ನಲ್ಕ ಗೋಪಾಲಕೃಷ್ಣ ಆಚಾರ್ಯರ ಕೃತಿ ಬಿಡುಗಡೆ, ಭಾವನೆಗಳ ಮೂಲಕ ಕವಿತೆ ಅಭಿವ್ಯಕ್ತಿಗೊಳ್ಳಬೇಕು : ಗೋಪಾಲಕೃಷ್ಣ ಪೈ

ನಲ್ಕ ಗೋಪಾಲಕೃಷ್ಣ ಆಚಾರ್ಯರ ಕೃತಿ ಲೋಕಾರ್ಪಣೆಗೊಳಿಸುತ್ತಿರುವ ಅತಿಥಿಗಳು
ಪುತ್ತೂರು: ಕವಿತೆ ಮನಸ್ಸಿನ ಒಳಗಿಂದ ಬರಬೇಕು. ಭಾವನೆಗಳ ಮೂಲಕ ಕವಿತೆ ಅಭಿವ್ಯಕ್ತಿಗೊಳ್ಳಬೇಕು. ಆಗ ಮಾತ್ರ ಯಾವುದೇ ಕವಿತೆ ಓದುಗನ ಮನಸ್ಸು ಮುಟ್ಟುತ್ತದೆ. ಹೃದಯ ತಟ್ಟುತ್ತದೆ. ಸಾಮಾಜಿಕ ಸಂದರ್ಭಗಳ ಪ್ರಭಾವವೂ ಕವಿತೆ ಹುಟ್ಟಲು ಕಾರಣವಾಗುತ್ತದೆ ಎಂದು ಹಿರಿಯ ಸಾಹಿತಿ ಬಿ. ಗೋಪಾಲಕೃಷ್ಣ ಪೈ ಹೇಳಿದರು. ಅವರು ನಿವೃತ್ತ ಬ್ಯಾಂಕ್ ಉದ್ಯೋಗಿ ನಲ್ಕ ಗೋಪಾಲಕೃಷ್ಣ ಆಚಾರ್ಯರ ‘‘ಮಲ್ಲಿಗೆ ಮಾಲೆ" ಮತ್ತು ‘‘ಹರಿವು - ತಿಳಿವು" ಕವನ ಸಂಕಲನಗಳ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ತನ್ನ ಸಹಪಾಠಿ ನಲ್ಕ ಗೋಪಾಲಕೃಷ್ಣ ಆಚಾರ್ಯರಿಗೆ ಪ್ರಾಥಮಿಕ ಶಾಲಾ ಹಂತದಲ್ಲಿ ಕನ್ನಡ ಪಂಡಿತರು ಮಾಡಿದ ಪಾಠ ಅವರ ಮೇಲಿನ ಸಾಹಿತ್ಯ ಪ್ರಭಾವಕ್ಕೆ ಕಾರಣವಾಗಿದೆ ಎಂದ ಅವರು ಬ್ಯಾಂಕ್ ಉದ್ಯೋಗದಲ್ಲಿದ್ದರೂ ಸದಾ ಸಾಹಿತ್ಯದ ಒಲವು ತೋರುತ್ತಿದ್ದ ನಲ್ಕ ಗೊಪಾಲಕೃಷ್ಣ ಆಚಾರ್ಯ ತನ್ನ ಅಧ್ಯಯನ ಶೀಲತೆ ಮತ್ತು ಓದುವ ಆಸಕ್ತಿಯಿಂದ ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಕವಿತೆ ಬರೆಯುವುದು ಇವರಿಗೆ ಅಚ್ಚುಮೆಚ್ಚಿನ ಹವ್ಯಾಸವಾಗಿ ರೂಢಿಯಾಯಿತು ಎಂದು ಹೇಳಿದರು. ‘ಮಲ್ಲಿಗೆ ಮಾಲೆ’ ಕೃತಿ ಬಿಡುಗಡೆ ಮಾಡಿದ ವಿದ್ವಾನ್ ಎಸ್.ಬಿ. ಖಂಡಿಗೆ ಮಾತನಾಡಿ ಈ ಕವನ ಸಂಕಲನದಲ್ಲಿರುವ ಆಯ್ದ ಕವಿತೆಗಳನ್ನು ಪ್ರಾಥಮಿಕ ಶಾಲಾ ಕನ್ನಡ ಪಠ್ಯ ಪುಸ್ತಕದಲ್ಲಿ ಸೇರ್ಪಡೆಗೊಳಿಸುವಷ್ಟು ಅರ್ಹತೆನ್ನು ಪಡೆದಿವೆ. ಈ ಕವನ ಸಂಕಲನದಲ್ಲಿ ಎಲ್ಲ ವಿಚಾರಗಳನ್ನು ಕವಿತೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
‘ಹರಿವು - ತಿಳಿವು’ ಸಂಕಲನವನ್ನು ಬಿಡುಗಡೆಗೊಳಿಸಿದ ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಡಾ ಯು.ಕೆ. ನಾಯ್ಕ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿನ ಸಾಹಿತ್ಯದ ಆಸಕ್ತಿಯೇ ನಲ್ಕ ಗೋಪಾಲಕೃಷ್ಣ ಆಚಾರ್ಯರಿಗೆ ಕವಿತಾ ಸೂರ್ತಿಯನ್ನು ಮತ್ತು ಸಾಹಿತ್ಯದ ಆಸಕ್ತಿಯನ್ನು ಮೂಡಿಸಿದೆ ಎಂದರು. ನಿವೃತ್ತ ಪ್ರಾಂಶುಪಾಲ ಪ್ರೊ ಡಿ.ಎಸ್. ಭಟ್, ನಿವೃತ್ತ ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ ಶುಭಾಶಂಸನೆಗೈದರು. ಕೃತಿಕಾರ ನಲ್ಕ ಗೋಪಾಲಕೃಷ್ಣ ಆಚಾರ್ಯ ಸ್ವಾಗತಿಸಿ, ಪುತ್ತೂರು ಉಮೇಶ್ ನಾಯಕ್ ವಂದಿಸಿದರು. ಚಿದಾನಂದ ಕಾಮತ್ ಕಾಸರಗೋಡು ಕಾರ್ಯಕ್ರಮ ನಿರ್ವಹಿಸಿದರು.
ಸಾಹಿತಿ ಬಿ. ಗೋಪಾಲಕೃಷ್ಣ ಪೈ ಮಾತನಾಡುತ್ತಿರುವುದು.







