ಶಾಲಾ ಪಠ್ಯದಲ್ಲಿ ಮಾನವ ಹಕ್ಕುಗಳ ಸೇರ್ಪಡೆಗೆ ಸಮಿತಿ ರಚನೆ: ಮೀರಾ ಸಕ್ಸೇನಾ
ಮಂಗಳೂರು, ಮಾ.4: ಮಾನವ ಹಕ್ಕುಗಳ ವಿಚಾರವಾಗಿ ಪಠ್ಯದಲ್ಲಿ ಅಳವಡಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಪ್ರತ್ಯೇಕ ಸಮಿತಿ ರಚಿಸುವ ಮೂಲಕ ಮಹತ್ವದ ಹೆಜ್ಜೆಯನ್ನಿರಿಸಿದೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಮೀರಾ ಸಿ. ಸಕ್ಸೇನಾ ಅಭಿಪ್ರಾಯಪಟ್ಟರು.
ಸ್ಕೂಲ್ ಆ್ ಸೋಶಿಯಲ್ ವರ್ಕ್ ರೋಶನಿ ನಿಲಯ ಹಾಗೂ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸಂಯುಕ್ತ ಆಶ್ರಯದಲ್ಲಿ ‘ಸಮಾಜ ಕಾರ್ಯಾಚರಣೆಯಲ್ಲಿ ಮಾನವ ಹಕ್ಕುಗಳ ಶಿಕ್ಷಣ’ ಎಂಬ ವಿಷಯದ ಕುರಿತು ಎರಡು ದಿನ ಕಾಲ ನಡೆಯಲಿರುವ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಅವರು ಇಂದು ಉದ್ಘಾಟಿಸಿದರು.
ಮಕ್ಕಳು ತಮ್ಮ ಪೋಷಕರು ಹಾಗೂ ಹತ್ತಿರದ ಬಂಧುಗಳಿಂದಲೇ ತೊಂದರೆಗೆ ಒಳಗಾಗುತ್ತಿರುವ ಬಗ್ಗೆ ಆಯೋಗಕ್ಕೆ ಹೆಚ್ಚಿನ ದೂರು ಬರುತ್ತಿರುವ ಬಗ್ಗೆ ಉದಾಹರಣೆ ಸಹಿತ ತಿಳಿಸಿದ ಅವರು, ಮಾನವನ ಘನತೆ ಕಾಪಾಡುವುದಕ್ಕೆ ಕೆಲವೊಂದು ಹಕ್ಕುಗಳು ಅಗತ್ಯವಾಗಿದೆ. ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ಮಹಿಳಾ ಮತ್ತು ಮಕ್ಕಳ ಕಳ್ಳ ಸಾಗಾಟ ಪ್ರಕರಣ, ಲೈಂಗಿಕ ದೌರ್ಜನ್ಯ ಮುಂತಾದವುಗಳು ಮಾನವ ಹಕ್ಕು ಉಲ್ಲಂಘನೆ ವ್ಯಾಪ್ತಿಗೆ ಬರುತ್ತದೆ. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಸಾರ್ವಜನಿಕರು ಆಯೋಗಕ್ಕೆ ದೂರು ಸಲ್ಲಿಸಬಹುದು ಎಂದು ಅವರು ಹೇಳಿದರು.
ಸಿವಿಲ್, ಕೌಟುಂಬಿಕ, ಕಾರ್ಮಿಕ ಮತ್ತಿತರ ನ್ಯಾಯಾಲಯಗಳಲ್ಲಿ ಇತ್ಯರ್ಥಪಡಿಸಿಕೊಳ್ಳಬೇಕಾದ ವ್ಯಾಜ್ಯಗಳು ಮಾನವ ಹಕ್ಕುಗಳ ಆಯೋಗಕ್ಕೆ ಬರುತ್ತವೆ. ಈ ಬಗ್ಗೆ ಹೆಚ್ಚಿನ ಜನಜಾಗೃತಿ ನಡೆಯಬೇಕು ಎಂದು ಹೇಳಿದ ಅವರು, ಆಯೋಗ ಸ್ಥಾಪನೆ ಬಳಿಕ ಕಳೆದ ಒಂಭತ್ತು ವರ್ಷಗಳ ಅವಧಿಯಲ್ಲಿ ಒಟ್ಟು 54 ಸಾವಿರ ಅರ್ಜಿಗಳು ಬಂದಿವೆ ಎಂದರು. 39 ಸಾವಿರ ವಿಲೇವಾರಿ ನಡೆಸಲಾಗಿದೆ. ಉಳಿದವುಗಳು ವಿವಿಧ ಹಂತಗಳಲ್ಲಿ ಬಾಕಿ ಉಳಿದಿವೆ ಎಂದು ಹೇಳಿದರು.
ಹಿರಿಯ ನ್ಯಾಯವಾದಿ ಪ್ರಮೀಳಾ ನೇಸರ್ಗಿ ‘ಮಾನವ ಹಕ್ಕುಗಳು- ವಾಸ್ತವ ಮತ್ತು ಅವಾಸ್ತವ’ದ ಕುರಿತು ಮಾತನಾಡಿದರು. ರೋಶನಿ ನಿಲಯದ ಸ್ನಾತಕೋತ್ತರ ವಿಭಾಗದ ಡೀನ್ ಡಾ.ರಮೀಳಾ ಶೇಖರ್ ಸ್ವಾಗತಿಸಿದರು. ಕಾರ್ಯಕ್ರಮ ಸಹ ಕಾರ್ಯದರ್ಶಿ ಶೈಲಜಾ ಸಂತೋಷ್ ಪ್ರಸ್ತಾವನೆಗೈದರು. ಪ್ರಾಂಶುಪಾಲೆ ಡಾ.ಸೋಫಿಯಾ ಎನ್.ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಟೋಲ್ ಫ್ರೀ ನಂಬರ್ ಬಳಸಿ
ಮಾನವ ಹಕ್ಕುಗಳಿಗೆ ಸಂಬಂಧಿಸಿ ತೊಂದರೆಗೊಳಗಾದವರು ಇಮೇಲ್, ಟೋಲ್ ಫ್ರೀ ನಂಬ್ರ (180042523333) ಮೂಲಕ ದೂರು ಸಲ್ಲಿಸುವಂತೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಮೀರಾ ಸಿ. ಸಕ್ಸೇನಾ ಸಲಹೆ ನೀಡಿದರು.
ಅಪರಾಧ ನಡೆದ ಸಂದರ್ಭ 24 ಗಂಟೆ ಒಳಗೆ ಅಪರಾಧಿ ಬಂಧನ ಅಥವಾ ಕಳವಾದ ವಸ್ತುಗಳ ಪತ್ತೆ ಸಾಧ್ಯವಾಗದು. ಆದರೆ ಜನರು ಪೊಲೀಸರಿಂದ ತಕ್ಷಣದ ಫಲಿತಾಂಶ ನಿರೀಕ್ಷಿಸುತ್ತಾರೆ. ಪ್ರಾಯೋಗಿಕವಾಗಿ ಇದು ಅಸಾಧ್ಯ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ಪೊಲೀಸ್ ಆಯುಕ್ತ ಚಂದ್ರಶೇಖರ್ ಅಭಿಪ್ರಾಯಿಸಿದರು.
ಅಪರಾಧ ಸಂಭವಿಸಿದ ಪೊಲೀಸ್ ಇಲಾಖೆ ಮೇಲೆ ಒತ್ತಡ, ಟೀಕೆಗಳು ಸಹಜ. ಇಂತಹ ಸಂದರ್ಭದಲ್ಲಿ ಕೂಡ ನೈಜ ಅಪರಾಧಿಗಳ ಬಂಧನವಷ್ಟೇ ನಮ್ಮ ಗುರಿಯಾಗಿರಬೇಕು ಎಂದು ತಮ್ಮ ಇಲಾಖೆ ಅಧಿಕಾರಿಗಳಿಗೂ ಸೂಚಿಸಲಾಗಿದೆ ಎಂದು ಅವರು ಹೇಳಿದರು.







