ಜರ್ಮನ್ ಓಪನ್:ಶ್ರೀಕಾಂತ್, ಕಶ್ಯಪ್ ಎರಡನೆ ಸುತ್ತಿಗೆ ಪ್ರವೇಶ
ಬರ್ಲಿನ್, ಮಾ.2: ಭಾರತದ ಅಗ್ರ ಶಟ್ಲರ್‌ಗಳಾದ ಕಿಡಂಬಿ ಶ್ರೀಕಾಂತ್ ಹಾಗೂ ಪಾರುಪಲ್ಲಿ ಕಶ್ಯಪ್ ಜರ್ಮನ್ ಓಪನ್‌ನ ಪುರುಷರ ಸಿಂಗಲ್ಸ್‌ನಲ್ಲಿ ಎರಡನೆ ಸುತ್ತು ಪ್ರವೇಶಿಸಿದ್ದಾರೆ.
ಈ ವರ್ಷದ ಜನವರಿಯಲ್ಲಿ ಲಕ್ನೋದಲ್ಲಿ ನಡೆದ ಸೈಯದ್ ಮೋದಿ ಗ್ರಾನ್ ಪ್ರಿ ಗೋಲ್ಡ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿರುವ ಶ್ರೀಕಾಂತ್ ಮಂಗಳವಾರ ರಾತ್ರಿ ನಡೆದಿರುವ ಪಂದ್ಯದಲ್ಲಿ ಜಪಾನ್‌ನ ಟಕುಮಾ ಯುಯೆಡಾರನ್ನು 12-21, 21-18, 21-11 ಸೆಟ್‌ಗಳಿಂದ ಮಣಿಸಿದರು.
ಆರನೆ ಶ್ರೇಯಾಂಕದ ಶ್ರೀಕಾಂತ್ ಮುಂದಿನ ಸುತ್ತಿನಲ್ಲಿ ಹಾಲೆಂಡ್‌ನ ಎರಿಕ್ ಮೆಜ್ಸ್‌ರನ್ನು ಎದುರಿಸಲಿದ್ದಾರೆ.
ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಕಶ್ಯಪ್ ಉಕ್ರೇನ್‌ನ ಅರ್ಟೆಮ್ ಪಾಚ್ಟೆರೇವ್‌ರನ್ನು 21-9, 21-9 ಸೆಟ್‌ಗಳ ಅಂತರದಿಂದ ಸೋಲಿಸಿದರು.
ಗಾಯದ ಸಮಸ್ಯೆಯಿಂದಾಗಿ ಒಂದು ತಿಂಗಳ ನಂತರ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ 11ನೆ ಶ್ರೇಯಾಂಕದ ಕಶ್ಯಪ್ ಎರಡನೆ ಸುತ್ತಿನ ಪಂದ್ಯದಲ್ಲಿ ಐರ್ಲೆಂಡ್‌ನ ಜೊಶುಯಾ ಮಾಗೀ ಅವರನ್ನು ಎದುರಿಸಲಿದ್ದಾರೆ.
ಯುವ ಬ್ಯಾಡ್ಮಿಂಟನ್ ಆಟಗಾರ ಸಮೀರ್ ವರ್ಮ ಅವರು ಡಿಮಿಟ್ರೋ ಝವಾಡ್‌ಸ್ಕಿ ವಿರುದ್ಧ 21-9, 21-8 ಸೆಟ್‌ಗಳ ಅಂತರದಿಂದ ಸೋಲಿಸಿ ಎರಡನೆ ಸುತ್ತಿಗೆ ತಲುಪಿದರು. ಎರಡನೆ ಸುತ್ತಿನಲ್ಲಿ ಕೊರಿಯಾದ 15ನೆ ಶ್ರೇಯಾಂಕದ ಲೀ ಡಾಂಗ್ ಕಿಯೂನ್‌ರನ್ನು ಎದುರಿಸಲಿದ್ದಾರೆ.







