ಕಾರ್ತಿ ಚಿದಂಬರಂ ಕುರಿತು ಎರಡನೆ ದಿನವೂ ಸಂಸತ್ ಕಲಾಪಕ್ಕೆ ವ್ಯತ್ಯಯ

ಹೊಸದಿಲ್ಲಿ: ಏರ್‌ಸೆಲ್-ಮ್ಯಾಕ್ಸಿಸ್ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಎಡಿಎಂಕೆ ಸದಸ್ಯರು ಸತತ ಎರಡನೆ ದಿನವಾದ ಬುಧವಾರವೂ ಲೋಕಸಭೆಯಲ್ಲಿ ಕೋಲಾಹಲವನ್ನು ಸೃಷ್ಟಿಸಿದರು.
ಬೆಳಗ್ಗೆ ಸದನವು ಸಮಾವೇಶಗೊಂಡ ಬೆನ್ನಿಗೇ ಘೋಷಣೆಗಳನ್ನು ಕೂಗುತ್ತ ಸ್ಪೀಕರ್ ಪೀಠದತ್ತ ಧಾವಿಸಿದ ಎಡಿಎಂಕೆ ಸದಸ್ಯರು ಸರಕಾರದಿಂದ ಕ್ರಮಕ್ಕೆ ಒತ್ತಾಯಿಸಿದರು.
ಕೋಲಾಹಲದ ನಡುವೆಯೇ ಸಂಸದೀಯ ವ್ಯವಹಾರಗಳ ಸಚಿವ ಎಂ.ವೆಂಕಯ್ಯ ನಾಯ್ಡು ಅವರು,ವಿಷಯದ ಕುರಿತು ಚರ್ಚಿಸಲು ಮತ್ತು ಅಗತ್ಯ ಕ್ರಮವನ್ನು ಕೈಗೊಳ್ಳಲು ಸರಕಾರಕ್ಕೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದರು.
ಪ್ರಶ್ನೆಯ ವೇಳೆಯ ಬಳಿಕ ಚರ್ಚೆಗೆ ಅವಕಾಶ ನೀಡುವುದಾಗಿ ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದಾಗ ಪ್ರತಿಭಟನಾನಿರತ ಎಡಿಎಂಕೆ ಸದಸ್ಯರು ತಮ್ಮ ಸ್ಥಾನಗಳಿಗೆ ಮರಳಿದರು.
ಇದಕ್ಕೂ ಮುನ್ನ ಕಾರ್ತಿ ಅವರ ಕಚೇರಿ ಮತ್ತು ನಿವಾಸದಲ್ಲಿ ಶೋಧ ಕಾರ್ಯಾಚರಣೆಗಳ ಸಂದರ್ಭ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ್ದ ತನಿಖೆಗಳಂತೆ ಅವರು ವಿವಿಧ ದೇಶಗಳಲ್ಲಿ ರಿಯಲ್ ಎಸ್ಟೇಟ್‌ಗಳಲ್ಲಿ ಹೂಡಿಕೆಗಳನ್ನು ಮಾಡಿದ್ದಾರೆಂದು ವರದಿ ಮಾಡಿದ್ದ ವೃತ್ತಪತ್ರಿಕೆಯ ಪ್ರತಿಗಳನ್ನು ಎಡಿಎಂಕೆ ಸದಸ್ಯರು ಪ್ರದರ್ಶಿಸಿದ್ದರು. ಈ ವಿಷಯದಲ್ಲಿ ಚರ್ಚೆಗೆ ಅವಕಾಶ ನೀಡುವ ಸ್ಪೀಕರ್ ನಿರ್ಧಾರವನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ನುಗ್ಗಿದರು. ಚರ್ಚೆಗೆ ಹೇಗೆ ಅವಕಾಶ ನೀಡಲಾಗುತ್ತದೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಶ್ನಿಸಿದರು.







