ಕನ್ಹಯ್ಯಾ ಪರ ಎದ್ದು ನಿಂತ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ
.jpg)
ಹೊಸದಿಲ್ಲಿ,ಮಾರ್ಚ್.5: ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಬಿಡುಗಡೆ ನಂತರ ದೊಡ್ಡ ರಾಜಕಾರಣಿಗಳು ಅವರನ್ನು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ. ಈಗ ಈ ಪಟ್ಟಿಗೆ ಬಿಜೆಪಿಯ ಒಳಗಿಂದಲೇ ಧ್ವನಿ ಸೇರಿಕೊಂಡಿದೆ. ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಈಗ ಕನ್ಹಯ್ಯಾರ ಪರವಹಿಸಿ ಟ್ವೀಟ್ ಮಾಡಿದ್ದಲ್ಲದೆ. ಅವರ ಬಿಡುಗಡೆಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಶತ್ರುಘ್ನ ಸಿನ್ಹಾ ತನ್ನ ಟ್ವಿಟರ್‌ನಲ್ಲಿ ಕನ್ಹಯ್ಯಾರಿಗೆ ಜಾಮೀನು ಸಿಕ್ಕಿದ್ದಕ್ಕೆ ಖುಶಿ ವ್ಯಕ್ತಪಡಿಸಿ ಅವರಿಗೆ ಸಿಕ್ಕಿರುವ ಬೆಂಬಲದ ಬಲದಲ್ಲಿ ವಿರೋಧಿಗಳ ಮುಖದ ನೇರಕ್ಕೆ ಉತ್ತರಿಸಲು ಶಕ್ತರು ಎಂದು ಶತ್ರುಘ್ನ ಸಿನ್ಹಾ ಹೇಳಿದ್ದಾರೆ. ತಾನು ಆಶಾವಾದಿಯಾಗಿದ್ದೇನೆ ಮತ್ತು ಪ್ರಾರ್ಥಿಸುತ್ತಿದ್ದೇನೆ. ಕನ್ಹಯ್ಯಾಕುಮಾರ್ ತನ್ನ ಹಿತಾಕಾಂಕ್ಷಿಗಳ ನೆರವಲ್ಲಿ ತನ್ನನ್ನು ನಿರಪರಾಧಿ ಎಂದು ಸಾಬೀತುಪಡಿಸುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಮೊದಲು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಕನ್ಹಯ್ಯಾ ಕುಮಾರ್‌ರ ಜಾಮೀನು ದೊರಕಿದ್ದಕ್ಕಾಗಿ ಸಂತೋಷ ವ್ಯಕ್ತಪಡಿಸಿದ್ದರು.





