ವಿಶ್ವಕಪ್‌ನಲ್ಲಿ ಪಾಕಿಸ್ತಾನಕ್ಕೆ ಬಿಗಿ ಭದ್ರತೆ: ಬಿಸಿಸಿಐ
ಹೊಸದಿಲ್ಲಿ, ಮಾ.4: ಸುರಕ್ಷತೆಯ ಭೀತಿಯನ್ನು ಮುಂದಿಟ್ಟುಕೊಂಡು ವಿಶ್ವಕಪ್‌ನಿಂದ ಹೊರಗುಳಿಯುವುದಾಗಿ ಪಿಸಿಬಿ ಹೇಳಿಕೆ ನೀಡಿದ ಮರುದಿನವೇ ಎಚ್ಚೆತ್ತುಕೊಂಡಿರುವ ಬಿಸಿಸಿಐ , ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಮುಂಬರುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಸಂಪೂರ್ಣ ಭದ್ರತೆ ನೀಡುವುದಾಗಿ ಶುಕ್ರವಾರ ಭರವಸೆ ನೀಡಿದೆ.
ಭಾರತದಲ್ಲಿ ತನ್ನ ತಂಡಕ್ಕೆ ಭದ್ರತೆಯ ಒದಗಿಸುವ ಕುರಿತು ಬಿಸಿಸಿಐ ಹಾಗೂ ಭಾರತದ ಸರಕಾರ ಲಿಖಿತ ಭರವಸೆ ನೀಡಬೇಕು. ಇದಕ್ಕೆ ತಪ್ಪಿದರೆ ಟೂರ್ನಿಯಿಂದ ಹೊರಗುಳಿಯುವುದಾಗಿ ಪಿಸಿಬಿ ಅಧ್ಯಕ್ಷ ಶಹರ್ಯಾರ್ ಖಾನ್ ಗುರುವಾರ ಎಚ್ಚರಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಸಿಸಿಐನ ಹಿರಿಯ ಅಧಿಕಾರಿ ಹಾಗೂ ಐಪಿಎಲ್ ಆಯುಕ್ತ ರಾಜೀವ್ ಶುಕ್ಲಾ, ‘‘ಮಾ.8 ರಿಂದ ಆರಂಭವಾಗಲಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಸಹಿತ ಟೂರ್ನಿಯಲ್ಲಿ ಭಾಗವಹಿಸುವ ಎಲ್ಲ ತಂಡಗಳಿಗೂ ಬಿಗಿ ಭದ್ರತೆಯನ್ನು ಒದಗಿಸಲಾಗುತ್ತದೆ. ಪಾಕ್ ಭದ್ರತಾ ವ್ಯವಸ್ಥೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಟೂರ್ನಿಯಲ್ಲಿ ಭಾಗವಹಿಸುವುದು, ಬಿಡುವುದು ಪಿಸಿಬಿಗೆ ಬಿಟ್ಟ ವಿಚಾರ’’ ಎಂದು ಹೇಳಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಮಾಜಿ ಸೈನಿಕರು ಭಾರತ-ಪಾಕ್ ನಡುವೆ ಮಾ.19 ರಂದು ನಡೆಯಲಿರುವ ವಿಶ್ವಕಪ್ ಪಂದ್ಯಕ್ಕೆ ಪ್ರತಿಭಟನೆ ವ್ಯಕ್ತಪಡಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಶುಕ್ಲಾ, ‘‘ನಮಗೆ ಪ್ರತಿಭಟನಾಕಾರರ ಮೇಲೆ ಅನುಕಂಪವಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ದೊಂದಿಗೆ ಪ್ರಸ್ತಾವಿತ ದ್ವಿಪಕ್ಷೀಯ ಸರಣಿಯ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ವಿಶ್ವಕಪ್ ಜಾಗತಿಕ ಮಟ್ಟದ ಟೂರ್ನಿಯಾಗಿದೆ. ಈಗ ಭಾರತ-ಪಾಕ್ ಪಂದ್ಯದ ಸ್ಥಳವನ್ನು ಬದಲಾಯಿಸುವುದು ಕಷ್ಟಕರ’’ಎಂದರು.







