ಸಸೆಕ್ಸ್ ತಂಡದೊಂದಿಗೆ ಮುಸ್ತಫಿಝರ್ರಹ್ಮಾನ್ ಒಪ್ಪಂದ

ಲಂಡನ್, ಮಾ.2: ಇಂಗ್ಲೆಂಡ್ ಕೌಂಟಿ ತಂಡ ಸಸೆಕ್ಸ್ ಬಾಂಗ್ಲಾದೇಶದ ಎಡಗೈ ವೇಗದ ಬೌಲರ್ ಮುಸ್ತಫಿಝರ್ರಹ್ಮಾನ್‌ರೊಂದಿಗೆ ಬುಧವಾರ ಒಪ್ಪಂದ ಮಾಡಿಕೊಂಡಿದೆ.
ರಹ್ಮಾನ್ 2016ರಲ್ಲಿ ಇಂಗ್ಲೆಂಡ್ ಕೌಂಟಿ ತಂಡ ಸೇರ್ಪಡೆಯಾಗುತ್ತಿರುವ ಎರಡನೆ ವಿದೇಶಿ ಆಟಗಾರ. ಸಸೆಕ್ಸ್ ತಂಡದ ಒಪ್ಪಂದಕ್ಕೆ ಸಹಿ ಹಾಕಿರುವ 20ರ ಹರೆಯದ ರಹ್ಮಾನ್ ತಮ್ಮದೇ ದೇಶದ ಶಾಕಿಬ್ ಉಲ್ ಹಸನ್ ಹಾಗೂ ತಮೀಮ್ ಇಕ್ಬಾಲ್ ಹೆಜ್ಜೆ ಅನುಸರಿಸಿದ್ದಾರೆ. ಹಸನ್ ಹಾಗೂ ಇಕ್ಬಾಲ್ ಈ ಹಿಂದೆ ಕೌಂಟಿ ತಂಡದಲ್ಲಿ ಆಡಿದ್ದರು.
ರಹ್ಮಾನ್ ಸಸೆಕ್ಸ್ ಕ್ಲಬ್‌ನಲ್ಲಿ 50 ಓವರ್ ಹಾಗೂ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಆಡಲಿದ್ದಾರೆ.
ರಹ್ಮಾನ್ ಮೊದಲ ಎರಡು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಎರಡು ಬಾರಿಯೂ ಐದು ವಿಕೆಟ್ ಗೊಂಚಲು ಪಡೆಯುವ ಮೂಲಕ ವಿಶ್ವದ ಗಮನ ತನ್ನತ್ತ ಸೆಳೆದಿದ್ದರು.
2015ರಲ್ಲಿ ಚೊಚ್ಚಲ ಪಂದ್ಯ ಆಡಿದ ಹೊರತಾಗಿಯೂ ಐಸಿಸಿ ವರ್ಷದ ಏಕದಿನ ತಂಡದಲ್ಲಿ ರಹ್ಮಾನ್ ಸ್ಥಾನ ಪಡೆದಿದ್ದರು.
‘‘ಕೌಂಟಿ ಕ್ರಿಕೆಟ್‌ನಲ್ಲಿ ಆಡುವ ಅವಕಾಶ ಪಡೆದಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಇಂಗ್ಲೆಂಡ್‌ನಲ್ಲಿ ಆಡುವುದು ನನ್ನ ಗುರಿಯಾಗಿತ್ತು. ತನಗೆ ಅವಕಾಶ ನೀಡಿರುವ ಸಸೆಕ್ಸ್ ತಂಡಕ್ಕೆ ಕೃತಜ್ಞತೆ ಸಲ್ಲಿಸುವೆ. ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ತನ್ನ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವೆನು’’ ಎಂದು ರಹ್ಮಾನ್ ಪ್ರತಿಕ್ರಿಯಿಸಿದ್ದಾರೆ.
ರಹ್ಮಾನ್ ಪ್ರಸ್ತುತ ಗಾಯದ ಸಮಸ್ಯೆಗೆ ಸಿಲುಕಿದ್ದು ಏಷ್ಯಾಕಪ್‌ನ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಗಾಯದಿಂದ ಚೇತರಿಸಿಕೊಂಡ ಬಳಿಕ ಭಾರತದಲ್ಲಿ ಟ್ವೆಂಟಿ-20 ವಿಶ್ವಕಪ್ ಹಾಗೂ ಐಪಿಎಲ್‌ನಲ್ಲಿ ಆಡಲಿರುವ ರಹ್ಮಾನ್ ಆ ಬಳಿಕ ಲಂಡನ್‌ಗೆ ಪ್ರಯಾಣಿಸಲಿದ್ದಾರೆ.







