ಭಾರತದಿಂದ ಮುಕ್ತಿಯಲ್ಲ; ಆಂತರಿಕ ಸ್ವಾತಂತ್ರ್ಯಕ್ಕೆ ಹೋರಾಟ-ಕನ್ಹಯ್ಯಾ

ಹೊಸದಿಲ್ಲಿ, ಮಾ.4: ಮೂರು ವಾರಗಳ ಜೈಲುವಾಸ ಬಳಿಕ ತಿಹಾರ್ ಜೈಲಿನಿಂದ ಗುರುವಾರ ಬಿಡುಗಡೆಯಾದ ಕನ್ಹಯ್ಯಾ ಕುಮಾರ್‌ಗೆ ವಿದ್ಯಾರ್ಥಿ ಸಮುದಾಯ ಮತ್ತು ನಾಗರಿಕ ಸಮಾಜ ಭವ್ಯ, ವೈಭವೋಪೇತ ಸ್ವಾಗತ ನೀಡಿತು.
ದೇಶದ್ರೋಹ ಆರೋಪದಲ್ಲಿ ಜೈಲು ಸೇರಿದ್ದ ವಿದ್ಯಾರ್ಥಿ ಮುಖಂಡ, ತಮ್ಮ ಮೊದಲ ಭಾಷಣದಲ್ಲಿ, "ಭಾರತದಿಂದ ಸ್ವಾತಂತ್ರ್ಯಕ್ಕಾಗಿ ಎಂದೂ ಆಗ್ರಹಿಸಿರಲಿಲ್ಲ; ಆಂತರಿಕ ಸ್ವಾತಂತ್ರ್ಯಕ್ಕಾಗಿ ನಮ್ಮ ಹೋರಾಟ" ಎಂದು ಭಾವುಕರಾಗಿ ನುಡಿದರು.
ಜೆಎನ್‌ಯು ಕ್ಯಾಂಪಸ್‌ಗೆ ಕನ್ಹಯ್ಯಾ ವಾಪಾಸ್ಸಾದಾಗ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಸಂಭ್ರಮ ಹಂಚಿಕೊಂಡರು. ಪ್ರಧಾನಿ ನರೇಂದ್ರ ಮೋದಿ ಮೇಲೆ ವಾಗ್ದಾಳಿ ನಡೆಸಿ, "ಮೋದೀಜಿ ಕೇವಲ ಮನ್ ಕಿ ಬಾತ್ ಹೇಳುತ್ತಾರೆ. ಅದನ್ನು ಆಲಿಸುವುದಿಲ್ಲ" ಎಂದು ವ್ಯಂಗ್ಯವಾಡಿದರು.
ಕನ್ಹಯ್ಯಾ ಕ್ಯಾಂಪಸ್‌ಗೆ ವಾಪಸ್ಸಾಗುತ್ತಿದ್ದಂತೆ, ಕಾಕತಾಳೀಯವೆಂಬಂತೆ ವಿದ್ಯುತ್ ಕಡಿತಗೊಂಡು ಇಡೀ ಕ್ಯಾಂಪಸ್ ಕತ್ತಲಲ್ಲಿ ಮುಳುಗಿತು. ಆದರೂ ವಿದ್ಯಾರ್ಥಿಗಳ ಉತ್ಸಾಹ ಮುಗಿಲು ಮುಟ್ಟಿ, ಟಾರ್ಚ್ ಹಾಗೂ ಫಲಕಗಳನ್ನು ಹಿಡಿದು ವಿದ್ಯಾರ್ಥಿಗಳು ಕನ್ಹಯ್ಯಾ ಪರ ಪೋಸ್ಟರ್‌ಗಳನ್ನು ಪ್ರದರ್ಶಿಸಿ ವಿಜಯೋತ್ಸಾಹ ಮೆರೆದರು.
ಜೈಲಲ್ಲಿದ್ದ ವೇಳೆ ಸಿದ್ಧಪಡಿಸಿದ್ದ ಭಾಷಣದಲ್ಲಿ ಕನ್ಹಯ್ಯಾ, "ದೇಶವನ್ನು ಕೊಳ್ಳೆ ಹೊಡೆಯುವವರಿಂದ ನಮಗೆ ಸ್ವಾತಂತ್ರ್ಯ ಬೇಕಾಗಿದೆ" ಎಂದರು.
"ನಾನು ಹಳ್ಳಿಗಾಡಿನಿಂದ ಬಂದವನು. ಅಲ್ಲಿ ಮ್ಯಾಜಿಕ್ ಪ್ರದರ್ಶನ ಇರುತ್ತದೆ. ಜನ ಮ್ಯಾಜಿಕ್ ಪ್ರದರ್ಶಿಸಿ, ಎಲ್ಲ ಬಯಕೆಗಳನ್ನೂ ಈಡೇರಿಸುವ ಉಂಗುರ ಮಾರುತ್ತಾರೆ...ನಮ್ಮ ದೇಶದಲ್ಲೂ ಅಂಥ ಕೆಲ ವ್ಯಕ್ತಿಗಳಿದ್ದಾರೆ. ಅವರು ಕಪ್ಪುಹಣ ಬರುತ್ತದೆ ಎನ್ನುತ್ತಾರೆ. ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್" ಎಂದು ಮೋದಿ ಸರ್ಕಾರದ ಮೇಲೆ ಟೀಕಾಸ್ತ್ರ ಪ್ರಯೋಗಿಸಿದರು.
ನಾವು ಭಾರತೀಯರು ಬೇಗನೆ ಎಲ್ಲವನ್ನೂ ಮರೆಯುತ್ತೇವೆ. ಆದರೆ ಈ ಬಾರಿ ಈ ದೊಡ್ಡ ತಮಾಷೆಯನ್ನು, ವಂಚನೆಯನ್ನು ಮರೆಯಲಾಗದು ಎಂದು ಅಬ್ಬರಿಸಿದಾಗ ಸೇರಿದ್ದ ವಿದ್ಯಾರ್ಥಿ ಸಮೂಹ ಪ್ರಚಂಡ ಕರತಾಡನದೊಂದಿಗೆ ಅನುಮೋದಿಸಿತು.
ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ತಮ್ಮ ವಿರುದ್ಧದ ಆರೋಪದ ಬಗ್ಗೆ ಏನೂ ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಮೋದಿ ಜತೆಗೆ ಎಷ್ಟೇ ಭಿನ್ನಾಭಿಪ್ರಾಯವಿದ್ದರೂ, ಅವರ ಟ್ವೀಟ್, "ಸತ್ಯಮೇವ ಜಯತೇ" ಎನ್ನುವುದನ್ನು ಒಪ್ಪುತ್ತೇನೆ" ಎಂದು ಟಾಂಗ್ ನೀಡಿದರು. ಜೆಎನ್‌ಯು ವಿವಾದದ ಬಗ್ಗೆ ಲೋಕಸಭೆಯಲ್ಲಿ ಸ್ಮತಿ ಇರಾನಿ ಭಾಷಣದ ಬಳಿಕ ಮೋದಿ ಈ ಶ್ಲಾಘನೆಯನ್ನು ಟ್ವೀಟ್ ಮಾಡಿದ್ದರು.
"ಈ ಪ್ರಕರಣದ ಹಿನ್ನೆಲೆಯಲ್ಲಿ ಯಾರ ಬಗ್ಗೆಯೂ ಕೆಟ್ಟ ಅಭಿಪ್ರಾಯಗಳು ನನಗಿಲ್ಲ. ಎಬಿವಿಪಿ ಬಗ್ಗೆ ದ್ವೇಷಸಾಧನೆ ಮಾಡುವುದೂ ಇಲ್ಲ. ಏಕೆಂದರೆ ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ನಮ್ಮ ವಿರೋಧ ಪಕ್ಷ ಎಂಬ ರೀತಿಯಲ್ಲಿ ಅವರನ್ನು ಪರಿಗಣಿಸುತ್ತೇವೆ" ಎಂದರು.
"ಜೆಎನ್‌ಯು ಪ್ರವೇಶ ಪಡೆಯುವುದು ಸುಲಭವಲ್ಲ; ಅಂತೆಯೇ ಜೆಎನ್‌ಯು ಧ್ವನಿಯನ್ನು ಅಡಗಿಸುವುದೂ ಸುಲಭವಲ್ಲ" ಎಂದ ಕನ್ಹಯ್ಯ, ತಮ್ಮ ಮೇಲಿನ ದಾಳಿ ಜೆಎನ್‌ಯು ವಿರುದ್ಧದ ಯೋಜಿತ ದಾಳಿ ಎಂದು ಬಣ್ಣಿಸಿದರು. ಯುಜಿಸಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ, ರೋಹಿತ್ ವೇಮುಲಾನಿಗೆ ನ್ಯಾಯ ದೊರಕಿಸುವ ಸಲುವಾಗಿ ನಡೆಯುತ್ತಿರುವ ಹೋರಾಟವನ್ನು ಕಾನೂನುಬಾಹಿರಗೊಳಿಸುವ ಹುನ್ನಾರ ಇದು ಎಂದು ಕಿಡಿ ಕಾರಿದರು.
ಒಂದು ಗಂಟೆ ಆರು ನಿಮಿಷದ ಸುಧೀರ್ಘ ಭಾಷಣದಲ್ಲಿ ಕನ್ಹಯ್ಯ ಅವರು, ಮೋದಿ ಲೋಕಸಭೆಯಲ್ಲಿ ಮಾಡಿದ ಭಾಷಣವನ್ನೂ ಉಲ್ಲೇಖಿಸಿದರು. ಹಿಂದಿನ ಸೋವಿಯತ್ ಒಕ್ಕೂಟದ ಅಧ್ಯಕ್ಷ ಸಿಕಿಟಾ ಕ್ರಿಶ್ಚೋವ್ ಅವರ ಬಗೆಗಿನ ಮೋದಿ ಉಲ್ಲೇಖವನ್ನು ಕನ್ಹಯ್ಯೋ ಪ್ರಸ್ತಾಪಿಸಿದರು. "ಮೋದಿಯವರು ಮಾತನಾಡುವಾಗ ಹಿಟ್ಲರ್ ಅವರನ್ನೂ ಉಲ್ಲೇಖಿಸಬೇಕು ಎಂದು ನಾನು ಬಯಸುತ್ತೇನೆ. ತಮ್ಮ ಗುರು ಗೋಲ್ವಾಳ್ಕರ್ ಅವರ ಬಗ್ಗೆ ಉಲ್ಲೇಖಿಸುವಂತೆ, ಗೋಲ್ವಾಳ್ಕರ್ ಭೇಟಿ ಮಾಡಿದ್ದ ಮುಸಲೋನಿ ಬಗ್ಗೆಯೂ ಉಲ್ಲೇಖಿಸಬೇಕು. ಮೋದಿ ಮನ್ ಕಿ ಬಾತ್ ಹೇಳುತ್ತಾರೆ. ಆದರೆ ಅದನ್ನೇ ಬೇರೆಯವರಿಂದ ಕೇಳುವುದಿಲ್ಲ" ಎಂದು ವ್ಯಂಗ್ಯವಾಡಿದರು.
"ನೀವು ಸರ್ಕಾರದ ವಿರುದ್ಧ ಮಾತನಾಡಿದರೆ, ಅವರ ಸೈಬರ್ ಘಟಕ ತಿರುಚಿದ ವೀಡಿಯೊ ಮೂಲಕ ನಿಮ್ಮ ವಿರುದ್ಧ ಆರೋಪ ಮಾಡುತ್ತದೆ ಹಾಗೂ ನಿಮ್ಮ ಹಾಸ್ಟೆಲ್‌ನಲ್ಲಿರುವ ಕಾಂಡೋಂಗಳನ್ನು ಲೆಕ್ಕಹಾಕುತ್ತದೆ" ಎಂದರು.
ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದನ್ನು ನಿವೃತ್ತ ಯೋಧರು ಟೀಕಿಸಿರುವುದನ್ನು ಕೂಡಾ ಉಲ್ಲೇಖಿಸಿದ ಅವರು, "ಗಡಿಯಲ್ಲಿ ದೇಶಕ್ಕಾಗಿ ಮಡಿಯುವ ಯೋಧರಿಗೆ ನಾನು ನಮನ ಸಲ್ಲಿಸುತ್ತೇನೆ. ಆದರೆ ಬಡತನದ ಬೇಗೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಕಥೆ ಏನು? ಅಂಥ ಹಲವು ಮಂದಿ ಯೋಧರ ತಂದೆಯಂದಿರು ಕೃಷಿಕರು. ನನ್ನ ತಂದೆ ಕೃಷಿಕ; ನನ್ನ ಸಹೋದರ ಸೈನಿಕ" ಎಂದು ಮಾರ್ಮಿಕವಾಗಿ ನುಡಿದರು.
ಜೈಲಿನೊಳಗೆ ಪೊಲೀಸರ ಜತೆ ನಡೆಸಿದ ಸಂವಾದವನ್ನೂ ಪ್ರಸ್ತಾಪಿಸಿದ ಕುಮಾರ್, ಅವರಲ್ಲಿ ಬಹುತೇಕ ಮಂದಿ ಬಡಕುಟುಂಬಗಳಿಂದ ಬಂದವರು. ದೇಶದಲ್ಲಿ ಭ್ರಷ್ಟಾಚಾರ ಹಾಗೂ ಜಾತಿಪದ್ಧತಿಯಿಂದ ಮುಕ್ತಿಗಾಗಿ ಹೋರಾಟ ನಡೆಸುವುದನ್ನು ಅವರೂ ಅನುಮೋದಿಸುತ್ತಾರೆ ಎಂದರು.
ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ರಾಹುಲ್‌ಗಾಂಧಿ, ಸೀತಾರಾಮ ಯಚೂರಿ ಹಾಗೂ ಡಿ.ರಾಜಾ, ಕನ್ಹಯ್ಯಿ ಭಾಷಣಕ್ಕೆ ಭೇಷ್ ಹೇಳಿದ್ದು, "ಕನ್ಹಯ್ಯೆ ಅವರಿಂದ ಎಂಥ ಅದ್ಭುತ ಭಾಷಣ..." ಎಂದು ಟ್ವೀಟ್ ಮಾಡಿದ್ದಾರೆ. ಕನ್ಹಯ್ಯಾ ಭಾವುಕರಾಗಿ ಮಾತನಾಡುತ್ತಿದ್ದಾಗ, ಹಲವು ಮಂದಿ ವಿದ್ಯಾರ್ಥಿಗಳು ಕೂಡಾ ಕಣ್ಣೀರು ಸುರಿಸುತ್ತಿದ್ದ ದೃಶ್ಯ ಕಂಡುಬಂತು.
ಇತ್ತೀಚೆಗೆ ಎಬಿವಿಪಿಗೆ ರಾಜೀನಾಮೆ ನೀಡಿದ ಜೆಎನ್‌ಯು ಘಟಕದ ಹಲವು ಮಂದಿ ಸದಸ್ಯರು ಕೂಡಾ ಹಾಜರಿದ್ದರು. ಕನ್ಹಯ್ಯ ವಾಪಾಸು ಬಂದಿರುವುದರಿಂದ ನಾವು ನಿರಾಳವಾಗಿದ್ದೇವೆ. ಆದರೆ ನಮ್ಮ ಹೋರಾಟ ಅಂತ್ಯವಾಗುವುದಿಲ್ಲ ಎಂದು ಪಿಎಚ್‌ಡಿ ವಿದ್ಯಾರ್ಥಿನಿ ಪ್ರಿಯಾಂಕಾ ದಾಸ್ ವಿದ್ಯಾರ್ಥಿಗಳ ಒಟ್ಟು ಅಭಿಪ್ರಾಯವನ್ನು ಮಂಡಿಸಿದರು. ಅನಿರ್ಬನ್, ಉಮರ್ ಅವರು ಕೂಡಾ ಸುರಕ್ಷಿತವಾಗಿ ವಾಪಾಸು ಬರುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.







