ಮರಳು ಅಭಾವ ಸಮಸ್ಯೆ ವಿರುದ್ಧ ಕಾರ್ಮಿಕರ ಪ್ರತಿಭಟನೆ

ಮಂಗಳೂರು, ಮಾ. 4: ಜಿಲ್ಲೆಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಮರಳು ಪೂರೈಕೆ ಆಗದೆ ನಿರ್ಮಾಣ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಜಿಲ್ಲಾಡಳಿತ ಮೌನವಾಗಿದೆ ಎಂದು ಆರೋಪಿಸಿ ಕೂಳೂರು ಜಂಕ್ಷನ್‌ನಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಜಿಲ್ಲೆಯಲ್ಲಿ ಪದೇ ಪದೇ ಮರಳು ಪೂರೈಕೆ ಸಮಸ್ಯೆ ಆಗುತ್ತಿದೆ. ವ್ಯಾಪಕವಾಗಿ ಮರಳುಗಾರಿಕೆ ಆಗುತ್ತಿದ್ದರೂ ಸ್ಥಳೀಯರಿಗೆ ಮರಳು ಸಿಗುತ್ತಿಲ್ಲ. ಇದರಿಂದಾಗಿ ಕಾಳಸಂತೆಕೋರರಿಗೆ ಸರಕಾರವು ಮುಕ್ತ ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ಡಿವೈಎಫ್‌ಐ ಜಿಲ್ಲಾ ಕಾರ್ಯದಶಿ ಸಂತೋಷ್ ಬಜಾಲ್ ಆರೋಪಿಸಿದರು. ಕಟ್ಟಡ ಕಾರ್ಮಿಕರ ಸಂಘ ಮತ್ತು ಡಿವೈಎಫ್‌ಐ ಪಂಜಿಮೊಗರು ವಲಯ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಕಾರ್ಪೊರೇಟರ್ ದಯಾನಂದ ಶೆಟ್ಟಿ ಮಾತನಾಡಿ, ಅಕ್ರಮ ಮರಳುಗಾರಿಕೆಯನ್ನು ತಡೆ ಹಿಡಿಯಲು ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ರಾಜಕಾರಣಿಗಳ ಬೆಂಬಲಿಗರಿಗೆ ಮನಸ್ಸೋ ಇಚ್ಛೆ ಪರವಾನಿಗೆಗಳನ್ನು ನೀಡಲಾಗುತ್ತಿದ್ದು ಇದರಿಂದಾಗಿ ಬೇರೆ ಬೇರೆ ರಾಜ್ಯಗಳಿಗೆ ಅಕ್ರಮ ಮರಳು ಸಾಗಾಟ ನಡೆಯುತ್ತಿದೆ. ಇದರಿಂದ ಸಮಸ್ಯೆಗಳು ಉದ್ಭವಿಸಿದಾಗ ಸಂಪೂರ್ಣ ಮರಳುಗಾರಿಕೆಯನ್ನು ನಿಷೇಧಿಸಲಾಗುತ್ತದೆ. ಕಟ್ಟಡ ಕಾರ್ಮಿಕರು ಬೀದಿಗೆ ಬೀಳುವಂತಾಗಿದೆ. ಮಹಾನಗರ ಪಾಲಿಕೆಯ ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣವಾಗಿ ನಿಂತುಹೋಗಿವೆ. ಸಾಂಪ್ರಾದಾಯಿಕ ಮರಳುಗಾರಿಕೆಗೆ ಮಾತ್ರ ಅವಕಾಶ ನೀಡಿ ಅಕ್ರಮ ಮರಳುಗಾರಿಕೆ ತಡೆಯಲು ವಿಶೇಷದಳ, ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ಹೇಳಿದರು.
ಪ್ರತಿಭಟನೆಯ ನೇತೃತ್ವವನ್ನು ಡಿವೈಎಫ್‌ಐ ಮುಖಂಡರಾದ ಅನಿಲ್ ಡಿಸೋಜ, ನೌಷಾದ್, ಖಲೀಲ್, ಸಂತೋಷ್ ಕಾರ್ಮಿಕ ಸಂಘದ ಮುಖಂಡರಾದ ಮುಸ್ತಫಾ ಎಂ.ಬಿ. ಕಮಲಾಕ್ಷ, ನಿಯಾಝ್, ನವೀನ್ ಡಿಸೋಜ, ನಾರಾಯಣ ಮೇಸ್ತ್ರಿ ವಹಿಸಿದ್ದರು.







