ವಿಶ್ವವಿಜ್ಞಾನ ಮೇಳ ಹಾಗೂ ಗ್ರಾಹಕರ ಮೇಳ

ಇರಾ ಶಾಲೆಯಲ್ಲಿ ವಿದ್ಯಾರ್ಥಿಗಳ ವಿಜ್ಞಾನ ಮೇಳ ಹಾಗೂ ಗ್ರಾಹಕರ ಮೇಳವು ಗುರುವಾರ ನಡೆಯಿತು. ಇರಾ ಶಾಲೆಯಲ್ಲಿ ವಿಶ್ವವಿಜ್ಞಾನ ಮೇಳ ಹಾಗೂ ಗ್ರಾಹಕರ ಮೇಳ
ಕೊಣಾಜೆ: ಇರಾದಲ್ಲಿರುವ ದ.ಕ.ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವವಿಜ್ಞಾನ ಮೇಳ ಹಾಗೂ ಗ್ರಾಹಕರ ಮೇಳವು ಗುರುವಾರ ನಡೆಯಿತು.
ಕಾರ್ಯಕ್ರಮವನ್ನು ಕುರ್ನಾಡು ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳೊಂದಿಗೆ ಪಠ್ಯೇತರ ಚಟುವಟಿಕೆಯಲ್ಲೂ ಆಸಕ್ತಿಯೊಂದಿಗೆ ತೊಡಗಿಸಿಕೊಂಡರೆ ಬಹಳಷ್ಟು ಕೌಶಲವನ್ನು ಬೆಳೆಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂದು ಅಭಿಪ್ರಾಯ ಪಟ್ಟರು.
ವಿಜ್ಞಾನ ಮೇಳದಲ್ಲಿ ಶಾಲಾ ವಿದ್ಯಾರ್ಥಿಗಳು ತಾವೇ ತಯಾರಿಸಿದ ವಿಜ್ಞಾನದ ಮಾದರಿಗಳನ್ನು ಸಾರ್ವಜನಿಕರಿಗೆ ಪ್ರದರ್ಶಿಸಿದರು. ಅಲ್ಲದೆ ಪುಟಾಣಿ ಮಕ್ಕಳು ತಾವೇ ಸಿದ್ದಪಡಿಸಿದ ಸೋಪ್, ಫಿನಾಯಿಲ್, ಮರದಿಂದ ತಯಾರಿಸಿದ ಸ್ಕೇಲ್ ಅಲ್ಲದೆ ತಿಂಡಿ ತಿನಸುಗಳಾದ ಹಪ್ಪಲ, ಸಂಡಿಗೆ ಹಲಸಿನ ಹಣ್ಣು, ಬಾಳೆಹಣ್ಣು, ತರಕಾರಿ ಸೊಪ್ಪುಗಳನ್ನು ವಿವಿಧ ಸ್ಟಾಲ್‌ಗಳಲ್ಲಿ ಮಾರಾಟ ಮಾಡಿ ಗ್ರಾಹಕರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾದರು. ಅಲ್ಲದೆ ಮನರಂಜನೆಗಾಗಿ ವಿವಿಧ ಸ್ಪರ್ಧೆಗಳನ್ನು ಕೂಡಾ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಇರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿ ಪೋಷಕರು, ಸಾರ್ವಜನಿಕರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು.





