ಸಿರಿಯ ಯುದ್ಧವಿರಾಮ: ಗೋಚರಿಸುವ ಪ್ರಗತಿ
ನಾಗರಿಕರ ಸಾವಿನ ಸಂಖ್ಯೆಯಲ್ಲಿ ಭಾರೀ ಇಳಿಕೆ
ಬೆರೂತ್ (ಲೆಬನಾನ್), ಮಾ. 4: ಸಿರಿಯದಲ್ಲಿ ಯುದ್ಧವಿರಾಮ ಜಾರಿಯಲ್ಲಿರುವಂತೆಯೇ, ಪರಿಸ್ಥಿತಿಯಲ್ಲಿ ಗೋಚರಿಸುವ ಪ್ರಗತಿ ಕಂಡುಬರುತ್ತಿದೆ ಎಂದು ವಿಶ್ವಸಂಸ್ಥೆಯ ಸಿರಿಯ ರಾಯಭಾರಿ ಗುರುವಾರ ಹೇಳಿದ್ದಾರೆ. ಪ್ರತಿ ದಿನ ಸಾಯುತ್ತಿರುವ ನಾಗರಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ ದಾಖಲಾಗಿದೆ ಎಂದಿದ್ದಾರೆ.
ದೇಶದಲ್ಲಿ ಶಾಂತಿಯನ್ನು ಮರುಸ್ಥಾಪಿಸಲು ಇನ್ನಷ್ಟು ಪ್ರಯತ್ನಗಳು ಅಗತ್ಯ ಎಂದು ಫ್ರಾನ್ಸ್ ಮತ್ತು ಬ್ರಿಟನ್‌ಗಳು ಹೇಳಿವೆ ಹಾಗೂ ಸೌಮ್ಯವಾದಿ ಬಂಡುಕೋರ ಗುಂಪುಗಳ ಮೇಲೆ ನಡೆಸುತ್ತಿರುವ ದಾಳಿಗಳನ್ನು ನಿಲ್ಲಿಸುವಂತೆ ರಶ್ಯಕ್ಕೆ ಕರೆ ನೀಡಿವೆ.
ಸಿರಿಯದ ಸಂಕೀರ್ಣ ಆಂತರಿಕ ಯುದ್ಧವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಖಾಯಂ ಯುದ್ಧವಿರಾಮ ಒಪ್ಪಂದವೊಂದನ್ನು ಏರ್ಪಡಿಸುವುದಕ್ಕೆ ಜಾಗತಿಕ ಶಕ್ತಿಗಳು ಬೆಂಬಲ ವ್ಯಕ್ತಪಡಿಸಿವೆ. ಅದಕ್ಕಾಗಿ ಜಿನೇವದಲ್ಲಿ ಮಾರ್ಚ್ 9ರಂದು ಶಾಂತಿ ಮಾತುಕತೆಗಳನ್ನು ಏರ್ಪಡಿಸಲಾಗಿದೆ.
ಗುರುವಾರ ಆರನೆ ದಿನಕ್ಕೆ ಕಾಲಿಟ್ಟಿರುವ ಯುದ್ಧ ವಿರಾಮದಿಂದ ‘‘ಕಣ್ಣಿಗೆ ಕಾಣಿಸುವ’’ ಪ್ರಗತಿಯಾಗಿದೆ ಎಂದು ವಿಶ್ವಸಂಸ್ಥೆಯ ಶಾಂತಿ ರಾಯಭಾರಿ ಸ್ಟಾಫನ್ ಡಿ ಮಿಸ್ತುರ ಗುರುವಾರ ಹೇಳಿದ್ದಾರೆ.
‘‘ದೇಶದಲ್ಲಿ ನಡೆಯುತ್ತಿದ್ದ ಹಿಂಸಾಚಾರ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ. ಇದನ್ನು ಬೇಕಾದರೆ ಸಿರಿಯದ ಜನರಲ್ಲೇ ಕೇಳಿ’’ ಎಂದು ಜಿನೇವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಿಸ್ತುರ ಹೇಳಿದರು. ಆದಾಗ್ಯೂ, ಪರಿಸ್ಥಿತಿ ಈಗಲೂ ನಾಜೂಕಾಗಿಯೇ ಮುಂದುವರಿದಿದೆ ಎಂದರು.
ಸಿರಿಯ ಯುದ್ಧವಿರಾಮದ ಮೇಲುಸ್ತುವಾರಿ ವಹಿಸಿಕೊಂಡಿರುವ ವಿಶ್ವಸಂಸ್ಥೆ ಬೆಂಬಲಿತ ಹಾಗೂ ಅಮೆರಿಕ ಮತ್ತು ರಶ್ಯ ನೇತೃತ್ವದ ಅಂತಾರಾಷ್ಟ್ರೀಯ ಕಾರ್ಯ ಪಡೆಯ ಸಭೆಯಲ್ಲಿ ಭಾಗವಹಿಸುವ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಆದಾಗ್ಯೂ, ಡಮಾಸ್ಕಸ್‌ನ ಕೆಲವು ಭಾಗಗಳು ಮತ್ತು ಹಾಮ್ಸ್ ನಗರ ಸೇರಿದಂತೆ ಹಲವು ಸ್ಥಳಗಳಲ್ಲಿ ಹೋರಾಟ ಮುಂದುವರಿದಿದೆ ಎಂಬುದನ್ನು ಅವರು ಇದೇ ಸಂದರ್ಭದಲ್ಲಿ ಒಪ್ಪಿಕೊಂಡರು.
73 ನಾಗರಿಕರ ಸಾವು
ಯುದ್ಧವಿರಾಮ ಜಾರಿಯಲ್ಲಿದ್ದ ಐದು ದಿನಗಳಲ್ಲಿ ದೇಶಾದ್ಯಂತ ಒಟ್ಟು 73 ನಾಗರಿಕರು ಹತರಾಗಿದ್ದಾರೆ ಎಂದು ‘ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ’ ಹೇಳಿದೆ.
ಈ ಪೈಕಿ 49 ಮಂದಿ ಮೃತಪಟ್ಟಿರುವುದು ಐಸಿಸ್ ನಿಯಂತ್ರಣದ ಪ್ರದೇಶಗಳಲ್ಲಿ ಎಂದು ಅದು ತಿಳಿಸಿದೆ. ಯುದ್ಧ ವಿರಾಮದ ವ್ಯಾಪ್ತಿಯಲ್ಲಿ ಐಸಿಸ್ ಮತ್ತು ಅಲ್‌ಖಾಯ್ದಿದ ಸ್ಥಳೀಯ ಘಟಕವನ್ನು ಸೇರಿಸಲಾಗಿಲ್ಲ.
ಯುದ್ಧವಿರಾಮ ಜಾರಿಗೆ ಬರುವ ಮೊದಲು, ಶುಕ್ರವಾರವೊಂದೇ ದಿನ 63 ನಾಗರಿಕರು ಪ್ರಾಣ ಕಳೆದು ಕೊಂಡಿದ್ದರು. ಅದಕ್ಕೆ ಹೋಲಿಸಿದರೆ, ಪರಿಸ್ಥಿತಿಯಲ್ಲಿ ಭಾರೀ ಸುಧಾರಣೆಯಾಗಿದೆ ಎಂದು ವೀಕ್ಷಣಾಲಯ ತಿಳಿಸಿದೆ.







