ಲಾಠಿ ಚಾರ್ಜ್ ಖಂಡಿಸಿ ರೈತ ಸಂಘ ಹಸಿರು ಸೇನೆ ಪ್ರತಿಭಟನೆ

ಪುತ್ತೂರು: ಶಾಶ್ವತ ನೀರಾವರಿಗಾಗಿ ಒತ್ತಾಯಿಸಿ ಬೆಂಗಳೂರಿನಲ್ಲಿ ಹೋರಾಟ ನಡೆಸಿದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರೈತರ ಮೇಲೆ ಪೊಲೀಸರು ನಡೆಸಿದ ಲಾಠಿ ಚಾರ್ಜ್ ಖಂಡಿಸಿ ಸರಕಾರದ ರೈತ ವಿರೋಧಿ ನೀತಿಯನ್ನು ಪ್ರತಿಭಟಿಸಿ ಶುಕ್ರವಾರ ಸಂಜೆ ಪುತ್ತೂರು ನಗರದ ಮಿನಿ ವಿಧಾನ ಸೌಧದ ಮುಂಬಾಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಸದಸ್ಯರು ಪ್ರತಿಭಟನೆ ನಡೆಸಿದರು. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸಿದಲ್ಲಿ ರೈತ ಸಂಘ ಉಗ್ರ ಚಳವಳಿಯನ್ನು ಹಮ್ಮಿಕೊಳ್ಳಲಿದೆ ಎಂದು ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಎಚ್ಚರಿಸಿದರು. ದ.ಕ. ಜಿಲ್ಲಾ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ರವಿಕಿರಣ್ ಪುಣಚ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ ಸರಕಾರ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಗೆ ಎತ್ತಿನ ಹೊಳೆ ಎಂಬ ಕಪಟ ಯೋಜನೆಯನ್ನು ತೋರಿಸಿ ಮರಳು ಮಾಡುತ್ತಿದೆ. ಆ ಭಾಗದ ರೈತರು ಕಳೆದ 161 ದಿನಗಳಿಂದ ನೀರಿಗಾಗಿ ಚಳವಳಿ ನಡೆಸುತ್ತಿದ್ದಾರೆ. ಬೆಂಗಳೂರಿಗೆ ಬಂದು ವಿಧಾನ ಸೌಧದಲ್ಲಿ ಸರಕಾರಕ್ಕೆ ಮನವಿ ನೀಡಲು ಮುಂದಾದ ರೈತರ ಮೇಲೆ ಸರಕಾರ ಪೊಲೀಸರ ಮೂಲಕ ಅಮಾನುಷ ದೌರ್ಜನ್ಯ ನಡೆಸಿರುವುದು ಖಂಡನೀಯ. ರೈತ ಚಳವಳಿಯನ್ನು ಧಮನಿಸಲು ಯಾವ ಸರಕಾರಕ್ಕೂ ಸಾಧ್ಯವಿಲ್ಲ. ಎಂದರು.
ರೈತ ಸಂಘದ ಸಂಘಟನಾ ಕಾರ್ಯದರ್ಶಿ ವಿನೋದ್ ಪಾದೆಕಲ್ಲು ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚಳವಳಿ ಮಾಡುವುದು ಪ್ರತಿಯೊಬ್ಬರ ಹಕ್ಕಾಗಿದ್ದು, ರೈತರು ತಮ್ಮ ಬೇಡಿಕೆ ಈಡೇರಿಕೆಗಾಗಿ ಚಳವಳಿ ನಡೆಸಿದ್ದಾರೆ. ರೈತರ ಬೇಡಿಕೆ ಆಲಿಸುವಷ್ಟು ಸೌಜನ್ಯ ಸರಕಾರಕ್ಕೆ ಇಲ್ಲ. ಪೊಲೀಸ್ ಬಲ ಪ್ರಯೋಗಿಸಿ, ಅನ್ನದಾತ ರೈತರ ಮೇಲೆ ದೈಹಿಕ ದೌರ್ಜನ್ಯವನ್ನು ಸರಕಾರ ನಡೆಸಿ ಪ್ರಜ್ಞಾವಂತ ನಾಗರಿಕರು ತಲೆ ತಗ್ಗಿಸುವಂತೆ ಮಾಡಿದೆ ಎಂದರು.
ರೈತಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಲಿಮಾರ ರೂಪೇಶ ರೈ ಮಾತನಾಡಿ ಗುರುವಾರದ ಘಟನೆಯನ್ನು ಖಂಡಿಸಿ, ರೈತ ಸಂಘ ಸಾಂಕೇತಿಕ ಪ್ರತಿಭಟನೆ ಮಾಡಿದೆ. ಆದರೆ ರೈತರ ಬೇಡಿಕೆಗಳನ್ನು ಧಿಕ್ಕರಿಸುವ ಯಾವುದೇ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲು ರೈತಸಂಘ ಸಿದ್ಧವಿದೆ ಎಂದು ಎಚ್ಚರಿಸಿದರು.
ಫೋಟೋ: ಪ್ರತಿಭಟನಾ ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ ರವಿಕಿರಣ ಪುಣಚ ಮಾತನಾಡುತ್ತಿರುವುದು.







