ಕಶ್ಯಪ್ ಗಾಯಾಳು ನಿವೃತ್ತಿ, ಶ್ರೀಕಾಂತ್‌ಗೆ ಸೋಲು
ಜರ್ಮನ್ ಓಪನ್ ಗ್ರಾನ್‌ಪ್ರಿ ಬ್ಯಾಡ್ಮಿಂಟನ್ ಟೂರ್ನಿ
ಬರ್ಲಿನ್, ಮಾ.4: ಜರ್ಮನ್ ಓಪನ್ ಗ್ರಾನ್‌ಪ್ರಿ ಬ್ಯಾಡ್ಮಿಂಟನ್ ಟೂರ್ನಿಯ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಪಿ.ಕಶ್ಯಪ್ ಗಾಯಾಳು ನಿವೃತ್ತಿಯಾದರು. ಮತ್ತೊಂದು ಪಂದ್ಯದಲ್ಲಿ ಕೆ. ಶ್ರೀಕಾಂತ್ ಸೋಲುಂಡಿದ್ದಾರೆ.
ನಿರಂತರವಾಗಿ ಕಾಡುತ್ತಿದ್ದ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಜರ್ಮನ್ ಓಪನ್‌ಗೆ ಆಗಮಿಸಿದ್ದ ಕಶ್ಯಪ್ ಮತ್ತೊಮ್ಮೆ ಗಾಯದ ಸಮಸ್ಯೆಗೆ ಸಿಲುಕಿದ್ದಾರೆ. ಈ ತನಕ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ವಿಫಲರಾಗಿರುವ ಕಶ್ಯಪ್ ಮತ್ತೊಮ್ಮೆ ಗಾಯದ ಸಮಸ್ಯೆಗೆ ಸಿಲುಕಿ ತೀವ್ರ ಹಿನ್ನಡೆ ಅನುಭವಿಸಿದ್ದಾರೆ.
ಗುರುವಾರ ರಾತ್ರಿ ಕೊರಿಯಾದ ಸನ್ ವಾನ್ ಹೋ ವಿರುದ್ಧ ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್ ಆಡುತ್ತಿದ್ದಾಗ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಕಶ್ಯಪ್‌ಗೆ ಮಂಡಿನೋವು ಕಾಣಿಸಿಕೊಂಡಿತ್ತು. ಸ್ಕೋರ್ 12-21, 11-16ರಲ್ಲಿದ್ದಾಗ ಕಶ್ಯಪ್ ಪಂದ್ಯದಿಂದ ಹಿಂದೆ ಸರಿದರು.
ಇದೇ ವೇಳೆ, ವಿಶ್ವದ ನಂ.10ನೆ ಆಟಗಾರ ಕೆ.ಶ್ರೀಕಾಂತ್ ಅವರು ಪುರುಷರ ಸಿಂಗಲ್ಸ್ ಸ್ಪರ್ಧೆಯಿಂದ ಹೊರ ನಡೆದಿದ್ದಾರೆ.
ಗುರುವಾರ ರಾತ್ರಿ ನಡೆದ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಶ್ರೀಕಾಂತ್ ಹಾಂಕಾಂಗ್‌ನ ಕಾ ಲಾಂಗ್ ಅಂಗುಸ್ ವಿರುದ್ಧ 21-18, 18-21, 18-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.
ಸಿಂಧು ಕ್ವಾರ್ಟರ್ ಫೈನಲ್‌ಗೆ: ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.
ಗುರುವಾರ ರಾತ್ರಿ ಏಕಪಕ್ಷೀಯವಾಗಿ ನಡೆದ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಸಿಂಧು ಅವರು ಕೆನಡಾದ ಮಿಚೆಲ್ ಲೀ ಅವರನ್ನು 21-9, 21-17 ಸೆಟ್‌ಗಳಿಂದ ಮಣಿಸಿದ್ದಾರೆ.
ಸಿಂಧು ಮುಂದಿನ ಸುತ್ತಿನಲ್ಲಿ ಚೀನಾದ ನಾಲ್ಕನೆ ಶ್ರೇಯಾಂಕದ ಆಟಗಾರ್ತಿ ವಾಂಗ್ ಶಿಕ್ಸಿಯಾನ್‌ರನ್ನು ಎದುರಿಸಲಿದ್ದಾರೆ.







