ಯುರೋಪ್‌ಗೆ ಬರಬೇಡಿ
ವಲಸಿಗರಿಗೆ ಐರೋಪ್ಯ ಕೌನ್ಸಿಲ್ ಅಧ್ಯಕ್ಷರ ಎಚ್ಚರಿಕೆ
ಪ್ಯಾರಿಸ್, ಮಾ. 4: ಯುರೋಪ್‌ನಲ್ಲಿ ತಲೆದೋರಿರುವ ವಲಸಿಗರ ಬಿಕ್ಕಟ್ಟಿಗೆ ಗುರುವಾರ ಹೊಸ ತಿರುವೊಂದು ಲಭಿಸಿದೆ. ‘‘ಯುರೋಪ್‌ಗೆ ಬರಬೇಡಿ’’ ಎಂಬ ಕಟು ಎಚ್ಚರಿಕೆಯನ್ನು ಯುರೋಪಿಯನ್ ಕೌನ್ಸಿಲ್‌ನ ಅಧ್ಯಕ್ಷ ಡೊನಾಲ್ಡ್ ಟಸ್ಕ್ ವಲಸಿಗರಿಗೆ ನೀಡಿದ್ದಾರೆ.
‘‘ಕಳ್ಳಸಾಗಾಗಣೆದಾರರನ್ನು ನಂಬಬೇಡಿ. ನಿಮ್ಮ ಪ್ರಾಣ ಮತ್ತು ನಿಮ್ಮ ಹಣವನ್ನು ಅಪಾಯಕ್ಕೊಡ್ಡಬೇಡಿ. ಇದರಿಂದ ಏನೂ ಪ್ರಯೋಜನಿವಿಲ್ಲ’’ ಎಂದು ಅಥೆನ್ಸ್‌ನಲ್ಲಿ ಗ್ರೀಕ್ ಪ್ರಧಾನಿಯನ್ನು ಭೇಟಿಯಾದ ಬಳಿಕ ಟಸ್ಕ್ ಈ ಎಚ್ಚರಿಕೆ ನೀಡಿದ್ದಾರೆ.
ಅದೇ ವೇಳೆ, ಮುಂದಿನ ವಾರಗಳಲ್ಲಿ ಗ್ರೀಸ್‌ನಲ್ಲಿ ಸುಮಾರು 70,000 ವಲಸಿಗರು ಸಿಕ್ಕಿಹಾಕಿಕೊಳ್ಳಬಹುದು ಎಂಬ ಎಚ್ಚರಿಕೆಯನ್ನು ವಿಶ್ವಸಂಸ್ಥೆಯ ಉನ್ನತ ಅಧಿಕಾರಿಯೊಬ್ಬರು ಗುರುವಾರ ನೀಡಿದ್ದಾರೆ. ಮೆಸಡೋನಿಯ ಮತ್ತು ಇತರ ಯುರೋಪ್ ದೇಶಗಳು ತಮ್ಮ ಗಡಿಗಳನ್ನು ಮುಚ್ಚುತ್ತಿರುವುದರಿಂದ ಈ ಸಮಸ್ಯೆ ತಲೆದೋರಲಿದೆ ಎಂದು ಅವರು ಹೇಳಿದ್ದಾರೆ.
ಅದೇ ವೇಳೆ, ನಿರಾಶ್ರಿತರ ಸಂಖ್ಯೆಯನ್ನು ಹೇಗೆ ಕಡಿತಗೊಳಿಸುವುದು ಎನ್ನುವುದನ್ನು ಟರ್ಕಿ ನಿರ್ಧರಿಸಬೇಕೇ ಹೊರತು, ಅದರ ಯುರೋಪಿಯನ್ ನರೆಕರೆಯವರಲ್ಲ ಎಂಬುದಾಗಿಯೂ ಟಸ್ಕ್ ಹೇಳಿದರು.
ಗ್ರೀಸ್‌ಗೆ ಪ್ರಯಾಣಿಸುವ ವಲಸಿಗರ ಸಂಖ್ಯೆಯನ್ನು ಕಡಿಮೆಗೊಳಿಸಬೇಕೆನ್ನುವ ಒತ್ತಡದಲ್ಲಿ ಟರ್ಕಿ ಸಿಲುಕಿದೆ. ಈ ವಿಷಯದ ಬಗ್ಗೆ ಚರ್ಚೆ ನಡೆಸಲು ಮಾರ್ಚ್ 7ರಂದು ಟರ್ಕಿ ಮತ್ತು ಯುರೋಪಿಯನ್ ಯೂನಿಯನ್ ನಡುವೆ ಶೃಂಗಸಭೆ ನಡೆಯಲಿದೆ.
ಕಳೆದ ವಾರ ಮುಚ್ಚಿದ ಗ್ರೀಸ್-ಮೆಸಡೋನಿಯನ್ ಗಡಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಸುಮಾರು 3 ಲಕ್ಷ ವಲಸಿಗರಲ್ಲಿ ಅಶಾಂತಿ ತಲೆದೋರಿದ್ದನ್ನು ಸ್ಮರಿಸಬಹುದಾಗಿದೆ.







