ಇರಾನಿ ಕಪ್: ಮುಂಬೈ, ಶೇಷ ಭಾರತ ತಂಡ ಪ್ರಕಟ
ಮುಂಬೈ, ಮಾ.4: ರಣಜಿ ಟ್ರೋಫಿ ಚಾಂಪಿಯನ್ ಮುಂಬೈ ತಂಡ ಮಾ.6 ರಿಂದ ಶೇಷ ಭಾರತ ವಿರುದ್ಧ ಆರಂಭವಾಗಲಿರುವ ಐದು ದಿನಗಳ ಇರಾನಿ ಕಪ್ ಪಂದ್ಯಕ್ಕೆ ತಂಡವನ್ನು ಶುಕ್ರವಾರ ಪ್ರಕಟಿಸಿದ್ದು, ಆರಂಭಿಕ ಆಟಗಾರ ಜೈ ಬಿಸ್ತ್‌ಗೆ ಅವಕಾಶ ನೀಡಿದೆ.
ಮೈಸೂರಿನಲ್ಲಿ ನಡೆದ ರಣಜಿಯ ಕ್ವಾರ್ಟರ್ ಫೈನಲ್‌ನ ಎರಡೂ ಇನಿಂಗ್ಸ್‌ಗಳಲ್ಲಿ ವಿಫಲರಾದ ನಂತರ ಬಿಸ್ತ್ ಮುಂಬೈ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದರು.
ಇತ್ತೀಚೆಗೆ ಇಂದೋರ್‌ನಲ್ಲಿ ಮಧ್ಯಪ್ರದೇಶದ ವಿರುದ್ಧ ಸಿಕೆ ನಾಯ್ಡು ಅಂಡರ್-23 ತಂಡದ ಫೈನಲ್‌ನಲ್ಲಿ ದ್ವಿಶತಕ ಸಿಡಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಇರಾನಿ ಕಪ್‌ಗೆ ಪ್ರಕಟಿಸಲಾಗಿರುವ 16 ಸದಸ್ಯರ ತಂಡಕ್ಕೆ ವಾಪಸಾಗಿದ್ದಾರೆ.
ಮುಂಬೈ ತಂಡ ಕಳೆದ ವಾರ ಪುಣೆಯಲ್ಲಿ ನಡೆದ ಸೌರಾಷ್ಟ್ರ ವಿರುದ್ಧದ ರಣಜಿ ಫೈನಲ್‌ನಲ್ಲಿ ಇನಿಂಗ್ಸ್ ಅಂತರದಿಂದ ಗೆಲುವು ಸಾಧಿಸಿ 41ನೆ ಬಾರಿ ರಣಜಿ ಟ್ರೋಫಿ ಜಯಿಸಿತ್ತು. 1997-98ರಲ್ಲಿ ಕೊನೆಯ ಬಾರಿ ಇರಾನಿ ಕಪ್‌ನ್ನು ಜಯಿಸಿತ್ತು.
ಇರಾನಿ ಟ್ರೋಫಿಯನ್ನು ಯಾವಾಗಲೂ ಗಂಭೀರವಾಗಿ ತೆಗೆದುಕೊಳ್ಳಲಾಗುತ್ತದೆ. 15 ಬಾರಿ ಈ ಟ್ರೋಫಿಯನ್ನು ಜಯಿಸಿರುವ ಮುಂಬೈ 1997-98ರಲ್ಲಿ ಕೊನೆಯ ಬಾರಿ ಈ ಟ್ರೋಫಿ ಜಯಿಸಿತ್ತು ಎಂದು ಮುಂಬೈ ಕೋಚ್ ಚಂದ್ರಕಾಂತ್ ಪಂಡಿತ್ ಹೇಳಿದ್ದಾರೆ.
ಇರಾನಿ ಕಪ್ ತಂಡಗಳು:
ಮುಂಬೈ: ಆದಿತ್ಯ ತಾರೆ(ನಾಯಕ), ಅಭಿಷೇಕ್ ನಾಯರ್, ಧವಳ್‌ಕುಲಕರ್ಣಿ, ಶ್ರೇಯಸ್ ಐಯ್ಯರ್, ಸೂರ್ಯಕುಮಾರ್ ಯಾದವ್, ಅಖಿಲ್ ಹೆರ್ವಾಡ್ಕರ್, ಸಿದ್ದೇಶ್ ಲಾಡ್, ಸುಫಿಯನ್ ಶೇಖ್, ನಿಖಿಲ್ ಪಾಟೀಲ್, ಇಕ್ಬಾಲ್ ಅಬ್ದುಲ್ಲಾ, ಶಾರ್ದೂಲ್ ಠಾಕೂರ್, ಬಲ್ವಿಂದರ್ ಸಿಂಗ್ ಸಂಧು, ಬಿ. ಆಲಂ, ಭವಿನ್ ಥಕ್ಕರ್, ವಿಶಾಲ್, ಜೈ ಬಿಸ್ತ.
ಶೇಷ ಭಾರತ: ಕೆಎಸ್ ಭರತ್, ಫೈಝ್ ಫಝಲ್, ಕರುಣ ನಾಯರ್, ಶೆಲ್ಡನ್ ಜಾಕ್ಸನ್, ನಮನ್ ಓಜಾ(ನಾಯಕ), ಸ್ಟುವರ್ಟ್ ಬಿನ್ನಿ, ಶಹಬಾಝ್ ನದೀಮ್,, ಜಯಂತ್ ಯಾದವ್, ನಾಥು ಸಿಂಗ್, ಜಯದೇವ್ ಉನದ್ಕಟ್, ಬರಿಂದರ್ ಸ್ರಾನ್, ಕೃಷ್ಣ ದಾಸ್, ಸುದೀಪ್ ಚಟರ್ಜಿ, ದೇವ್ ಸಿಂಗ್, ಅಕ್ಷಯ್.







