ನಗರಸಭಾ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಚುನಾವಣೆಗೆ ನ್ಯಾಯಾಲಯದಿಂದ ತಡೆಯಾಜ್ಞೆ
ಪುತ್ತೂರು: ಪುತ್ತೂರು ನಗರಸಭಾ ಹಾಲಿ ಅಧ್ಯಕ್ಷ ಮತ್ತು ಉಪ್ಯಾಧ್ಯಕ್ಷರ 30 ತಿಂಗಳ ಅಧಿಕಾರಾವಧಿ ಕೊನೆಗೊಳ್ಳಲಿರುವ ಹಿನ್ನೆಲೆಯಲ್ಲಿ ಮಾ. 10 ರಂದು ನಡೆಯಬೇಕಿದ್ದ ಪುತ್ತೂರು ನಗರಸಭಾ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಗೆ ಕೆಲ ಸದಸ್ಯರು ರಿಟ್ ಅರ್ಜಿ ಸಲ್ಲಿಸಿ ರಾಜ್ಯ ಉಚ್ಛ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಮಾ. 10 ರಂದು ಚುನಾವಣೆ ನಡೆಸುವಂತೆ ದಿನಾಂಕ ನಿಗದಿಪಡಿಸಿ ಪುತ್ತೂರು ಸಹಾಯಕ ಕಮಿಷನರ್ ಅವರನ್ನು ಚುನಾವಣಾಧಿಕಾರಿಯನ್ನಾಗಿ ನೇಮಕಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದರು.
ಈ ಬಾರಿಯ ಅಧ್ಯಕ್ಷ ಹುದ್ದೆಯನ್ನು ಪರಿಶಿಷ್ಠ ಪಂಗಡದ ಮಹಿಳೆಗೆ ಮತ್ತು ಉಪಾಧ್ಯಕ್ಷ ಹುದ್ದೆಯನ್ನು ಸಾಮಾನ್ಯ ವರ್ಗಕ್ಕೆ ಮೀಸಲು ಗೊಳಿಸಲಾಗಿತ್ತು. ಪುತ್ತೂರು ನಗರಸಭೆಯ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ ಶೆಟ್ಟಿ ಮತ್ತು ಇತರ 6 ಮಂದಿ ಸದಸ್ಯತ್ವ ಅನರ್ಹಗೊಂಡು ಉಚ್ಛನ್ಯಾಯಾಲಯದಿಂದ ತಡೆಯಾಜ್ಞೆ ತರುವ ಮೂಲಕ ಸದಸ್ಯತ್ವ ಉಳಿಸಿಕೊಂಡ ಸದಸ್ಯರು ತಮ್ಮ ಮತದಾನದ ಹಕ್ಕಿನ ಕುರಿತ ದಾವೆಯ ಅಂತಿಮ ತೀರ್ಮಾನವಾಗುವ ತನಕ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗೆ ಚುನಾವಣೆ ನಡೆಸಿದರೆ ನಮ್ಮ ಹಕ್ಕಿನಿಂದ ನಾವು ವಂಚಿತರಾಗುತ್ತೇವೆ ಎಂದು ರಿಟ್ ಸಲ್ಲಿಸಿದ ಹಿನ್ನೆಲೆಯಲ್ಲಿ ಉಚ್ಛ ನ್ಯಾಯಾಲಯ ಈ ತಡೆಯಾಜ್ಞೆ ನೀಡಿದೆ.
ನಗರಸಭಾ ಮಾಜಿ ಅಧ್ಯಕ್ಷರಾದ ನೆಲ್ಲಿಕಟ್ಟೆ ಜಗದೀಶ ಶೆಟ್ಟಿ, ವಾಣಿಶ್ರೀಧರ್ ಹಾಗೂ ಸದಸ್ಯರಾದ ನವೀನ್ ಚಂದ್ರ ನಾಕ್, ರೇಖಾ ಯಶೋಧರ, ಸೀಮಾ ಗಂಗಾಧರ, ಕಮಲಾ ಆನಂದ, ದೀಕ್ಷಾ ಪೈ ಉಚ್ಚ ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿದ್ದರು. ಇವರು ಜಿಲ್ಲಾಧಿಕಾರಿಗಳ ನ್ಯಾಯಾಲಯದಿಂದ ಸದಸ್ಯತ್ವ ಅನರ್ಹಗೊಂಡ ಸದಸ್ಯರಾಗಿದ್ದು, ಬಳಿಕ ಈ ಆದೇಶಕ್ಕೆ ಇವರು ತಡೆಯಾಜ್ಞೆ ತಂದು ಸದಸ್ಯರಾಗಿ ಮುಂದುವರಿದಿದ್ದರು. ಆದರೆ ಇವರಿಗೆ ನಗರಸಭೆಗೆ ಸಂಬಂಧಪಟ್ಟ ಯಾವುದೇ ಮತದಾನದಲ್ಲಿ ಪಾಲ್ಗೊಳ್ಳುವ ಹಕ್ಕು ಇರಲಿಲ್ಲ. ತಮಗೂ ಮತದಾನದ ಹಕ್ಕು ನೀಡುವಂತೆ ಇವರು ಉಚ್ಛ ನ್ಯಾಯಾಲಯದಲ್ಲಿ ಪ್ರತ್ಯೇಕ ದಾವೆ ಹೂಡಿದ್ದರು. ಈ ದಾವೆಯ ಅಂತಿಮ ತೀರ್ಪು ಇನ್ನೂ ಹೊರಬಂದಿಲ್ಲ. ಆದ ಕಾರಣ ಈ ಹಂತದಲ್ಲಿ ನಗರಸಭಾ ಅಧ್ಯಕ್ಷ ಮತ್ತು ಉಪ್ಯಾಧ್ಯಕ್ಷರ ಚುನಾವಣೆ ನಡೆಸಬಾರದು ಎಂದು ರಿಟ್ ಅರ್ಜಿಯಲ್ಲಿ ವಿನಂತಿಸಿದ್ದರು.
ಅರ್ಜಿದಾರರ ಪರವಾಗಿ ನ್ಯಾಯವಾದಿಗಳಾದ ರಾಜಶೇಖರ ಹಿಲಿಯಾರು ಮತ್ತು ಮಹೇಶ್ ಕಜೆ ವಾದಿಸಿದ್ದರು.





