ಮಂಗಳೂರು : ಕೊಲೆಗೆ ಸಂಚು - ಆರೋಪಿ ಬಂಧನ

ಮಂಗಳೂರು, ಮಾ. 4: ನಗರದ ಬಜಾಲ್ ಗ್ರಾಮದ ಫೈಸಲ್ ನಗರದ ಬಳಿಯಲ್ಲಿ ವ್ಯಕ್ತಿಯೋರ್ವನ ಕೊಲೆಗೆ ಸಂಚು ರೂಪಿಸಿದ್ದ ಹಾಗೂ ಹಲವು ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಹಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಯತ್ನ, ಕೋಮು ಗಲಭೆ ಹಾಗೂ ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿ ನ್ಯಾಯಾಲಯದಲ್ಲಿ ಹಾಜರಾಗದೆ ತಲೆಮರೆಸಿಕೊಂಡಿದ್ದ 4-5 ವ್ಯಕ್ತಿಗಳು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಜಾಲ್ ಗ್ರಾಮದ ಫೈಸಲ್ ನಗರದಲ್ಲಿ ಯಾವುದೋ ದುಷ್ಕೃತ್ಯವನ್ನು ನಡೆಸಲು ಸಂಚು ರೂಪಿಸುತ್ತಿದ್ದಾರೆ ಎಂದು ದೊರೆತ ಖಚಿತ ಮಾಹಿತಿಯಂತೆ ಸಿಸಿಬಿ ಪೊಲೀಸ್ ನಿರೀಕ್ಷಕ ವೆಲೆಂಟೈನ್ ಡಿ ಸೋಜಾ ಮತ್ತು ಸಿಬ್ಬಂದಿಯವರು ಸದ್ರಿ ಸ್ಥಳಕ್ಕೆ ದಾಳಿಮಾಡಿ ಸ್ಥಳದಲ್ಲಿದ್ದ ಅಲ್ಲಿದ್ದ ಫೈಸಲ್ ನಗರದ ನಿವಾಸಿ ತಲ್ಹತ್ (28) ಎಂಬಾತನನ್ನು ವಶಕ್ಕೆ ಪಡೆದು ಆತನಿಂದ ಒಂದು ಡ್ರಾಗನ್ ಚೂರಿಯನ್ನು ವಶಪಡಿಸಿಕೊಂಡಿದ್ದಾರೆ.
ಈತನ ವಿರುದ್ಧ ಒಟ್ಟು 15 ಪ್ರಕರಣ ದಾಖಲಾಗಿದ್ದು, ಕ್ಷುಲಕ ಕಾರಣಕ್ಕಾಗಿ ಹಲ್ಲೆ, ಸಾರ್ವಜನಿಕ ಆಸ್ತಿಗೆ ನಾಶವುಂಟು ಮಾಡುತ್ತಿದ್ದ. ಈತನ ವಿರುದ್ಧ 2004ರಿಂದ ಸುಮಾರು 12 ಪ್ರಕರಣಗಳು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿಯೇ ದಾಖಲಾಗಿದೆ. ಈ ಪ್ರಕರಣಗಳ ಪೈಕಿ ಸುಮಾರು 8 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ಈತನು ಸುಮಾರು 2 ವರ್ಷದಿಂದ ಈ ಪ್ರಕರಣಗಳಲ್ಲಿ ವಿಚಾರಣೆ ಸಮಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದನು. ಅಲ್ಲದೆ, ಈತ 2011ರಲ್ಲಿ ಕಣ್ಣೂರಿನ ಅಬ್ದುಲ್ ರಹ್ಮಾನ್ ಸಣ್ಣಪುತ್ತ ಎಂಬಾತನನ್ನು ಇತರ ಆರೋಪಿಗಳ ಜೊತೆ ಸೇರಿ ಕೊಲೆ ಮಾಡಿರುವುದಲ್ಲದೆ, ಮಂಗಳೂರು ಉತ್ತರ ಠಾಣಾ ವ್ಯಾಪ್ತಿಯಲ್ಲಿ 2012 ರಲ್ಲಿ ಕಾಂಚನ ಟೆಕ್ಸ್‌ಟೈಲ್ಸ್ ನ ಮ್ಯಾನೇಜರ್‌ನ ಕೊಲೆ ಪ್ರಕರಣದಲ್ಲಿಯೂ ಭಾಗಿಯಾಗಿದ್ದನು. ಆರೋಪಿಯನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.







