖಲಿಸಿರುವ ಬಗ್ಗೆ ಪೊಲೀಸರಿಗೆ ಕೆಲವೊಂದು ಕಠಿಣ ಪ್ರಶ್ನೆಗಳನ್ನು ಕೇಳಿರುವ ನ್ಯಾಯಪೀಠವು, ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ ಘಟನೆಯಲ್ಲಿ ಅವರು ಸಕ್ರಿಯ ಪಾತ್ರವನ್ನು ವಹಿಸಿದ್ದರೆಂಬುದಕ್ಕೆ ಪುರಾವೆ ನೀಡುವಂತೆ ಆದೇಶಿಸಿದೆ.
ಹೊಸದಿಲ್ಲಿ, ಮಾ.2: ದೇಶದ್ರೋಹದ ಪ್ರಕರಣದಲ್ಲಿ ಬಂಧಿತರಾಗಿದ್ದ ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ಗೆ ದಿಲ್ಲಿ ಹೈಕೋರ್ಟ್ ಬುಧವಾರ ಆರು ತಿಂಗಳುಗಳ ಅವಧಿಗೆ ಮಧ್ಯಾಂತರ ಜಾಮೀನು ನೀಡಿದೆ. ಫೆಬ್ರವರಿ 9ರಂದು ಜೆಎನ್‌ಯು ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ ಆರೋಪ ಎದುರಿಸುತ್ತಿರುವ ಕನ್ಹಯ್ಯಿ ಕುಮಾರ್‌ಗೆ 10 ಸಾವಿರ ರೂ. ಭದ್ರತಾ ಖಾತರಿಯೊಂದಿಗೆ ಜಾಮೀನು ನೀಡಲಾಗಿದೆ.
ಕನ್ಹಯ್ಯ ಕುಮಾರ್ ಯಾವುದೇ ದೇಶವಿರೋಧಿ ಘೋಷಣೆಗಳನ್ನು ಕೂಗಿಲ್ಲವೆಂದು ಅವರ ವಕೀಲರು ದಿಲ್ಲಿ ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ ವಾದಿಸಿದ್ದರು. ಆದರೆ ದಿಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ದೂರಿನಲ್ಲಿ ಕನ್ಹಯ್ಯೆ ಮತ್ತಿತರರು ದೇಶವಿರೋಧಿ ಘೋಷಣೆಗಳನ್ನು ಕೂಗಿದ್ದರು ಹಾಗೂ ಸಂಸತ್‌ದಾಳಿ ಪ್ರಕರಣದ ಅಪರಾಧಿ ಅಫ್ಝಲ್ ಗುರುವಿನ ಪೋಸ್ಟರ್‌ಗಳನ್ನು ಹಿಡಿದಿದ್ದರೆಂದು ಆಪಾದಿಸಿದ್ದರು.ಕನ್ಹಯ್ಯಿ ಕುಮಾರ್ ತನಿಖೆಗೆ ಸಹಕರಿಸುತ್ತಿರಲಿಲ್ಲ ಹಾಗೂ ಗುಪ್ತಚರ ದಳ (ಐಬಿ) ಹಾಗೂ ದಿಲ್ಲಿ ಪೊಲೀಸರು ನಡೆಸಿದ ಜಂಟಿ ವಿಚಾರಣೆಯ ವೇಳೆ ಅವರು ವ್ಯತಿರಿಕ್ತ ಹೇಳಿಕೆಗಳನ್ನು ನೀಡಿದ್ದರೆಂದು ಅವರು ಆರೋಪಿಸಿದ್ದರು.
ದಿಲ್ಲಿ ಪೊಲೀಸರ ಆರೋಪವನ್ನು ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಸಹಿತ ಹಿರಿಯ ವಕೀಲರು ಪ್ರಶ್ನಿಸಿದ್ದಾರೆ. ಪ್ರತಿಭಟನೆಯ ವೇಳೆ ಮುಖಕ್ಕೆ ಮುಸುಕು ಹಾಕಿಕೊಂಡಿದ್ದ ಕೆಲವರು ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದರು. ಆಗ ಕನ್ಹಯ್ಯೆ ಅವರಲ್ಲಿ ಗುರುತುಚೀಟಿಗಳನ್ನು ನೀಡುವಂತೆ ಕೇಳುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆಯೆಂದು ಅವರು ವಾದಿಸಿದ್ದಾರೆ.ಕನ್ಹಯ್ಯಾ ಕುಮಾರ್ ವಿರುದ್ಧ ದೇಶದ್ರೋಹದ ಆರೋಪವನ್ನು ದಾಖಲಿಸಿರುವ ಬಗ್ಗೆ ಪೊಲೀಸರಿಗೆ ಕೆಲವೊಂದು ಕಠಿಣ ಪ್ರಶ್ನೆಗಳನ್ನು ಕೇಳಿರುವ ನ್ಯಾಯಪೀಠವು, ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ ಘಟನೆಯಲ್ಲಿ ಅವರು ಸಕ್ರಿಯ ಪಾತ್ರವನ್ನು ವಹಿಸಿದ್ದರೆಂಬುದಕ್ಕೆ ಪುರಾವೆ ನೀಡುವಂತೆ ಆದೇಶಿಸಿದೆ.
♦♦♦
ಜೆಎನ್‌ಯು ‘ದೇಶದ್ರೋಹ’ದ ವೀಡಿಯೊ ನಕಲಿ: ಫಾರೆನ್ಸಿಕ್ ಪ್ರಯೋಗಾಲಯ ವರದಿ ಬಹಿರಂಗ
ಕನ್ಹಯ್ಯ ಬಂಧನ ಪ್ರಕರಣಕ್ಕೆ ಹೊಸ ತಿರುವು
ಹೊಸದಿಲ್ಲಿ, ಮಾ.2: ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿವಾದಾತ್ಮಕ ಕಾರ್ಯಕ್ರಮದಲ್ಲಿ ಕೆಲವು ವಿದ್ಯಾರ್ಥಿಗಳು ದೇಶದ್ರೋಹದ ಘೋಷಣೆಗಳನ್ನು ಕೂಗಿದ್ದರೆಂಬುದಕ್ಕೆ ಪುರಾವೆಯೆಂದು ಪರಿಗಣಿಸಲಾದ ಎರಡು ವೀಡಿಯೊಗಳು ನಕಲಿಯೆಂದು ದಿಲ್ಲಿ ಸರಕಾರದ ಆದೇಶದನ್ವಯ ನಡೆಸಲಾದ ಅಪರಾಧ ವಿಧಿವಿಜ್ಞಾನ ಪ್ರಯೋಗಾಲಯದ ಪರೀಕ್ಷೆಯು ಬಹಿರಂಗಪಡಿಸಿದೆ.
ಹೈದರಾಬಾದ್‌ನಲ್ಲಿರುವ ‘ಟ್ರೂತ್ ಲ್ಯಾಬ್ಸ್ ಸಂಸ್ಥೆ’ಗೆ ಆಮ್ ಆದ್ಮಿ ಸರಕಾರವು ಏಳು ವೀಡಿಯೊಗಳನ್ನು ಪರಿಶೀಲನೆಗಾಗಿ ಕಳುಹಿಸಿಕೊಟ್ಟಿತ್ತು. ಈ ಪೈಕಿ ಎರಡು ವೀಡಿಯೊಗಳನ್ನು ಸ್ಪಷ್ಟವಾಗಿ ತಿರುಚಲಾಗಿದ್ದು, ಅವುಗಳಲ್ಲಿ ಬೇರೆ ಧ್ವನಿಗಳನ್ನು ಸೇರ್ಪಡೆಗೊಳಿಸಿರುವುದು ದೃಢಪಟ್ಟಿದೆಯೆಂದು ಟ್ರೂತ್ ಲ್ಯಾಬ್ಸ್ ಸಂಸ್ಥೆಯ ಅಧ್ಯಕ್ಷ ಕೆ.ಪಿ.ಸಿ.ಗಾಂಧಿ ತಿಳಿಸಿದ್ದಾರೆ.
‘‘ವೀಡಿಯೊದಲ್ಲಿ ನಿರಂತರತೆ ಕಂಡುಬರುತ್ತಿಲ್ಲ ಹಾಗೂ ಧ್ವನಿಯನ್ನು ಬೇರೆಲ್ಲಿಂದಲೋ ಸೇರಿಸಲಾಗಿದೆ. ಒಂದು ವೇಳೆ ನಮಗೆ ಧ್ವನಿಯ ಮಾದರಿಗಳನ್ನು ಒದಗಿಸಿದಲ್ಲಿ, ಯಾರ ಧ್ವನಿಯನ್ನು ಸೇರ್ಪಡೆಗೊಳಿಸಲಾಗಿದೆಯೆಂಬುದನ್ನು ನಿರ್ಧರಿಸಲು ಸಾಧ್ಯವಿದೆ’’ ಎಂದು ಗಾಂಧಿ ತಿಳಿಸಿದ್ದಾರೆ.
ಈ ತಿರುಚಲ್ಪಟ್ಟ ವೀಡಿಯೊಗಳು ಮೂಲತಃ ಯೂಟ್ಯೂಬ್ ಹಾಗೂ ಟ್ವಿಟರ್‌ಗಳಲ್ಲಿ ಪ್ರಸಾರಗೊಂಡಿದ್ದವು. ಈ ವೀಡಿಯೊದಲ್ಲಿ ಘೋಷಣೆಗಳನ್ನು ಕೂಗುವ ದೃಶ್ಯದ ತುಣುಕುಗಳನ್ನು ಬೇರೆಯೇ ದಿನಗಳಲ್ಲಿ ತೆಗೆಯಲಾಗಿತ್ತೆಂದು ಅವರು ಹೇಳಿದ್ದಾರೆ.







