ಇಂದು ‘ಉಗುಳು ಚಳವಳಿ’
ಬೆಂಗಳೂರು,ಮಾ.2: ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳಿಂದ ನೀಡದೇ ಬಾಕಿ ಉಳಿಸಿಕೊಂಡಿರುವ ಹಣವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಮಾ.3ರಂದು ಸರಕಾರದ ವಿರುದ್ಧ ‘ಉಗುಳುವ ಚಳವಳಿ’ಯನ್ನು ಹಮ್ಮಿಕೊಳ್ಳಲಾಗಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ್, ಕಬ್ಬು ಬೆಳೆಗಾರರ ಬಾಕಿ ಹಣ ಬಿಡುಗಡೆ ಮಾಡುವಲ್ಲಿ ಸರಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ಹರಿಹಾಯ್ದರು.
ರಾಜ್ಯದಲ್ಲಿ ಕಬ್ಬು ಬೆಳೆಗಾರರಿಗೆ 4 ಸಾವಿರ ಕೋಟಿಗೂ ಅಧಿಕ ಹಣವನ್ನು ರಾಜ್ಯ 62 ಸಕ್ಕರೆ ಕಾರ್ಖಾನೆಗಳಿಂದ ನೀಡಬೇಕು. ಎಫ್‌ಆರ್‌ಪಿ ನಿಯಮದಂತೆ 14 ದಿನಗಳಲ್ಲಿ ಹಣ ಪಾವತಿ ಮಾಡಬೇಕು ಎಂದು ಆದೇಶವಿದ್ದರೂ, 4 ತಿಂಗಳಿಂದ ಹಣ ಪಾವತಿ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಾಕಿ ಹಣ ಬಿಡುಗಡೆ ಮಾಡಬೇಕು ಎಂದು ಹಲವು ಸಭೆ, ಹೋರಾಟಗಳು, ಮನವಿಗಳು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ನಾಳೆ ನಗರದ ರೈಲ್ವೆ ನಿಲ್ದಾಣದಿಂದ ರಾಜ್ಯದ ಕಬ್ಬು ಬೆಳೆಗಾರರು ಮೆರವಣಿಗೆ ಮೂಲಕ ಆಗಮಿಸಿ ವಿಧಾನಸೌಧ ಮುಂಭಾಗ ಬೃಹತ್ ಪ್ರತಿಭಟನೆ ಮತ್ತು ಉಗುಳುವ ಚಳವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.





