ಟ್ರೇಡ್‌ಮಾರ್ಕ್ ವಿವಾದ:‘‘ಬ್ಲೈಂಡ್ ಪಿಂಕ್‌ಥಾನ್’’ ರದ್ದುಗೊಳಿಸಿದ ಬೆಂಗಳೂರು ಎನ್‌ಜಿಒ

ಮುಂಬೈ,ಮಾ.5: ನಟ ಮಿಲಿಂದ್ ಸೋಮನ್ ಅವರ ಕಂಪನಿಯು ‘‘ಪಿಂಕ್‌ಥಾನ್’’ಟ್ರೇಡ್‌ಮಾರ್ಕ್‌ನ ಮೇಲೆ ತನ್ನ ಹಕ್ಕನ್ನು ಪ್ರತಿಪಾದಿಸಿ ಮುಂಬೈ ಉಚ್ಚ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿರುವ ಹಿನ್ನೆಲೆಯಲ್ಲಿ ಅಂಧರು ಮತ್ತು ಅಂಗವಿಕಲರಿಗಾಗಿ ಶ್ರಮಿಸುತ್ತಿರುವ ಬೆಂಗಳೂರಿನ ಎನ್‌ಜಿಒ ಐಡಿಎಲ್ ಫೌಂಡೇಷನ್ ರವಿವಾರ ತಾನು ಆಯೋಜಿಸಿದ್ದ ‘‘ಬ್ಲೈಂಡ್ ಪಿಂಕಥಾನ್’’ಅನ್ನು ರದ್ದುಗೊಳಿಸಿದೆ.
ಸೋಮನ್ ಅವರ ಮ್ಯಾಕ್ಸಿಮಸ್ ಮೈಸ್ ಆ್ಯಂಡ್ ಮೀಡಿಯಾ ಸೊಲ್ಯೂಷನ್ಸ್ ತಾನು ಯುನೈಟೆಡ್ ಸಿಸ್ಟರ್ಸ್ ಫೌಂಡೇಷನ್‌ನ ಸಹಭಾಗಿತ್ವದೊಂದಿಗೆ ಕಳೆದ ನಾಲ್ಕು ವರ್ಷಗಳಿಂದಲೂ ಸ್ತನ ಕ್ಯಾನ್ಸರ್ ಮತ್ತು ಮಹಿಳೆಯರಿಗೆ ಸಂಬಂಧಿಸಿದ ಇತರ ಆರೋಗ್ಯ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಲು ಭಾರತದಾದ್ಯಂತ ವಿವಿಧ ನಗರಗಳಲ್ಲಿ ಮಹಿಳೆಯರ ‘‘ಪಿಂಕ್‌ಥಾನ್’’ಮ್ಯಾರಥಾನ್‌ಗಳನ್ನು ನಡೆಸುತ್ತಿರುವುದಾಗಿ ತನ್ನ ಅರ್ಜಿಯಲ್ಲಿ ಹೇಳಿದೆ. ಇಂತಹ ಮೊದಲ ಮ್ಯಾರಥಾನ್ 2012,ಡಿಸೆಂಬರ್‌ನಲ್ಲಿ ಮುಂಬೈಯಲ್ಲಿ ನಡೆದಿತ್ತು.
ಶುಕ್ರವಾರ ದಾವೆಯ ವಿಚಾರಣೆ ನಡೆಸಿದ್ದ ನ್ಯಾ.ಕೆ.ಆರ್.ಶ್ರೀರಾಮ್ ಅವರು ರಾಜಿಯಲ್ಲಿ ವಿವಾದವನ್ನು ಬಗೆಹರಿಸಿಕೊಳ್ಳುವಂತೆ ಸೂಚಿಸಿದ್ದರು. ಇದಕ್ಕೆ ಸಮ್ಮತಿಸಿದ ಐಡಿಎಲ್ ಫೌಂಡೇಷನ್‌ನ ಮುಖ್ಯ ಪದಾಧಿಕಾರಿ ಡಾ.ಡಿ.ಕೆ.ಪಾಲ್ ಅವರು ವಿಚಾರಣೆಯು ಬಾಕಿಯಿರುವುದರಿಂದ ಬೆಂಗಳೂರಿನಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮವನ್ನು ರದ್ದುಗೊಳಿಸುವುದಾಗಿ ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದರು .
ಹೇಳಿಕೆಯನ್ನು ಒಪ್ಪಿಕೊಂಡ ನ್ಯಾಯಮೂರ್ತಿಗಳು ಅರ್ಜಿದಾರರಿಗೆ 30 ದಿನಗಳ ನೋಟಿಸ್ ನೀಡಿದ ಹೊರತು ‘‘ಪಿಂಕ್‌ಥಾನ್’’ಶಬ್ದವನ್ನು ಬಳಸಿ ಯಾವುದೇ ಕಾರ್ಯಕ್ರಮವನ್ನು ನಡೆಸದಂತೆ ಐಡಿಎಲ್‌ಗೆ ನಿರ್ದೇಶ ನೀಡಿದ್ದರು.
ತನ್ನ ಮ್ಯಾರಥಾನ್‌ಗೆ ‘‘ಪಿಂಕ್‌ಥಾನ್’’ ಶಬ್ದವನ್ನು ಬಳಸದಂತೆ ಮತ್ತು ತಮಗೆ 25 ಲ.ರೂ.ನಷ್ಟ ಪರಿಹಾರವನ್ನು ಪಾವತಿಸುವಂತೆ ಐಡಿಎಲ್‌ಗೆ ನಿರ್ದೇಶ ನೀಡುವಂತೆ ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದರು.







