ಎ.4ರಿಂದ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ; ಮೇ 19ರಂದು ಫಲಿತಾಂಶ ಪ್ರಕಟ

ಹೊಸದಿಲ್ಲಿ, ಮಾ.4: ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಗಳಲ್ಲಿ ವಿಧಾನಸಭಾ ಚುನಾವಣೆಗಳಿಗೆ ಚುನಾವಣಾ ಆಯೋಗವು ಮುಹೂರ್ತವನ್ನು ನಿಗದಿಗೊಳಿಸಿದೆ. ಭಾರೀ ಕುತೂಹಲ ಕೆರಳಿಸಿರುವ ಈ ಚುನಾವಣೆಗಳು ಎ.4ರಂದು ಆರಂಭಗೊಂಡು ಮೇ 16ರವರೆಗೆ ನಡೆಯಲಿದ್ದು, ಮೇ 19ರಂದು ಮತಎಣಿಕೆ ನಡೆಯಲಿದೆ.
ಅಸ್ಸಾಂನಲ್ಲಿ ಎ.4 ಮತ್ತು ಎ.11ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಅಸ್ಸಾಂ ವಿಧಾನಸಭೆಯು 126 ಸದಸ್ಯ ಬಲವನ್ನು ಹೊಂದಿದೆ. 294 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಪ.ಬಂಗಾಳದಲ್ಲಿ ಆರು ಹಂತಗಳಲ್ಲಿ ಚುನಾವಣೆ ನಡೆಯಲಿದೆಯಾದರೂ ಮತದಾನ ಏಳು ದಿನ ನಡೆಯಲಿದೆ. ಎ.4 ಮತ್ತು ಎ.11ರ ಮತದಾನವನ್ನು ಒಂದೇ ಹಂತವನ್ನಾಗಿ ಪರಿಗಣಿಸಲಾಗುವುದು ಎಂದು ಆಯೋಗವು ತಿಳಿಸಿದೆ.
ಎ.17,ಎ.21,ಎ.25,ಎ.30 ಮತ್ತು ಮೇ 5 ಮತದಾನ ನಡೆಯಲಿರುವ ಇತರ ದಿನಾಂಕಗಳಾಗಿವೆ. ಕೇರಳದಲ್ಲಿ ಒಂದೇ ಹಂತದಲ್ಲಿ ಚುನಾವಣೆ ಪೂರ್ಣಗೊಳ್ಳಲಿದೆ. ಎಲ್ಲ 140 ವಿಧಾನಸಭಾ ಸ್ಥಾನಗಳಿಗೂ ಮೇ 16ರಂದು ಮತದಾನ ನಡೆಯಲಿದೆ.
ತಮಿಳುನಾಡು ಮತ್ತು ಪುದುಚೇರಿಗಳಲ್ಲಿಯೂ ಮೇ 16ರಂದು ಒಂದೇ ಹಂತದಲ್ಲಿ ಚುನಾವಣೆಗಳು ನಡೆಯಲಿವೆ. ತಮಿಳುನಾಡು 234 ಮತ್ತು ಕೇಂದ್ರಾಡಳಿತ ಪ್ರದೇಶವಾಗಿರುವ ಪುದುಚೇರಿ 30 ವಿಧಾನಸಭಾ ಸ್ಥಾನಗಳನ್ನು ಹೊಂದಿವೆ. ಎಲ್ಲ ನಾಲ್ಕೂ ರಾಜ್ಯಗಳು ಮತ್ತು ಪುದುಚೇರಿಯಲ್ಲಿ ಚುನಾವಣಾ ನೀತಿ ಸಂಹಿತೆ ತಕ್ಷಣದಿಂದಲೇ ಜಾರಿಗೆ ಬಂದಿದೆ.
ಈ ಚುನಾವಣೆಗಳಲ್ಲಿ ಅಭ್ಯಥಿಗಳ ಪಟ್ಟಿಯ ಕೊನೆಯಲ್ಲಿ ನೋಟಾಕ್ಕಾಗಿ ಚಿಹ್ನೆಯಿರುತ್ತದೆ. ಈ ವರೆಗೆ ಅದು ಪ್ರಯೋಗಾರ್ಥ ಆಯ್ಕೆ ಮಾತ್ರವಾಗಿತ್ತು ಎಂದು ಆಯೋಗವು ತಿಳಿಸಿದೆ.

ಬಿಜೆಪಿಯು ಅಸ್ಸಾಮಿನಲ್ಲಿ ಅಸೋಮ ಗಣರಾಜ್ಯ ಪರಿಷದ್ ಮತ್ತು ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ ಜೊತೆಗೆ ಚುನಾವಣಾಪೂರ್ವ ಮೈತ್ರಿಯನ್ನು ಪ್ರಕಟಿಸಿದೆ.
ಪ.ಬಂಗಾಳದಲ್ಲಿ ಮುಖ್ಯಮಂತ್ರಿ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಮತ್ತೊಮ್ಮೆ ಅಧಿಕಾರಕ್ಕೇರಲು ಬಯಸಿದ್ದಾರೆ. ಎಡರಂಗ ಮತ್ತು ಕಾಂಗ್ರೆಸ್ ನಡುವೆ ಮೈತ್ರಿ ಮಾತುಕತೆಗಳು ನಡೆಯುತ್ತಿದ್ದು, ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಗಳು ಹೆಚ್ಚಿವೆ. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿಯೊಂದಿಗೆ ಸ್ಪರ್ಧಿಸಿದ್ದ ಬ್ಯಾನರ್ಜಿ 33 ವರ್ಷಗಳ ಎಡರಂಗ ಆಡಳಿತವನ್ನು ಅಂತ್ಯಗೊಳಿಸಿದ್ದರು, ಆದರೆ ಬಳಿಕ ಕಾಂಗ್ರೆಸ್‌ನೊಂದಿಗೆ ಮೈತ್ರಿಯನ್ನು ಕಡಿದುಕೊಂಡಿದ್ದರು.
ಅತ್ತ ತಮಿಳುನಾಡಿನಲ್ಲಿಯೂ ಎಡಿಎಂಕೆಯ ಜೆ.ಜಯಲಲಿತಾ ಮತ್ತೊಮ್ಮೆ ಅಧಿಕಾರಕ್ಕೆ ಮರಳಲು ಹವಣಿಸುತ್ತಿದ್ದಾರೆ. ಅವರ ಬದ್ಧವೈರಿ ಎಂ.ಕರುಣಾನಿಧಿಯವರ ಡಿಎಂಕೆ ಪಕ್ಷವು ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸಿದ್ದು, ನಟ-ರಾಜಕಾರಣಿ ವಿಜಯಕಾಂತ್ ಅವರ ಡಿಎಂಡಿಕೆಯ ಜೊತೆಗೂ ಮೈತ್ರಿ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ.
ಕೇರಳದಲ್ಲಿ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಅಲ್ಪ ಬಹುಮತದೊಂದಿಗೆ ಕಳೆದ ಐದು ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ನೇತೃತ್ವದ ಯುಡಿಎಫ್‌ನ್ನು ಪದಚ್ಯುತಗೊಳಿಸುವ ಹಂಬಲದಲ್ಲಿದೆ.







