ಜಮ್ಮು-ಕಾಶ್ಮೀರ ಗಡಿಯಲ್ಲಿ 30 ಮೀ. ಸುರಂಗ ಪತ್ತೆ!

ಭಾರೀ ಭಯೋತ್ಪಾದಕ ದಾಳಿಯ ಯೋಜನೆ: ಬಿಎಸ್ಸೆಫ್
ಶ್ರೀನಗರ, ಮಾ.4: ಜಮ್ಮು-ಕಾಶ್ಮೀರ ನಿಯಂತ್ರಣ ರೇಖೆಯ ಮೂಲಕ ಹಾದು ಹೋಗಿರುವ 30 ಮೀ. ಉದ್ದ ಹಾಗೂ 10 ಅಡಿ ಆಳದ ಸುರಂಗವೊಂದನ್ನು ಸೈನಿಕರು ಸ್ಥಳದ ಹುಲ್ಲು ತೆಗೆದು ಸ್ವಚ್ಛಗೊಳಿಸುವ ವೇಳೆ ಗುರುವಾರ ಪತ್ತೆ ಮಾಡಿದ್ದಾರೆ.
ಭಾರೀ ಭಯೋತ್ಪಾದನಾ ದಾಳಿಯೊಂದನ್ನು ನಡೆಸುವ ಸಲುವಾಗಿ ಈ ಸುರಂಗವನ್ನು ತೋಡಲಾಗಿತ್ತೆಂದು ಗಡಿ ಭದ್ರತಾ ಪಡೆ (ಬಿಎಸ್ಸೆಫ್) ಇಂದು ಹೇಳಿದೆ.
ಸದ್ಯೋಭವಿಷ್ಯದಲ್ಲಿ ಈ ಸುರಂಗದ ಮೂಲಕ ಭಾರತದೊಳಗೆ ನುಸುಳಿ ದೊಡ್ಡ ಭಯೋತ್ಪಾದಕ ದಾಳಿಯೊಂದನ್ನು ನಡೆಸಲು ಯೋಜನೆ ಹಾಕಿಕೊಂಡಿದ್ದಂತೆ ತೋರುತ್ತಿದೆಯೆಂದು ಹಿರಿಯ ಬಿಎಸ್ಸೆಫ್ ಅಧಿಕಾರಿ ರಾಕೇಶ್ ಶರ್ಮಾ ತಿಳಿಸಿದ್ದಾರೆ.
ಆರ್.ಎಸ್.ಪುರ ವಲಯದ ಅಲ್ಲಾಡ್ ಮಾಯಿ ದೆ ಕೊಥೇ ಎಂಬ ಗಡಿ ಠಾಣ್ಯವೊಂದರ ಬಳಿ ಆನೆ ಹುಲ್ಲಿನಿಂದ ಮುಚ್ಚಿದ್ದ ಈ ಸುರಂಗ ಕಂಡು ಬಂದಿದೆ.
ಈ ಬಗ್ಗೆ ಬಿಎಸ್ಸೆಫ್ ಪಾಕಿಸ್ತಾನದೊಂದಿಗೆ ತನ್ನ ಪ್ರತಿಭಟನೆಯನ್ನು ದಾಖಲಿಸಿದೆ. ತನ್ನಲ್ಲಿರುವ ಸಾಕ್ಷಗಳ ಆಧಾರದಲ್ಲಿ ತಾನು ಕ್ರಮವನ್ನು (ಪಾಕಿಸ್ತಾನದಿಂದ) ನಿರೀಕ್ಷಿಸುತ್ತಿದ್ದೇನೆಂದು ಅದು ಹೇಳಿದೆ.
ತನಿಖೆಗೆ ಮುಂದೆ ಬರುವಂತೆ ತಾವು ಪಾಕಿಸ್ತಾನ ರೇಂಜರ್ಸ್‌ಗೆ ಮನವಿ ಮಾಡಿದ್ದೇವೆ. ತಾವು ಈ ಬಗ್ಗೆ ಎಚ್ಚರಿಕೆ ವಹಿಸಿ ಕ್ರಮ ಕೈಗೊಳ್ಳುತ್ತೇವೆಂದು ಅವರು ಹೇಳಿದ್ದಾರೆಂದು ರಾಕೇಶ್ ಶರ್ಮಾ ತಿಳಿಸಿದ್ದಾರೆ.
ಪಾಕಿಸ್ತಾನದಿಂದ ಕೊರೆಯಲಾಗಿರುವ ಈ ಸುರಂಗದ ಮೂಲಕ ಜಮ್ಮು-ನಗರದೊಳಗೆ ಶಸ್ತ್ರಾಸ್ತ್ರಗಳು ಹಾಗೂ ಭಯೋತ್ಪಾದಕರನ್ನು ಒಳಗೆ ಕಳುಹಿಸಲು ಉದ್ದೇಶಿಸಲಾಗಿತ್ತೆಂದು ಅವರು ಹೇಳಿದ್ದಾರೆ.
ಸುರಂಗ ಪೂರ್ಣಗೊಂಡಿರಲಿಲ್ಲ. ಅದರ ಇನ್ನೊಂದು ತುದಿ ಭಾರತದೊಳಗೆ ತೆರೆದುಕೊಂಡಿಲ್ಲವೆಂದು ಸೈನಿಕರು ತಿಳಿಸಿದ್ದಾರೆ.
2012ರಲ್ಲಿ ವಾತಾಯಾನ ಪೈಪುಗಳಿದ್ದ 400 ಮೀ.ಉದ್ದದ ಬಹುನಾಜೂಕಾದ ಸುರಂಗವೊಂದು ಸಂಬಾ ವಲಯದಲ್ಲಿ ಪತ್ತೆಯಾಗಿತ್ತು. ಇನ್ನೊಂದು ಸುರಂಗ ಅಖ್ನೂರ್ ವಲಯದ ಗಡಿಯ ಬಳಿ 2009ರಲ್ಲಿ ಕಂಡು ಬಂದಿತ್ತು.
ಕುರುಚಲು ಕಾಡನ್ನು ಬೆಳೆಯಗೊಟ್ಟು ಸುರಂಗ ರಚಿಸುವುದು ಅವರ ಕಾರ್ಯತಂತ್ರವಾಗಿದೆಯೆಂದು ಎಎಸ್ಸೆಫ್ ಅಧಿಕಾರಿ ಹೇಳಿದ್ದಾರೆ.
ಅಂತಹ ಸುರಂಗ ಕೊರೆಯಲು ಪರಿಣತಿ ಹಾಗೂ ಭಾರೀ ತಾಂತ್ರಿಕತೆ ಬೇಕಾಗುತ್ತದೆ. ಈ ಹಿಂದೆ ಬಂಧಿಸಲ್ಪಟ್ಟಿದ್ದ ಭಯೋತ್ಪಾದಕರು, ಗಡಿಯೊಳಗೆ ನುಸುಳುವುದಕ್ಕೆ ಸುರಂಗಳನ್ನು ಉಪಯೋಗಿಸುವ ಬಗ್ಗೆ ಸೂಚನೆ ನೀಡಿದ್ದರು. ಗಡಿ ನುಸುಳುವ ಪಾರಂಪರಿಕ ಮಾರ್ಗಗಳು ತಡೆಯಲ್ಪಟ್ಟಿರುವುದರಿಂದ ಭಯೋತ್ಪಾದಕರು ತಮ್ಮ ತಂತ್ರವನ್ನು ಬದಲಿಸಿರುವ ಸಾಧ್ಯತೆಯಿದೆ.








