ರಾಜ್ಯದಲ್ಲಿ ಗೂಂಡಾ ಸರ್ಕಾರ, ರೈತ ವಿರೋಧಿ ಸರ್ಕಾರವನ್ನು ತಕ್ಷಣ ವಜಾಗೊಳಿಸಿ- ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ ಆರೋಪ

ರೈತ ಸಂಘದ ವತಿಯಿಂದ ಮಿನಿ ವಿಧಾನ ಸೌಧದ ಮುಂಬಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯ ಕಾರ್ಯದರ್ಶಿ ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ ಮಾತನಾಡುತ್ತಿರುವುದು
ರ್ಯತ ಸಂಘದ ಮುಖಂಡ ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ ಆರೋಪ
ಪುತ್ತೂರು: ನ್ಯಾಯಯುತ ಹೋರಾಟ ನಡೆಸುತ್ತಿರುವ ರೈತರ ಮೇಲೆ ಧೌರ್ಜನ್ಯ ನಡೆಸಿದ ರಾಜ್ಯ ಸರ್ಕಾರದ ವರ್ತನೆಯು ಖಂಡನೀಯವಾಗಿದ್ದು, ರಾಜ್ಯದಲ್ಲಿ ಗೂಂಡಾ ಸರ್ಕಾರವಿದೆ. ರೈತ ವಿರೋಧಿಯಾದ ಈ ಸರ್ಕಾರವನ್ನು ತಕ್ಷಣವೇ ವಜಾಗೊಳಿಸಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಬೇಕು ಎಂದು ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಸಿ. ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ ಆರೋಪಿಸಿದರು. ಅವರು ಶನಿವಾರ ರೈತ ಸಂಘ ಹಸಿರು ಸೇನೆ ದ.ಕ. ಜಿಲ್ಲಾ ಸಮಿತಿ ವತಿಯಿಂದ ಪುತ್ತೂರಿನಲ್ಲಿ ನಡೆದ ಮುಖ್ಯ ರಸ್ತೆಯಲ್ಲಿ ಮೌನ ರ್ಯಾಲಿ ನಡೆಸಿ ಬಳಿಕ ಮಿನಿ ವಿಧಾನ ಸೌಧದ ಮುಂಬಾಗದಲ್ಲಿ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಕಳೆದ 2 ವರ್ಷಗಳಿಂದ ಭೀಕರ ಬರಗಾಲವನ್ನು ಎದುರಿಸುತ್ತಿರುವ ಬಯಲು ಸೀಮೆಯ ಜಿಲ್ಲೆಯ ರೈತರು ಶಾಶ್ವತ ನೀರಾವರಿ ಯೋಜನೆಗೆ ಒತ್ತಾಯಿಸಿ ಮಾ.3ರಂದು ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕುವ ಹಂತದಲ್ಲಿದ್ದಾಗ ಸರ್ಕಾರವು ವಿನಾ ಕಾರಣ ಪೊಲೀಸ್ ಮೂಲಕ ಅಮಾಯಕ ರೈತರ ಮೇಲೆ ಲಾಠಿ ಪ್ರಹಾರ ನಡೆಸಿ ಗಾಯಗೊಳಿಸಿ ದೌರ್ಜನ್ಯಗೊಳಿಸಿದೆ. ಈ ಮೂಲಕ ರೈತರ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡಿದೆ. ಆದರೆ ಇದರಿಂದ ರೈತರು ಕಂಗೆಟ್ಟಿಲ್ಲ. ಲಾಠಿ ಏಟು ನೀಡುವ ಮೂಲಕ ರೈತ ಧಂಗೆಗೆ ಸರ್ಕಾರ ನಾಂದಿ ಹಾಡಿದೆ. ಅನ್ನದಾತನಿಗೆ ದೌರ್ಜನ್ಯ ಎಸಗಿದ ಸರ್ಕಾರಕ್ಕೆ ವಿನಾಶ ಕಾದಿದೆ ಎಂದು ಎಚ್ಚರಿಸಿದರು. ಪ್ರತಿಭಟನಾ ಸಭೆಗೆ ಮೊದಲು ಪುತ್ತೂರಿನ ಮುಖ್ಯ ರಸ್ತೆಯಲ್ಲಿ ಮೌನ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಬಸ್ಸು ನಿಲ್ದಾಣದ ಬಳಿಯಲ್ಲಿ 2 ನಿಮಿಷ ರಸ್ತೆ ತಡೆ ನಡೆಸಿದರು. ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಬಿ.ಶ್ರೀಧರ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈಶ್ವರ ಭಟ್ ಬಡಿಲ, ಜಿಲ್ಲಾ ಉಪಾಧ್ಯಕ್ಷ ಧರ್ಣಪ್ಪ ಗೌಡ ಇಡ್ಯಾಡಿ, ರೈತ ಮುಖಂಡ ಮುರುವ ಮಹಾಬಲ ಭಟ್ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ರೈತ ಸಂಘದ ವತಿಯಿಂದ ಪುತ್ತೂರು ಬಸ್ಸು ನಿಲ್ದಾಣದ ಬಳಿಯಲ್ಲಿ ರಸ್ತೆ ತಡೆ ನಡೆಸುತ್ತಿರುವುದು






