ಕಂಕನಾಡಿ ಠಾಣೆಯ 8 ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಶಿಫಾರಸು
ಮಂಗಳೂರು, ಮಾ.4: ಕಂಕನಾಡಿ (ಗ್ರಾಮಾಂತರ) ಪೊಲೀಸ್ ಇನ್‌ಸ್ಪೆಕ್ಟರ್ ಆಗಿದ್ದ ಪ್ರಮೋದ್‌ರ ಪರ ಕಾನೂನು ಮೀರಿ ಪ್ರತಿಭಟನೆ ನಡೆಸಿದ್ದ ಆರೋಪದ ಮೇಲೆ ಠಾಣೆಯ 8 ಮಂದಿ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದೆಂಬ ಮೊದಲ ಹಂತದ ಶಿಫಾರಸು ರಾಜ್ಯ ಗೃಹ ಇಲಾಖೆಗೆ ರವಾನೆಯಾಗಿದೆ ಎಂದು ಹೇಳಲಾಗಿದೆ.
ಮಂಗಳೂರು ನಗರದ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಶಾಂತರಾಜು ಮತ್ತು ಪಣಂಬೂರು ಉಪವಿಭಾಗದ ಎಸಿಪಿ ಮದನ್ ಗಾಂವ್ಕರ್ ನೀಡಿದ ವರದಿಯಾಧಾರದಲ್ಲಿ ಕಮಿಶನರ್ ಚಂದ್ರಶೇಖರ್ ಈ ಶಿಫಾರಸು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
16 ಮಂದಿಯ ಲಿಸ್ಟ್ ಮಂಗಳೂರು ನಗರ ಪೊಲೀಸ್ ಕಮಿಶನರ್ ಕಚೇರಿ ತಲುಪಿತ್ತು. ಇದರಲ್ಲಿ 8 ಮಂದಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬಹುದು ಮತ್ತು ಉಳಿದ 8 ಮಂದಿಯು ಘಟನೆಯ ಸಂದರ್ಭದಲ್ಲಿ ನಿರ್ಲಕ್ಷತನದ ವರ್ತನೆ ತೋರಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ. ಘಟನೆ ನಡೆದ ದಿನದ ವೀಡಿಯೊ ದೃಶ್ಯಗಳ ಆಧಾರದಲ್ಲಿ 8 ಮಂದಿ ಪೊಲೀಸರ ವಿರುದ್ಧ ಕ್ರಮಕ್ಕೆ ಡಿಸಿಪಿ ಶಾಂತರಾಜು ಹಾಗೂ ಎಸಿಪಿ ಮದನ್ ಗಾಂವ್ಕರ್ ವರದಿ ನೀಡಿದ್ದಾರೆ. ಪ್ರಕರಣವೊಂದರ ಆರೋಪಿ ಅಬೂಬಕರ್ ಎಂಬಾತನನ್ನು ಇನ್‌ಸ್ಪೆಕ್ಟರ್ ಪ್ರಮೋದ್‌ಬಂಧಿಸಿದ್ದರು. ಈ ಸಂದರ್ಭದಲ್ಲಿ ಆರೋಪಿಯ ಬಿಡುಗಡೆಗೆ ಹಲವು ರಾಜಕಾರಣಿಗಳಿಂದ ಒತ್ತಡ ಬಂದಿದ್ದರೂ ಇನ್‌ಸ್ಪೆಕ್ಟರ್ ಪ್ರಮೋದ್ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆದರೆ ಆರೋಪಿ ಅಬೂಬಕರ್ ಅಮಾಯಕನಾಗಿದ್ದು, ಪ್ರಮೋದ್ ಸುಳ್ಳು ಪ್ರಕರಣದಲ್ಲಿ ಬಂಧಿಸಿದ್ದಾರೆ ಎಂಬ ಆರೋಪಗಳು ಕೂಡ ಅಂದು ಕೇಳಿ ಬಂದಿದ್ದವು. ಇತ್ತ ಸಂಘಪರಿವಾರದ ಕಾರ್ಯಕರ್ತರೊಂದಿಗೆ ಅನ್ಯೋನ್ಯವಾಗಿದ್ದ ಪ್ರಮೋದ್ ಪರಿವಾರದವರ ಒತ್ತಡದ ಮೇರೆಗೆ ಅಬೂಬಕರ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂಬುದು ಸ್ಥಳೀಯರ ಆರೋಪವಾಗಿತ್ತು.







