ಕೋಳಿ, ಕುರಿ ಮಾಂಸದಂಗಡಿ ನಡೆಸಲು ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ ಅರ್ಜಿ!
ಹೊಸದಿಲ್ಲಿ, ಮಾ.4: ಆಶ್ಚರ್ಯಕರ ಬೆಳವಣಿಗೆ ಯೊಂದರಲ್ಲಿ ಸುಮಾರು ಒಂದು ನೂರಕ್ಕೂ ಹೆಚ್ಚು ಕೋಳಿ ಹಾಗೂ ಕುರಿ ಮಾಂಸದಂಗಡಿಗಳ ಮಾಲಕರು ಮುಂಬೈ ವಿಮಾನ ನಿಲ್ದಾಣದ 10 ಕಿ.ಮೀ. ವಿಸ್ತೀರ್ಣದಲ್ಲಿ ತಮ್ಮ ಅಂಗಡಿಗಳನ್ನು ನಡೆಸಲು ಅನುಮತಿ ಕೋರಿ ರಾಜಧಾನಿಯಲ್ಲಿರುವ ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ನಿರ್ದೇಶನಾಲಯವು ಇಂತಹ ಅರ್ಜಿಗಳನ್ನು ಇದೇ ಮೊದಲ ಬಾರಿ ಪಡೆದಿದ್ದು ಇಲ್ಲಿಯ ತನಕ ಇಂತಹ ಯಾವುದೇ ಅನುಮತಿ ಕೂಡ ಅದು ನೀಡದಿರುವುದರಿಂದ ಅವುಗಳ ವಿಚಾರದಲ್ಲಿ ಏನು ತೀರ್ಮಾನ ಕೈಗೊಳ್ಳುವುದೆಂಬ ಗೊಂದಲದಲ್ಲಿದೆ.
ಪಕ್ಷಿಗಳನ್ನು ಆಕರ್ಷಿಸಿ ವಿಮಾನಗಳಿಗೆ ಅಪಾಯ ವುಂಟು ಮಾಡುವ ಸಂಭವವಿರುವುದರಿಂದ ವಿಮಾನ ನಿಲ್ದಾಣದ ಆಸುಪಾಸಿನ ಹತ್ತು ಕಿ.ಮೀ. ಪ್ರದೇಶದಲ್ಲಿ ಪ್ರಾಣಿ ವಧೆಯನ್ನು ಏರ್‌ಕ್ರಾಪ್ಟ್ ಆ್ಯಕ್ಟ್‌ನ ನಿಯಮ 91ರ ಅನ್ವಯ ನಿಷೇಧಿಸಲಾಗಿದೆ.
ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಕೋಳಿ ಹಾಗೂ ಕುರಿ ಮಾಂಸ ದಂಗಡಿಗಳನ್ನು ತೆರೆಯಲು ಅನುಮತಿಸಿರುವುದಕ್ಕೆ ಕೆಲವು ವರ್ಷಗಳ ಹಿಂದೆ ಮುಂಬೈ ವಿಮಾನ ನಿಲ್ದಾಣವು ಬಿಎಂಸಿ ವಿರುದ್ಧ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದಾಗ ಇಂತಹ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಲು ಹೈಕೋರ್ಟ್ ಬಿಎಂಸಿಗೆ ಸೂಚಿಸಿತ್ತು.
ಈ ಮಾಂಸದಂಗಡಿಗಳ ಮಾಲಕರು ಮುಂದಿನ ತಿಂಗಳು ತಮ್ಮ ಪರವಾನಿಗೆಯನ್ನು ನವೀಕರಿಸಬೇಕಾಗಿರುವುದರಿಂದ ಅವರೀಗ ತಮ್ಮ ಅಂಗಡಿಗಳನ್ನು ನಡೆಸಲು ನಮ್ಮ ಅನುಮತಿ ಬೇಡುತ್ತಿದ್ದಾರೆಂದು ವಿಮಾನಯಾನ ನಿರ್ದೇಶನಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪಕ್ಷಿಗಳಿಂದ ವಿಮಾನಗಳಿಗೆ ಹಾನಿಯಾಗುವ ಸಾಧ್ಯತೆ ಹಾಗೂ ವಿಮಾನ ನಿಲ್ದಾಣದೊಳಗೆ ಪ್ರಾಣಿಗಳ ಪ್ರವೇಶ ಸಾಧ್ಯತೆ ಹೆಚ್ಚಾಗಿರುವ ಮುಂಬೈ ವಿಮಾನ ನಿಲ್ದಾಣದ ಆಸುಪಾಸು ಸುಮಾರು 300ಕ್ಕೂು ಅಧಿಕ ಮಾಂಸದಂಗಡಿಗಳಿವೆಯೆಂದು ಅಂದಾಜಿಸಲಾಗಿದೆ.







