ಬಾಹ್ಯಾಕಾಶದಲ್ಲಿ 2 ಇಂಚು ಉದ್ದ ಬೆಳೆದಿರುವ ವ್ಯೋಮಯಾನಿ

ವಾಶಿಂಗ್ಟನ್, ಮಾ. 4: ಒಂದು ವರ್ಷದ ಬಾಹ್ಯಾಕಾಶ ವಾಸ ಮುಗಿಸಿ ಗಗನಯಾತ್ರಿ ಸ್ಕಾಟ್ ಕೆಲಿ ಬುಧವಾರ ಭೂಮಿಗೆ ಮರಳಿದಾಗ ಸುಮಾರು ಎರಡು ಇಂಚು ಎತ್ತರ ಬೆಳೆದಿದ್ದಾರೆ ಎಂದು ನಾಸಾ ಪ್ರತಿನಿಧಿಗಳು ಹೇಳಿದ್ದಾರೆ.
ಗಗನಯಾತ್ರಿಗಳಲ್ಲಿ ಇದು ಸಾಮಾನ್ಯ. ಗುರುತ್ವಾಕರ್ಷಣೆ ಶಕ್ತಿಯ ಅನುಪಸ್ಥಿತಿಯಲ್ಲಿ ಬೆನ್ನೆಲುಬಿನಲ್ಲಿರುವ ಸರಪಳಿಗಳ ಮಧ್ಯೆ ಇರುವ ಜೆಲ್‌ನಿಂದ ತುಂಬಿರುವ ಡಿಸ್ಕ್‌ಗಳ ಮೇಲೆ ಕೆಳ ಒತ್ತಡವಿರುವುದಿಲ್ಲ. ಹಾಗಾಗಿ ಅವುಗಳು ವಿಸ್ತರಣೆಗೊಂಡು ಬೆನ್ನೆಲುಬನ್ನು ಉದ್ದ ಮಾಡುತ್ತವೆ. ಇದು ಅಸಹಜವಾದರೂ ಬಾಹ್ಯಾಕಾಶ ಯಾನದ ತಾತ್ಕಾಲಿಕ ಅಡ್ಡಪರಿಣಾಮವಾಗಿದೆ.
ಸುದೀರ್ಘ ಬಾಹ್ಯಾಕಾಶ ವಾಸವು ಮನುಷ್ಯನ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ ಎಂಬ ಅಧ್ಯಯನದಲ್ಲಿ ವಿಜ್ಞಾನಿಗಳಿಗೆ ನೆರವಾಗುವುದಕ್ಕಾಗಿ ಕೆಲಿ ಮತ್ತು ರಶ್ಯದ ಗಗನಯಾನಿ ಮಿಖೈಲ್ ಕೋರ್ನಿಯೆಂಕೊ 342 ದಿನಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದಿದ್ದಾರೆ.
ಅವರ ಈ ವಾಸ್ತವ್ಯದಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ಬಳಸಿಕೊಂಡು, ಬಾಹ್ಯಾಕಾಶದಲ್ಲಿ ತಿಂಗಳುಗಳು ಅಥವಾ ವರ್ಷಗಳನ್ನು ಕಳೆಯುವುದಕ್ಕೆ ಇರುವ ಮಾನಸಿಕ ಹಾಗೂ ದೈಹಿಕ ತೊಂದರೆಗಳೇನು ಎಂಬುದನ್ನು ವಿಜ್ಞಾನಿಗಳು ಅಧ್ಯಯನ ನಡೆಸಲಿದ್ದಾರೆ.
2030ರ ದಶಕದ ವೇಳೆಗೆ ಮಂಗಳ ಅಥವಾ ಅದಕ್ಕಿಂತಲೂ ದೂರದ ಗ್ರಹಗಳಿಗೆ ಸುದೀರ್ಘ ಯಾನ ಕೈಗೊಳ್ಳಲು ನಾಸಾ ನಡೆಸುತ್ತಿರುವ ಪ್ರಯತ್ನಗಳಿಗೆ ಪೂರ್ವಭಾವಿಯಾಗಿ ಇಂಥ ಸಮಸ್ಯೆಗಳನ್ನು ನಿಭಾಯಿಸಲು ಈ ಮಾಹಿತಿಗಳು ವಿಜ್ಞಾನಿಗಳಿಗೆ ನೆರವಾಗಲಿವೆ.







