ಆ್ಯಪಲ್ ಜಾಹೀರಾತು ಫಲಕಗಳಲ್ಲಿ ರಾರಾಜಿಸುತ್ತಿದೆ ಬೆಂಗಳೂರಿಗ ಕ್ಲಿಕ್ಕಿಸಿದ ಪತ್ನಿಯ ಫೊಟೋ

ಬೆಂಗಳೂರು, ಮಾ.4: ಬೆಂಗಳೂರು ಮೂಲದ ದಂಪತಿ ಆಶಿಷ್ ಪರ್ಮಾರ್ ಹಾಗೂ ರೈನಾನಾಣಯ್ಯರವರ ಸಂತಸಕ್ಕೆ ಪಾರವೇ ಇಲ್ಲವಾಗಿದೆ. ಅವರಿಬ್ಬರ ಫೋನುಗಳೂ ಕಳೆದ ಕೆಲವು ದಿನಗಳಿಂದ ರಿಂಗಣಿಸುತ್ತಲೇ ಇವೆ. ದೇಶ ವಿದೇಶಗಳಿಂದ ಅವರ ಕುಟುಂಬ ವರ್ಗ, ಸ್ನೇಹಿತರು ಹಾಗೂ ಹಿತೈಷಿಗಳು ಕರೆ ಮಾಡುತ್ತಲೇ ಇದ್ದಾರೆ. ಪರ್ಮಾರ್ ಅವರು ತಮ್ಮ ಐಫೋನ್6ನಲ್ಲಿ ಕ್ಲಿಕ್ಕಿಸಿದ ಅವರ ಪತ್ನಿಯ ಛಾಯಾಚಿತ್ರ ಈಗ ಆ್ಯಪಲ್ ಜಾಹೀರಾತು ಫಲಕಗಳಲ್ಲಿವಿಶ್ವದಾದ್ಯಂತ ರಾರಾಜಿಸುತ್ತಿದೆ.
ಛಾಯಾಗ್ರಾಹಕರಾಗಿರುವ ಆಶಿಷ್ ಕಳೆದ ದೀಪಾವಳಿಯ ಸಂದರ್ಭ ತಮ್ಮ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾಗ ಕೆಂಪು ಸೀರೆಯಲ್ಲಿ ಮಿಂಚುತ್ತಿದ್ದ ತಮ್ಮ ಪತ್ನಿ ಕೈಯ್ಯಲ್ಲೊಂದು ಬೆಳಗುವ ಹಣತೆ ಹಿಡಿದುಕೊಂಡು ನಿಂತ ಚಿತ್ರವನ್ನು ಕ್ಲಿಕ್ಕಿಸಿದ್ದರು.
ಆ್ಯಪಲ್‌ನ ಐಫೋನ್ 6 ಅಭಿಯಾನದಲ್ಲಿ ಭಾಗವಹಿಸಿದ್ದ ಆಶಿಷ್ ಶಾಟ್‌ಆನ್ ಐಫೋನ್6 ಎಂಬ ಹ್ಯಾಶ್‌ಟಾಗ್‌ನೊಂದಿಗೆ ಸಾಮಾಜಿಕ ತಾಣದಲ್ಲಿ ಈ ಛಾಯಾಚಿತ್ರವನ್ನು ಪೋಸ್ಟ್ ಮಾಡಿದ್ದರು.
ಕಂಪೆನಿಯ ಈ ಅಭಿಯಾನಕ್ಕೆ ವಿಶ್ವದಾದ್ಯಂತದ ಒಟ್ಟು 41 ಮಂದಿ ಹವ್ಯಾಸಿ ಹಾಗೂ ವೃತ್ತಿಪರ ಛಾಯಾಗ್ರಾಹಕರು ತೆಗೆದ 53 ಛಾಯಾಚಿತ್ರಗಳು ಆಯ್ಕೆಯಾಗಿದ್ದು ಅವವುಗಳಲ್ಲಿ ಆಶಿಷ್ ತೆಗೆದ ಫೊಟೋ ಕೂಡ ಸೇರಿದೆ.
‘‘ಅದು ದೀಪಾವಳಿಯ ಸಂದರ್ಭವಾಗಿತ್ತು, ನನ್ನ ಪತ್ನಿ ನನ್ನ ತಾಯಿಗೆ ಮನೆಯ ಸುತ್ತ ಹಣತೆಯನ್ನಿಡಲು ಸಹಕರಿಸುತ್ತಿದ್ದಳು. ನಾನಲ್ಲಿ ಬಂದಾಗ ಒಂದು ಬಟ್ಟಲು ತುಂಬಾ ಹಣತೆಯೊಂದಿಗೆ ಆಕೆ ಹೋಗುತ್ತಿರುವುದನ್ನು ನೋಡಿ ಆ ಹಣತೆಯ ಬೆಳಕು ಆಕೆಯ ಮೊಗದಲ್ಲಿ ಮೂಡಿದ ಕಾಂತಿಯನ್ನು ಗಮನಿಸಿ ನನ್ನ ಐಫೋನ್ ತೆಗೆದು ಕೇವಲ ಒಂದು ಹಣತೆ ಕೈಯಲ್ಲಿ ಹಿಡಿದುಕೊಂಡು ಆಕೆಯನ್ನು ನಿಲ್ಲಲು ಹೇಳಿ ಆ ಫೊಟೋ ತೆಗೆದೆನು. ಅದೊಂದು ಸಹಜವಾಗಿ ತೆಗೆದ ಶಾಟ್ ಆಗಿತ್ತು,’’ಎಂದು ಆಶಿಷ್ ನೆನಪಿಸುತ್ತಾರೆ.
ಆಶಿಷ್ ತೆಗೆದ ಫೊಟೋ ಆಸ್ಟ್ರೇಲಿಯಾದಲ್ಲಿ ಕೂಡ ಕಂಪೆನಿಯ ಜಾಹೀರಾತುಗಳಲ್ಲಿ ಕಾಣಿಸತೊಡಗಿದ್ದು, ಆಶಿಷ್ ಹಾಗೂ ರೈನಾ ದಂಪತಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ.







