47ನೇ ಬಾರಿ ಹತ್ತನೇ ತರಗತಿ ಪರೀಕ್ಷೆ ಬರೆಯಲು 77ರ ವೃದ್ಧ ಸಜ್ಜು

ಅಲ್ವಾರ, ಮಾ.4: ರಾಜಸ್ಥಾನ ಮಾಧ್ಯಮಿಕ ಶಿಕ್ಷಣ ಮಂಡಳಿಯ ಹತ್ತನೇ ತರಗತಿ ಪರೀಕ್ಷೆಯಲ್ಲಿ 46 ಬಾರಿ ಅನುತ್ತೀರ್ಣರಾದ 77ರ ವೃದ್ಧರೊಬ್ಬರು 47ನೇ ಪ್ರಯತ್ನ ಮಾಡಲು ಸಜ್ಜಾಗಿದ್ದಾರೆ.
ಅಲ್ವಾರದ ಖೋಹರಿ ಗ್ರಾಮದ ಶಿವಚರಣ ಯಾದವ್ ಮಾರ್ಚ್ 10ರಿಂದ ಆರಂಭವಾಗುವ ಆರ್‌ಬಿಎಸ್‌ಇ ಪರೀಕ್ಷೆಗೆ ಹಾಜರಾಗಲಿದ್ದಾರೆ.
46 ಬಾರಿ ಕೂಡಾ ಕಬ್ಬಿಣದ ಕಡಲೆಯಾದ ಪರೀಕ್ಷೆಯನ್ನು ಮತ್ತೊಂದು ಪ್ರಯತ್ನದಲ್ಲಿ ಉತ್ತೀರ್ಣರಾಗುವ ಛಲದಿಂದ ಇದೀಗ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾರೆ.
ಹತ್ತನೇ ತರಗತಿ ಉತ್ತೀರ್ಣರಾಗುವವರೆಗೂ ಅವಿವಾಹಿತನಾಗಿಯೇ ಉಳಿಯುವುದಾಗಿ ಹೇಳಿದ್ದಾರೆ. 1968ರಲ್ಲಿ ಮೊದಲ ಬಾರಿಗೆ ಹತ್ತನೇ ತರಗತಿ ಪರೀಕ್ಷೆ ಬರೆದಿದ್ದ ಅವರು, ಪ್ರತಿ ಬಾರಿಯೂ ಒಂದಲ್ಲ ಒಂದು ವಿಷಯದಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ. ಗಣಿತ ಹಾಗೂ ವಿಜ್ಞಾನದಲ್ಲಿ ಅತ್ಯಧಿಕ ಅಂಕ ಬಂದರೂ, ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಅನುತ್ತೀರ್ಣನಾಗುತ್ತಿದ್ದೆ. ಈ ಬಾರಿ ಎಲ್ಲ ವಿಷಯಗಳಲ್ಲಿ ಉತ್ತೀರ್ಣರಾಗುವ ವಿಶ್ವಾಸವಿದೆ ಎಂದು ಹೇಳಿದರು. 1995ರಲ್ಲಿ ಎಲ್ಲ ವಿಷಯಗಳಲ್ಲಿ ಉತ್ತೀರ್ಣರಾದಾಗ ಗಣಿತ ಕೈಕೊಟ್ಟಿತು. ಈ ಬಾರಿ ಶಾಲಾ ಶಿಕ್ಷಕರಿಂದ ಪಾಠ ಹೇಳಿಸಿಕೊಂಡಿದ್ದೇನೆ ಎಂದು ಹೇಳುತ್ತಾರೆ.
ಅವಿವಾಹಿತರಾಗಿಯೇ ಉಳಿದಿರುವ ಅವರು, ಸರ್ಕಾರದ ವೃದ್ಧಾಪ್ಯ ಪಿಂಚಣಿ ಹಾಗೂ ಪಕ್ಕದ ದೇವಸ್ಥಾನದ ಪ್ರಸಾದದಿಂದ ಜೀವನ ಸಾಗಿಸುತ್ತಿದ್ದಾರೆ.





