ಭಾರತ-ಪಾಕ್ ವಿಶ್ವಕಪ್ ಪಂದ್ಯಕ್ಕೆ ಅರೆ ಸೇನಾಪಡೆ: ಕೇಂದ್ರ ಭರವಸೆ
ಹೊಸದಿಲ್ಲಿ, ಮಾ.4: ಧರ್ಮಶಾಲಾದಲ್ಲಿ ಮಾ.19 ರಂದು ನಿಗದಿಯಾಗಿರುವ ಭಾರತ-ಪಾಕಿಸ್ತಾನ ನಡುವಿನ ಟ್ವೆಂಟಿ-20ವಿಶ್ವಕಪ್ ಪಂದ್ಯಕ್ಕೆ ಭದ್ರತೆಯನ್ನು ಖಾತ್ರಿ ಪಡಿಸಲು ಕೇಂದ್ರ ಅರೆ ಸೇನಾ ಪಡೆಗಳನ್ನು ಒದಗಿಸಲು ತಾವು ಸಿದ್ಧ ಎಂದು ಗೃಹ ಸಚಿವ ರಾಜ್‌ನಾಥ್ ಸಿಂಗ್ ಭರವಸೆ ನೀಡಿದ್ದಾರೆ.
‘‘ಒಂದು ವೇಳೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಕೇಂದ್ರ ಭದ್ರತಾ ಪಡೆ ಒದಗಿಸಲು ಕೋರಿಕೆ ಸಲ್ಲಿಸಿದರೆ, ನಾವು ಅದಕ್ಕೆ ಸಂಪೂರ್ಣ ಸಿದ್ಧರಿದ್ದೇವೆ’’ ಎಂದು ಸುದ್ದಿಗಾರರಿಗೆ ರಾಜ್‌ನಾಥ್ ತಿಳಿಸಿದರು.
ಜ.12 ರಂದು ಪಠಾಣ್‌ಕೋಟ್ ವಾಯುನೆಲೆಯ ಮೇಲೆ ಪಾಕ್ ಉಗ್ರಗಾಮಿಗಳು ದಾಳಿ ನಡೆಸಿದ ನಂತರ ಹಿಮಾಚಲ ಪ್ರದೇಶದ ಮಾಜಿ ಸೈನಿಕರು ಮಾ.19 ರಂದು ಧರ್ಮಶಾಲಾದಲ್ಲಿ ನಿಗದಿಯಾಗಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ-ಪಾಕ್ ವಿಶ್ವಕಪ್ ಪಂದ್ಯ ಗೊಂದಲದ ಗೂಡಾಗಿತ್ತು.
ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ವೀರಭದ್ರ ಸಿಂಗ್ ಮಂಗಳವಾರ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದು, ತನ್ನ ಸರಕಾರಕ್ಕೆ ಭಾರತ-ಪಾಕ್ ವಿಶ್ವಕಪ್ ಪಂದ್ಯಕ್ಕೆ ಭದ್ರತೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದರು. ರಾಜ್ಯದ ಹಿರಿಯ ಸೈನಿಕರು ಧರ್ಮಶಾಲಾದಲ್ಲಿ ಭಾರತ-ಪಾಕ್ ಪಂದ್ಯ ನಡೆಯುವುದನ್ನು ವಿರೋಧಿಸುತ್ತಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದರು.





