ಹಳಿ ತಪ್ಪಿದ ರೈಲು- ಪ್ರಯಾಣಿಕರ ರಕ್ಷಣೆ! - ಗೂಡ್‌ಶೆಡ್‌ನಲ್ಲಿ ಹೀಗೊಂದು ಅಣಕು ಕಾರ್ಯಾಚರಣೆ
ಮಂಗಳೂರು, ಮಾ. 4: ನಗರದ ಪಾಂಡೇಶ್ವರ ಬಳಿಯ ಗೂಡ್‌ಶೆಡ್‌ನಲ್ಲಿ ರೈಲು ಬೋಗಿಯೊಂದು ಹಳಿ ಅದರಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸುವ ಸಲುವಾಗಿ ಬೋಗಿಯ ಮೇಲ್ಛಾವಣಿಯನ್ನೇ ಕೊರೆದು ಕಾರ್ಯಾಚರಣೆ ನಡೆಸಿದರು. ಸುಮಾರು 30 ಮಂದಿ ಸಿಬ್ಬಂದಿಗಳು ಪಾಲ್ಗೊಂಡಿದ್ದ ಕಾರ್ಯಾಚರಣೆ ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಇದು ಇಂದು ರೈಲ್ವೇ ಬೋರ್ಡ್ ವತಿಯಿಂದ ಮಂಗಳೂರು ಕೇಂದ್ರ ರೈಲ್ವೇ ನಿಲ್ದಾಣದ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಅಣುಕು ಕಾರ್ಯಾಚರಣೆ. ರೈಲು ಹಳಿ ತಪ್ಪುವುದು, ಅಪಘಾತಕ್ಕೀಡಾಗುವುದು ಮೊದಲಾದ ಸಂದರ್ಭಗಳಲ್ಲಿ ತುರ್ತು ಪರಿಹಾರ ಕಾರ್ಯಕ್ರಮಗಳ ಕುರಿತು ಈ ಸಿಬ್ಬಂದಿಗಳಿಗೆ ತರಬೇತಿ ನೀಡುವ ಸಲುವಾಗಿ ಈ ಅಣುಕು ಕಾರ್ಯಾಚರಣೆ ನಡೆಯಿತು.
ನಿರುಪಯುಕ್ತ ರೈಲು ಬೋಗಿಯೊಂದನ್ನು ಗೂಡ್‌ಶೆಡ್ ಬಳಿ ಹಳಿ ತಪ್ಪಿಸಿ, ವಾಸ್ತವದಲ್ಲಿ ರೈಲು ಬೋಗಿಯೊಂದು ಹಳಿ ತಪ್ಪಿದರೆ ಯಾವ ರೀತಿಯಲ್ಲಿ ತುರ್ತು ಕಾರ್ಯಾಚರಣೆಯ ಮೂಲಕ ಪ್ರಯಾಣಿಕರ ಪ್ರಾಣ ಉಳಿಸಬಹುದು ಹಾಗೂ ರೈಲು ಬೋಗಿಯನ್ನು ಹಳಿಯಿಂದ ತೆರವುಗೊಳಿಸಿ ರೈಲು ಮಾರ್ಗವನ್ನು ಎಷ್ಟು ಕ್ಷಿಪ್ರವಾಗಿ ಸಂಚಾರಕ್ಕೆ ಯೋಗ್ಯಗೊಳಿಸಬಹುದು ಎಂಬ ಬಗ್ಗೆ ಇಂದು 30 ಮಂದಿ ಸಿಬ್ಬಂದಿಗಳಿಗೆ ಎಆರ್‌ಟಿ ತಂಡ (ಅಪಘಾತ ಪರಿಹಾರ ರೈಲು)ದಿಂದ ತರಬೇತಿ ಒದಗಿಸಲಾಯಿತು ಎಂದು ಪಾಲ್ಘಾಟ್ ರೈಲ್ವೇ ವಿಭಾಗದ ಸಹಾಯಕ ಡಿವಿಜನಲ್ ಮೆಕ್ಯಾನಿಕಲ್ ಇಂಜಿನಿಯರ್ ಎಂ.ಕೆ. ಸುಬ್ರಹ್ಮಣ್ಯ ಮಾಹಿತಿ ನೀಡಿದರು.
ಮಂಗಳೂರು ಎಆರ್‌ಟಿಯು 50 ಮಂದಿ ಸಿಬ್ಬಂದಿಗಳನ್ನು ಹೊಂದಿದ್ದು, ಮೆಕ್ಯಾನಿಕಲ್, ಇಲೆಕ್ಟ್ರಿಕಲ್ ಸೇರಿದಂತೆ ರೈಲ್ವೇಯ ಅಗತ್ಯ ಸಲಕರಣೆಗಳನ್ನು ಒಳಗೊಂಡ ರೈಲ್ವೇ ಬೋಗಿಯನ್ನು ಒಳಗೊಂಡಿದೆ. ರೈಲು ದುರಂತ ಸಂದರ್ಭ ಈ ಬೋಗಿಯ ಜತೆ ಸಿಬ್ಬಂದಿಗಳು ತೆರಗಳಿ ತುರ್ತು ಕಾರ್ಯಾಚರಣೆಯನ್ನು ನಡೆಸುತ್ತಾರೆ ಎಂದು ಏರಿಯಾ ಅಫೀಸರ್ ಭೂಪತಿರಾಜ್ ತಿಳಿಸಿದರು.
ಇಂದು ಬೆಳಗ್ಗೆ 10.30ಗಂಟೆಗೆ ಆರಂಭಗೊಂಡ ಅಣುಕು ಕಾರ್ಯಾಚರಣೆ ಮಧ್ಯಾಹ್ನ 2.30ರವರೆಗೆ ನಡೆಯಿತು. ಕಾರ್ಯಾಚರಣೆಯ ವೇಳೆ ಹಳಿ ತಪ್ಪಿದ ರೈಲನ್ನು ಸುಮಾರು 1 ಗಂಟೆಯಲ್ಲಿ ಹಳಿಯಲ್ಲಿ ಇರಿಸುವ ಕಾರ್ಯ ನಡೆಯಿತು. ಪ್ರಯಾಣಿಕರ ರಕ್ಷಣೆ ಕಾರ್ಯವನ್ನು ಮಾಡುವ ನಿಟ್ಟಿನಲ್ಲಿ ಹಳಿ ತಪ್ಪಿದ ರೈಲಿನ ಮೇಲ್ಛಾವಣಿಯನ್ನು ಕೊರೆದು ಸಿಬ್ಬಂದಿಗಳು ಒಳನುಗ್ಗುವ ತರಬೇತಿಯನ್ನು ಈ ಸಂದರ್ಭ ನೀಡಲಾಯಿತು ಎಂದು ಎಆರ್‌ಟಿ ಮೇಲ್ವಿಚಾರಕ ಕೆ.ಪಿ. ಸುಜೀತ್ ಹೇಳಿದರು.







