ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ನಬಾರ್ಡ್ ರಾಜ್ಯ ಪ್ರಶಸ್ತಿ

ಮಂಗಳೂರು, ಮಾ.4: ಡಾ.ಎಂ.ಎನ್.ರಾಜೇಂದ್ರ ಕುಮಾರ್ ನಾಯಕತ್ವದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ ಬ್ಯಾಂಕ್)ಗೆ ನಬಾರ್ಡ್ ರಾಜ್ಯ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಬುಧವಾರ ಪ್ರದಾನ ಮಾಡಲಾಯಿತು.
ಬೆಂಗಳೂರಿನ ನಬಾರ್ಡ್ ಪ್ರಾದೇಶಿಕ ಕಚೇರಿಯ ಸಭಾಂಗಣದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ ಹಾಗೂ ಬ್ಯಾಂಕಿನ ಸಿಇಒ ಎಂ.ವಿಶ್ಬನಾಥ ನಾಯರ್ ರಿಸರ್ವ್ ಬ್ಯಾಂಕ್‌ನ ವಲಯ ನಿರ್ದೇಶಕ ಯುಜಿನ್ ಇ ಕಾರ್ಥಕ್‌ರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.
2013-14ನೆ ಸಾಲಿನಲ್ಲಿ ಸ್ವ ಸಹಾಯ ಗುಂಪುಗಳಿಗೆ ಅತೀ ಹೆಚ್ಚು ಸಾಲ ಸಂಯೋಜನೆಗಾಗಿ ಹಾಗೂ ಸಾಲ ವಸೂಲಾತಿಯಲ್ಲಿ ಗರಿಷ್ಠ ಸಾಧನೆಗೈದಿರುವುದನ್ನು ಪರಿಗಣಿಸಿ ಎರಡು ಪ್ರಥಮ ಪ್ರಶಸ್ತಿಗಳು ಮತ್ತು 2014-15ನೆ ಸಾಲಿನಲ್ಲಿ ಒಟ್ಟು ವ್ಯವಹಾರದಲ್ಲಿ ರಾಜ್ಯದಲ್ಲೇ ಅತ್ಯುತ್ತಮ ಸಾಧನೆಗೈದಿರುವ ಎಸ್‌ಸಿಡಿಸಿಸಿ ಬ್ಯಾಂಕ್ ನಬಾರ್ಡ್ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿತ್ತು. ಎಸ್‌ಸಿಡಿಸಿಸಿ ಬ್ಯಾಂಕ್ ಸ್ವ ಸಹಾಯ ಗುಂಪು ಯೋಜನೆಯನ್ನು 2000ರಲ್ಲಿ ಜಾರಿಗೊಳಿಸಿದ ಬಳಿಕ ಇದುವರೆಗೆ 15 ಬಾರಿ ನಬಾರ್ಡ್ ರಾಜ್ಯ ಪ್ರಶಸ್ತಿಯಿಂದ ಪುರಸ್ಕೃತಗೊಂಡಿದೆ.
ಬುಧವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾರ್ಪೊರೇಶನ್ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಜೈಕುಮಾರ್ ಗರ್ಗ್, ಸ್ಟೇಟ್‌ಬ್ಯಾಂಕ್ ಆ್ ಇಂಡಿಯಾದ ಸಿಜಿಎಂ ರಜನಿ ಮಿಶ್ರ, ನ್ಯಾಬ್ ಫೀನ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್. ಸುರೇಶ್, ನಬಾರ್ಡ್ ಸಿಜಿಎಂ ಜಿ.ಐ. ಗಣಗಿ ಹಾಗೂ ಅಪೆಕ್ಸ್ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಕಾರಿ ಜಿ.ಎಸ್. ರಮಣರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.





