ನಗರದಲ್ಲಿ ಇಂದು ಟ್ರಕ್, ಟ್ರಾಕ್ಟರ್‌ಪ್ರವೇಶ ನಿರ್ಬಂಧ: ಮೇಘರಿಕ್
ಬೆಂಗಳೂರು, ಮಾ.2: ಶಾಶ್ವತ ನೀರಾವರಿ ಹೋರಾಟ ಸಮಿತಿಯಿಂದ ಮಾ.3ರಂದು ನಗರದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ನಗರದ ಕೆಲವು ಪ್ರದೇಶಗಳಲ್ಲಿ ಲಾರಿಗಳನ್ನು ಹೊರತುಪಡಿಸಿ ಟ್ರಕ್‌ಗಳು ಮತ್ತು ಟ್ರಾಕ್ಟರ್‌ಗಳ ಸಂಚಾರವನ್ನು ಬೆಳಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ನಿಷೇಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಯುವಶಕ್ತಿ ವತಿಯಿಂದ ಬಯಲು ಸೀಮೆಗಳಿಗೆ ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿ ಚಿಕ್ಕಬಳ್ಳಾಪುರದಿಂದ ಟ್ರಾಕ್ಟರ್ ಮತ್ತು ಟ್ರಕ್‌ಗಳ ಮೂಲಕ ಬೃಹತ್ ಮೆರವಣಿಗೆ ನಡೆಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ ಎಂದು ಹೇಳಿಕೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಫೆ.29ರಿಂದ ವಿಧಾನಸೌಧ ಮತ್ತು ವಿಧಾನಪರಿಷತ್ ಅಧಿವೇಶನಗಳು ಪ್ರಾರಂಭವಾಗಿರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಎಚ್ಚರಿಕೆ ವಹಿಸಿ ತುಮಕೂರು ಕಡೆಯಿಂದ ಯಶವಂತಪುರ ಆರ್.ಎಂ.ಸಿಗೆ ಬರುವ ಲಾರಿಗಳನ್ನು ಹೊರತು ಪಡಿಸಿ ಹಾಗೂ ನಗರಕ್ಕೆ ಪ್ರವೇಶ ಕಲ್ಪಿಸುವ ಎಲ್ಲಾ ಮಾರ್ಗಗಳಲ್ಲಿ ಟ್ರಾಕ್ಟರ್ ಮತ್ತು ಟ್ರಕ್‌ಗಳ ಸಂಚಾರವನ್ನು ರದ್ದುಪಡಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.





