ಕಸ ವಿಲೇವಾರಿ ಘಟಕ ಸ್ಥಗಿತಗೊಳಿಸಲು ಆಗ್ರಹಿಸಿ ಇಂದಿನಿಂದ ಧರಣಿ
ಬೆಂಗಳೂರು, ಮಾ.2: ಯಶವಂತಪುರ ವಿಭಾಗದ ಕನ್ನಳ್ಳಿ, ಶೀಗೇಹಳ್ಳಿ ವ್ಯಾಪ್ತಿಯಲ್ಲಿನ ಕಸ ವಿಲೇವಾರಿ ಘಟಕಗಳನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ಫೆ.3ರಿಂದ ಅನಿರ್ದಿಷ್ಟಾವಧಿ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಘಟಕ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಚನ್ನಪ್ಪ ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಉತ್ಪಾದನೆಯಾಗುವ ಕಸವನ್ನು ತಂದು ಇಲ್ಲಿ ಸುರಿಯಲಾಗುತ್ತಿದೆ. ಇದರಿಂದಾಗಿ ಉತ್ಪಾದನೆಯಾಗುವ ಸೊಳ್ಳೆ, ನೊಣಗಳಿಂದ ಸುತ್ತಮುತ್ತಲಿನ 7 ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರಿದ ಹಳ್ಳಿಗಳಲ್ಲಿನ ಜನ ವಾಂತಿ, ಭೇದಿ, ಕೆಮ್ಮು ಇನ್ನಿತರ ಸಾಂಕ್ರಾಮಿಕ ರೋಗಗಳಿಂದ ನರಳುತ್ತಿದ್ದಾರೆ. ಈ ವ್ಯಾಪ್ತಿಯ ಜನ ತಮ್ಮ ಮನೆಗಳಿಗೆ ನಿರಂತರವಾಗಿ ಬಾಗಿಲು ಮುಚ್ಚಿಕೊಂಡು ಬದುಕಬೇಕಾಗಿದೆ. ಅಲ್ಲದೆ ಸುತ್ತಮುತ್ತ ಕಾರ್ಖಾನೆ, ಬಸ್‌ನಿಲ್ದಾಣ, ಖಾಸಗಿ ಕಾಲೇಜುಗಳಿವೆ. ಇಲ್ಲಿ ಪ್ರತಿನಿತ್ಯ ಸಾವಿರಾರು ಜನ ಪ್ರಯಾಣಿಸುತ್ತಾರೆ. ಆದ್ದರಿಂದ ಈ ಕೂಡಲೇ ಅದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಶಂಕುಸ್ಥಾಪನೆ ಸಂದರ್ಭದಲ್ಲಿ ವಿರೋಧ ಬಂದ ನಂತರ ಸ್ಥಳೀಯ ಶಾಸಕ ಮತ್ತು ಬಿಬಿಎಂಪಿ ಅಧಿಕಾರಿಗಳು ವಿದೇಶದಲ್ಲಿ ಅಧ್ಯಯನ ಮಾಡಿಕೊಂಡು ಬಂದಿರುವ ರೀತಿಯಲ್ಲಿ ಮಾಡಲಾಗುತ್ತಿದೆ ಎಂಬ ಮಾತನ್ನು ಹೇಳಿದ್ದರು. ಆದರೆ ಈಗ ಅದನ್ನು ಮರೆತಿದ್ದಾರೆ. ಆದ್ದರಿಂದ ಘಟಕ ಸ್ಥಗಿತಗೊಳಿಸುವ ವಿಚಾರದಲ್ಲಿ ಸರಕಾರ ವುಧ್ಯಪ್ರವೇಶ ಮಾಡಬೇಕು ಎಂದು ನಾಳೆಯಿಂದ ತಾವರೆಕೆರೆ ಮತ್ತು ನೈಸ್ ರಸ್ತೆ ಮಧ್ಯಭಾಗದಲ್ಲಿನ ಸೀಗೇಹಳ್ಳಿಯಲ್ಲಿ ಅನಿರ್ದಿಷ್ಟಾವಧಿ ಧರಣಿಯನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.





