ಈ ಅಪ್ರತಿಮ ನೃತ್ಯ ಕಲಾವಿದೆ ರಾಷ್ಟ್ರಪತಿ ಹುದ್ದೆಯನ್ನು ತಿರಸ್ಕರಿಸಿದರು !
ಖುದ್ದು ಪ್ರಧಾನಿಯೇ ಕೇಳಿದಾಗ ' ಬೇಡ ನನಗೆ ' ಎಂದು ಬಿಟ್ಟರು
ಆಕೆ ಖ್ಯಾತ ಧಾರ್ಮಿಕ ತತ್ವಜ್ಞಾನಿಯಾಗಿದ್ದರು. ಅಗ್ರ ಭರತನಾಟ್ಯ ಕಲಾವಿದೆಯಾಗಿದ್ದರು. ನೃತ್ಯ ನಿರ್ದೆಶಕಿಯಾಗಿದ್ದರು. ಚೆನ್ನೈನ ಪ್ರಖ್ಯಾತ ಕಲಾಕ್ಷೇತ್ರದ ಸ್ಥಾಪಕಿ ಅವರು. ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಪ್ರಾಣಿ ಹಕ್ಕು ವಿಷಯದಲ್ಲಿ ಅತೀವ ಆಸಕ್ತಿ ಇದ್ದ ಈ ಸಾಧಕಿ ದೇಶದಲ್ಲಿ ಪ್ರಾಣಿಗಳಿಗೆ ಹಿಂಸೆ ನೀಡುವ ವಿರುದ್ಧ ಕಾನೂನು ಜಾರಿಯಾಗುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಅವರು ದೇಶದ ಪ್ರಾಣಿ ಕಲ್ಯಾಣ ಮಂಡಳಿಯ ಪ್ರಪ್ರಥಮ ಅಧ್ಯಕ್ಷರೂ ಹೌದು. ಇದೆಲ್ಲಕ್ಕಿಂತ ವಿಶೇಷ ವಿಷಯವೊಂದಿದೆ. ಅಂದಿನ ಪ್ರಧಾನಿ ಖುದ್ದು " ನೀವು ದೇಶದ ಮುಂದಿನ ರಾಷ್ಟ್ರಾಧ್ಯಕ್ಷೆ ಆಗುತ್ತೀರಾ" ಎಂದು ಕೇಳಿದ್ದಕ್ಕೆ " ಇಲ್ಲ " ಎಂದು ಅದನ್ನು ತಿರಸ್ಕರಿಸಿದ ಅತ್ಯಪರೂಪದ ದಾಖಲೆ ಈ ವಿಶಿಷ್ಟ ಮಹಿಳೆಯ ಹೆಸರಲ್ಲಿದೆ. ಅವರು ರುಕ್ಮಿಣಿ ದೇವಿ ಅರುಣ್ ಡೇಲ್.
ಪ್ರಾಣಿಗಳ ವಿರುದ್ಧದ ಹಿಂಸೆಯ ವಿರುದ್ಧ ತೀವ್ರ ಕಾಳಜಿಯಿಂದ ಕೆಲಸ ಮಾಡುತ್ತಿದ್ದ ರುಕ್ಮಿಣಿ ದೇವಿ ಅವರು ರಾಜ್ಯಸಭೆಯ ಸದಸ್ಯೆಯಾಗಿ ೧೯೫೨ ರಲ್ಲಿ ಖಾಸಗಿ ಸದಸ್ಯರ ಪರವಾಗಿ ಪ್ರಾಣಿ ಹಿಂಸೆ ತಡೆ ಮಸೂದೆಯನ್ನು ಮಂಡಿಸಿದರು. ಆಗ ಪ್ರಧಾನಿಯಾಗಿದ್ದ ಜವಾಹರ್ ಲಾಲ್ ನೆಹರೂ ಅವರು ಇದನ್ನು ಬೆಂಬಲಿಸಿ ಮಾತನಾಡಿದರು. ಇದರ ಪರಿಣಾಮವಾಗಿ ೧೯೬೦ ರಲ್ಲಿ ಪ್ರಾಣಿ ಹಿಂಸೆ ತಡೆ ಕಾಯ್ದೆ ದೇಶದಲ್ಲಿ ಜಾರಿಗೆ ಬಂತು.
ಆದರೆ ಪ್ರಧಾನಿ ಮೊರಾರ್ಜಿ ದೇಸಾಯಿ ಅವರೊಂದಿಗೆ ರುಕ್ಮಿಣಿ ಅವರು ಆಪ್ತರಾಗಿದ್ದರು. ಇಬ್ಬರಲ್ಲೂ ಹಲವು ಸಾಮ್ಯತೆಗಳಿದ್ದವು. ಇಬ್ಬರದೂ ಜನ್ಮ ದಿನಾಂಕ ಫೆಬ್ರವರಿ ೨೯. ಇಬ್ಬರೂ ಬ್ರಾಹ್ಮಣರು , ಅಪ್ಪಟ ಸಸ್ಯಾಹಾರಿಗಳು. ಇಬ್ಬರಿಗೂ ಕಮ್ಯುನಿಸಂ ಹಾಗು ಸಮಾಜವಾದ ಎಂದರೆ ಅಷ್ಟಕ್ಕಷ್ಟೇ.
ಹಾಗಾಗಿಯೇ ಏನೋ , ಮೊರಾರ್ಜಿ ಹಾಗು ರುಕ್ಮಿಣಿ ಅವರು ಆಪ್ತರಾಗಿದ್ದರು. ಇದೇ ಪ್ರಭಾವ ಬಳಸಿ ಮುಂದೆ ಅಮೇರಿಕಾದ ಪರೀಕ್ಷಾ ಕೇಂದ್ರಗಳಿಗೆ ಭಾರತದಿಂದ ರೀಸಸ್ ಮಂಗಗಳನ್ನು ಕಳಿಸುವುದಕ್ಕೆ ಮೊರಾರ್ಜಿ ನಿಷೇಧ ಹಾಕುವಂತೆ ಮಾಡಿದರು ರುಕ್ಮಿಣಿ ದೇವಿ. ಇದು ದೊಡ್ಡ ವಿವಾದಕ್ಕೆ ಕಾರಣವಾಯಿತು. ಖುದ್ದು ಅಮೇರಿಕಾದ ಭಾರತ ರಾಯಭಾರಿ ಬಂದು ಮೊರಾರ್ಜಿ ಬಳಿ ಈ ಬಗ್ಗೆ ದೂರಿದರು. ಆದರೆ ಮೊರಾರ್ಜಿ ಬಗ್ಗಲಿಲ್ಲ.
ಮೊರಾರ್ಜಿ ಅವರು ತಮ್ಮ ವಿಚಿತ್ರ ಗುಣ ಸ್ವಭಾವಗಳಿಗೆ ಹೆಸರು ಮಾಡಿದವರು. ಆದರೆ ಯಾರೂ ಭಾರತದಲ್ಲಿ ಆವರೆಗೆ ಊಹಿಸಲೂ ಸಿದ್ದರಿಲ್ಲದ ರಾಜಕೀಯ ಹೆಜ್ಜೆಯೊಂದನ್ನು ೧೯೭೭ ರಲ್ಲಿ ಇಟ್ಟರು. ಯಾರೊಬ್ಬರಲ್ಲೂ ಸಮಾಲೋಚಿಸದೆ ರಾಷ್ಟ್ರಪತಿ ಹುದ್ದೆಗೆ ರುಕ್ಮಿಣಿ ದೇವಿ ಅವರನ್ನು ತರಲು ಅವರು ನಿರ್ಧರಿಸಿಬಿಟ್ಟರು. ಮಹಿಳೆಗೆ ರಾಷ್ಟ್ರಪತಿ ಹುದ್ದೆ ನೀಡುವುದೇ ಆಗ ಹೊಸ ಐಡಿಯಾ. ಅದರಲ್ಲೂ ರಾಜಕೀಯದಲ್ಲಿಲ್ಲದ ಒಬ್ಬ ಕಲಾವಿದೆಗೆ, ತತ್ವಜ್ಞಾನಿಗೆ ! ಇಡೀ ದೇಶವೇ ಈ ಹೊಸ ನಡೆಗೆ ಹೇಗೆ ಪ್ರತಿಕ್ರಿಯಿಸುವುದೆಂದು ತೋಚದೆ ಕುಳಿತಿತ್ತು. ಆದರೆ ರುಕ್ಮಿಣಿ ಅವರಿಗೆ ಮಾತ್ರ ಏನು ಪ್ರತಿಕ್ರಿಯೆ ನೀಡಬೇಕು ಎನ್ನುವ ಬಗ್ಗೆ ಯಾವುದೇ ಗೊಂದಲ ಇರಲಿಲ್ಲ !
ಚೆನ್ನೈನ ಅಡ್ಯಾರ್ ನಲ್ಲಿರುವ ರುಕ್ಮಿಣಿ ಅವರ ಮನೆಗೆ ದೂರವಾಣಿ ಕರೆ ಮಾಡಿದ ಪ್ರಧಾನಿ ಮೊರಾರ್ಜಿ ದೇಸಾಯಿ " ನೀವು ಮುಂದಿನ ಅಧ್ಯಕ್ಷರಾಗಲು ಒಪ್ಪಿಗೆ ನೀಡುತ್ತೀರಾ ?" ಎಂದು ಕೇಳಿದರು. " ಅಧ್ಯಕ್ಷೆ, ಯಾವುದರ ಅಧ್ಯಕ್ಷೆ ?" ಆಕೆಯ ಮರುಪ್ರಶ್ನೆ ! " ದೇಶದ ಮುಂದಿನ ಅಧ್ಯಕ್ಷೆ " ಮೊರಾರ್ಜಿ ಅವರ ಉತ್ತರ. ಆಕೆ ಈ ಬಹುದೊಡ್ಡ ಹುದ್ದೆಯನ್ನು ಸ್ಪಷ್ಟವಾಗಿ ನಿರಾಕರಿಸಿದರು.
ಮತ್ತೆ ಅವರು ಅದಕ್ಕೆ ಕಾರಣ ನೀಡಿದ್ದು ಹೀಗೆ. " ನಾನು ಬರಿಗಾಲಿನಲ್ಲಿ ನಡೆಯುವವಳು. ಹಾಗೆ ನಾನು ರಾಷ್ಟ್ರಪತಿ ಭವನದಲ್ಲಿ ಮಾಡಲು ಸಾಧ್ಯವೇ ? ನನಗೆ ಶಸ್ತ್ರಾಸ್ತ್ರ ಕಂಡರೆ ಆಗುವುದಿಲ್ಲ. ಆದರೆ ರಾಷ್ಟ್ರಪತಿ ಆದರೆ ನನ್ನ ಹಿಂದೆ ಮುಂದೆ ಗನ್ ಹಿಡಿದ ಎಡಿಸಿಗಳು ಇರಬೇಕು. ನಾನು ಕಟ್ಟರ್ ಸಸ್ಯಾಹಾರಿ. ಹೀಗಿರುವಾಗ ವಿದೇಶಿ ಗಣ್ಯರಿಗೆ ಮಾಂಸಾಹಾರಿ ಊಟೋಪಹಾರ ನೀಡುವುದು ಹೇಗೆ ? ಇದೆಲ್ಲಕ್ಕಿಂತ ಮಿಗಿಲಾಗಿ ನನ್ನ ಜೀವನ ಕಲೆ, ತತ್ವಜ್ಞಾನ ಹಾಗು ಮದ್ರಾಸ್ ಸುತ್ತ ಸುತ್ತುತ್ತದೆ. ಆದರೆ ದೆಹಲಿ ಎಂದರೆ ಬೇರೆಯೇ ಲೋಕ. ಹಾಗಾಗಿ ನಾನು ಆ ಹುದ್ದೆಯನ್ನು ತಿರಸ್ಕರಿಸಿದೆ " ಎಂದರು ರುಕ್ಮಿಣಿ ದೇವಿ.
ಗೋಪಾಲಕೃಷ್ಣ ಗಾಂಧಿ ಅವರು hindustantimes.com ನಲ್ಲಿ ಬರೆದ ಲೇಖನದ ಆಯ್ದ ಭಾಗ