ಕಾಲ್ ಡ್ರಾಪ್‌ಗೆ ಪರಿಹಾರ: ಟ್ರಾಯ್ ಆದೇಶ ರದ್ದು ಪಡಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್

ನವದೆಹಲಿ : ಕಾಲ್ ಡ್ರಾಪ್ ಪ್ರಕರಣಗಳಲ್ಲಿ ಟೆಲಿಕಾಂ ಕಂಪೆನಿಗಳು ಗ್ರಾಹಕರಿಗೆ ಪರಿಹಾರ ಒದಗಿಸಬೇಕೆಂದು ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ನೀಡಿದ್ದ ಆದೇಶವನ್ನು ರದ್ದು ಪಡಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಸೆಲ್ಲ್ಯೂಲರ್ ಆಪರೇಟರ್ಸ್ ಎಸೋಸಿಯೇಶನ್ ಆಫ್ ಇಂಡಿಯಾ ಮೊದಲು ಟ್ರಾಯ್ ಆದೇಶದ ವಿರುದ್ಧ ಹೈಕೋರ್ಟಿನ ಮೆಟ್ಟಲೇರಿದ್ದರೂ ಅದು ಟ್ರಾಯ್ ಆದೇಶವನ್ನೇ ಎತ್ತಿ ಹಿಡಿದಿತ್ತು.ಇದೀಗ ಸುಪ್ರೀಂ ಕೋರ್ಟ್ ಮುಂದಿನ ವಿಚಾರಣೆಯ ದಿನಾಂಕವನ್ನುಮಾರ್ಚ್ 10ಕ್ಕೆ ನಿಗದಿ ಪಡಿಸಿದೆ.
ಸುಪ್ರೀಂ ಕೋರ್ಟಿನ ಪೀಠವೊಂದು ಟ್ರಾಯ್‌ಗೆ ನೋಟಿಸೊಂದನ್ನು ಕೂಡ ಜಾರಿಗೊಳಿಸಿದ್ದು, ಕಂಪೆನಿಯ ತಪ್ಪಿನಿಂದಾಗಿ ಕಾಲ್ ಡ್ರಾಪ್ ಉಂಟಾಗಿದೆಯೇ ಎಂಬುದನ್ನು ಮೊದಲು ದೃಢಪಡಿಸಬೇಕು ಎಂದು ಹೇಳಿದೆ. ಟ್ರಾಯ್ ಅಧಿಕಾರಿಗಳು ಹಾಗೂ ಟೆಲಿಕಾಂ ಕಂಪೆನಿಗಳ ಪ್ರತಿನಿಧಿಗಳುಸೋಮವಾರ ಸಭೆ ಸೇರಲಿದ್ದು ಈ ವಿಚಾರದ ಬಗ್ಗೆ ಚರ್ಚಿಸಲಿದ್ದಾರೆ. ಗ್ರಾಹಕರಿಗೆ ಪರಿಹಾರವೊದಗಿಸುವಂತೆ ಆದೇಶ ನೀಡುವುದು ಟ್ರಾಯ್ ವ್ಯಾಪ್ತಿಯಲ್ಲಿ ಬರುವುದಿಲ್ಲವೆಂದು ಟೆಲಿಕಾಂ ಕಂಪೆನಿಗಳು ವಾದಿಸಿದ್ದವು.







