ಎಲ್ಲ ರಾಜ್ಯಗಳಿಗೂ ಬಿಸಿಸಿಐ ಸದಸ್ಯತ್ವ ನೀಡಬೇಕು: ಸಿಎಬಿ
ಪಾಟ್ನಾ, ಮಾ.4: ಎಲ್ಲ ರಾಜ್ಯಗಳಿಗೂ ಬಿಸಿಸಿಐನಲ್ಲಿ ಪೂರ್ಣ ಪ್ರಮಾಣದ ಸದಸ್ಯತ್ವವನ್ನು ನೀಡಬೇಕು ಎಂಬ ಜಸ್ಟಿಸ್ ಲೋಧಾ ಸಮಿತಿಯ ಶಿಫಾರಸನ್ನು ತಾನು ಬೆಂಬಲಿಸುತ್ತೇನೆ ಎಂದು ಬಿಹಾರ ಕ್ರಿಕೆಟ್ ಸಂಸ್ಥೆ(ಸಿಎಬಿ) ಶುಕ್ರವಾರ ತಿಳಿಸಿದೆ.
ಬಿಹಾರ, ಈಶಾನ್ಯ ರಾಜ್ಯಗಳು, ಪಾಂಡಿಚೇರಿ ಸಹಿತ 11 ರಾಜ್ಯಗಳು ಬಿಸಿಸಿಐನಲ್ಲಿ ಪೂರ್ಣ ಸದಸ್ಯತ್ವವನ್ನು ಹೊಂದಿಲ್ಲ. ಈ ಕಾರಣದಿಂದಾಗಿ ರಾಜ್ಯದಲ್ಲಿ ಕ್ರಿಕೆಟ್ ಬೆಳವಣಿಗೆ ಯಾಗುತ್ತಿಲ್ಲ. ಇದು ಯುವ ಕ್ರಿಕೆಟಿಗರ ಹಕ್ಕುಗಳ ಮೇಲೆ ಪರಿಣಾಮಬೀರುತ್ತಿದೆ ಎಂದು ಸಿಎಬಿ ಕಾರ್ಯದರ್ಶಿ ಆದಿತ್ಯ ವರ್ಮ ಹೇಳಿದ್ದಾರೆ.
ಬಿಸಿಸಿಐ ತನ್ನ ಸಂವಿಧಾನದ ಪ್ರಕಾರ ಕಾರ್ಯನಿರ್ವಹಿಸುತ್ತಿಲ್ಲ. ಪೂರ್ಣ ಸದಸ್ಯತ್ವ ಹೊಂದಿರದ ರಾಜ್ಯಕ್ಕೆ ಕ್ರೀಡಾ ಮೂಲಭೂತ ಸೌರ್ಕಯದ ಅಭಿವೃದ್ಧಿಗಾಗಿ ಬಿಸಿಸಿಐ ಹಣಕಾಸು ನೆರವು ನೀಡುತ್ತಿಲ್ಲ. ಆದ್ದರಿಂದ ಯುವ ಕ್ರಿಕೆಟಿಗರು ತಮ್ಮ ರಾಜ್ಯದ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡಲು ಸಾಧ್ಯವಾಗುತ್ತಿಲ್ಲ ಎಂದು ವರ್ಮ ತಿಳಿಸಿದರು.
ಅತ್ಯಂತ ದೊಡ್ಡ ರಾಜ್ಯ ಬಿಹಾರ 2003 ರಿಂದ ಬಿಸಿಸಿಐನಲ್ಲಿ ಸದಸ್ಯನಾಗಿಲ್ಲ. ಗುಜರಾತ್ ಹಾಗೂ ಮಹಾರಾಷ್ಟ್ರದಂತಹ ರಾಜ್ಯಗಳು ಬಿಸಿಸಿಐನಲ್ಲಿ ನಡೆಯುವ ಚುನಾವಣೆ ಪ್ರಕ್ರಿಯೆಯಲ್ಲಿ ತಲಾ ಏಳು ಮತಗಳನ್ನು ಚಲಾಯಿಸುತ್ತವೆ ಎಂದು ವರ್ಮ ಹೇಳಿದ್ದಾರೆ







