ಅಫಿದಾವಿತ್ ಕುರಿತು ಸಿಬಿಐ ನನಗೆ ಚಿತ್ರಹಿಂಸೆ ನೀಡಿತ್ತು
ಗೃಹ ಸಚಿವಾಲಯದ ಮಾಜಿ ಅಧಿಕಾರಿಯ ಆರೋಪ
ಹೊಸದಿಲ್ಲಿ: ಇಶ್ರತ್ ಜಹಾನ್ ಪ್ರಕರಣ ಕುರಿತಂತೆ ಹೊಸ ರಾಜಕೀಯ ಸಮರಕ್ಕೆ ಕಾರಣವಾಗಿರುವ ಗೃಹ ಸಚಿವಾಲಯದ ಅಫಿದಾವಿತ್‌ಗಳ ಹಿಂದಿದ್ದ ಹಿರಿಯ ಅಧಿಕಾರಿ ಆರ್.ವಿ.ಎಸ್. ಮಣಿ ಅವರು, ಉರಿಯುತ್ತಿದ್ದ ಸಿಗರೇಟ್‌ನಿಂದ ತನ್ನ ಮೈಯನ್ನು ಸುಟ್ಟಿದ್ದ ಸಿಬಿಐ ಅಧಿಕಾರಿಗಳು ತನ್ನ ಹಿಂದೆ ಬಿದ್ದು ಕಾಡಿದ್ದರು ಮತ್ತು ತಾನು ಉದ್ಯೋಗಕ್ಕೆ ರಾಜೀನಾಮೆ ನೀಡಲು ಕೂಡ ಬಯಸಿದ್ದೆ ಎಂದು ಆರೋಪಿಸಿದ್ದಾರೆ.
ಮಾಜಿ ಗೃಹಸಚಿವ ಪಿ.ಚಿದಂಬರಂ ಅವರು ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಳ್ಳುವುದು ಸೇರಿದಂತೆ ರಾಜಕೀಯ ಕಾರಣಗಳಿಂದಾಗಿ ಇಶ್ರತ್ ಪ್ರಕರಣದಲ್ಲಿಯ ಎರಡು ಅಫಿದಾವಿತ್‌ಗಳನ್ನು ತಿದ್ದಿದ್ದರು ಎನ್ನುವುದು ಆಡಳಿತ ಬಿಜೆಪಿಯ ಆರೋಪಗಳ ಮುಖ್ಯ ಅಂಶವಾಗಿದೆ.
2013ರಲ್ಲಿ ತನಗೆ ತೀವ್ರ ಕಿರುಕುಳ ನೀಡಲಾಗಿತ್ತು ಎಂದು ಆಗ ಚಿದಂಬರಂ ನೇತೃತ್ವದ ಗೃಹ ಸಚಿವಾಲಯದಲ್ಲಿ ಅಧೀನ ಕಾರ್ಯದರ್ಶಿಯಾಗಿದ್ದ ಮಣಿ ತಿಳಿಸಿದರು. ಸಿಬಿಐ ಅಧಿಕಾರಿ ಸತೀಶ ವರ್ಮಾ ತನಗೆ ಚಿತ್ರಹಿಂಸೆ ನೀಡಿದ್ದರು, ಉರಿಯುತ್ತಿದ್ದ ಸಿಗರೇಟಿನಿಂದ ತನ್ನ ತೊಡೆಗಳನ್ನು ಸುಟ್ಟಿದ್ದರು ಎಂದರು.
ಗುಜರಾತ್ ಪೊಲೀಸರಿಂದ ಇಶ್ರತ್ ಜಹಾನ್(19) ಮತ್ತು ಇತರ ಮೂವರ ಹತ್ಯೆ ಕುರಿತು 2009ರಲ್ಲಿ ಗೃಹ ಸಚಿವಾಲಯವು ಗುಜರಾತ್ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಎರಡು ಅಫಿದಾವತ್‌ಗಳಲ್ಲಿ ಮಣಿಯವರ ಹೆಸರು ಉಲ್ಲೇಖಗೊಂಡಿತ್ತು. ಹತರಾದ ನಾಲ್ವರೂ ಲಷ್ಕರ್ ಉಗ್ರರಾಗಿದ್ದು ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿಯವರ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಪೊಲೀಸರು ಪ್ರತಿಪಾದಿಸಿದ್ದರು.
ಇಶ್ರತ್ ಲಷ್ಕರ್‌ನ ಭಯೋತ್ಪಾದಕಿಯಾಗಿದ್ದಳು ಎಂಬ ಗುಪ್ತಚರ ಮಾಹಿತಿ ಮತ್ತು ಮಾಧ್ಯಮಗಳ ವರದಿಗಳನ್ನು ಉಲ್ಲೇಖಿಸಿದ್ದ ಮೊದಲ ಅಫಿದಾವಿತ್‌ನ್ನು ಮಾತ್ರ ತಾನು ಬರೆದಿದ್ದೆ ಎಂದು ಮಣಿ ಹೇಳಿದರು.
ಮುಂದಿನ ತಿಂಗಳಲ್ಲಿಯೇ ಸಲ್ಲಿಸಲಾಗಿದ್ದ ಪರಿಷ್ಕೃತ ಅಫಿದಾವಿತ್ ಇಶ್ರತ್ ಭಯೋತ್ಪಾದಕಿಯಾಗಿದ್ದಳು ಎನ್ನುವುದಕ್ಕೆ ಯಾವುದೇ ನಿರ್ಣಾಯಕ ಸಾಕ್ಷಾಧಾರವಿಲ್ಲ ಎಂದು ತಿಳಿಸಿತ್ತು.
ಮೊದಲ ಅಫಿದಾವಿತ್‌ನ್ನು ತಾನು ಸಲ್ಲಿಸಿದ್ದೆ ಮತ್ತು ಅದಕ್ಕೆ ಗೃಹ ಸಚಿವರು ಹಾಗೂ ಗೃಹ ಕಾರ್ಯದರ್ಶಿಗಳ ಒಪ್ಪಿಗೆ ದೊರಕಿತ್ತು. ಎರಡನೆ ಅಫಿದಾವಿತ್ ಸಲ್ಲಿಸಲು ಕಾರಣವೇನಾಗಿತ್ತು ಎನ್ನುವುದು ತನಗೆ ಗೊತ್ತಿಲ್ಲ ಎಂದು ಮಣಿ ತಿಳಿಸಿದರು.
ಮೊದಲ ಅಫಿದಾವಿತ್‌ನ್ನು ತಾನು ಗುಪ್ತಚರ ಸಂಸ್ಥೆ(ಐಬಿ)ಯ ಒತ್ತಡದಡಿ ಬರೆದಿದ್ದೆ ಎಂದು ತಾನು ಹೇಳಿಕೆ ನೀಡುವಂತೆ ಮಾಡಲು ಸಿಬಿಐ ಯತ್ನಿಸಿತ್ತು ಎಂದರು.
ಸಿಬಿಐ ತನಗೆ ಚಿತ್ರಹಿಂಸೆ ನೀಡಿದ್ದನ್ನು ತಾನು ಮೇಲಾಧಿಕಾರಿಗಳಿಗೆ ಸಲ್ಲಿಸಿದ್ದ ದೂರಿನಲ್ಲಿ ದಾಖಲಿಸಿದ್ದೆ ಎಂದೂ ಅವರು ತಿಳಿಸಿದರು.





